ರಾಜ್ಯ ಡಿಜಿ ಐಜಿಪಿಯಾಗಿ ಅಲೋಕ್ ಮೋಹನ್ ನೇಮಕ
ಬೆಂಗಳೂರು, ಆಗಸ್ಟ್ 5: ಕರ್ನಾಟಕ ರಾಜ್ಯದ ಪೊಲೀಸ್ ಡಿಜಿ ಐಜಿಪಿಯಾಗಿ ಈಗಾಗಲೇ ನಿಯೋಜನೆಗೊಂಡಿರುವ ಅಲೋಕ್ ಮೋಹನ್ ಅವರನ್ನು ಆ ಹುದ್ದೆಗೆ ಅವರನೇ ನೇಮಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈಗಾಗಲೇ ಅಲೋಕ್ ಮೋಹನ್ ಅವರಿಗೆ ಡಿಜಿ & ಐಜಿಪಿ ಹುದ್ದೆ ಹೆಚ್ಚುವರಿಯಾಗಿ ನೀಡಲಾಗಿತ್ತು. ಆದರೆ ಆ ಹುದ್ದೆಯನ್ನು ಈಗ ಖಾಯಂಗೊಳಿಸಲಾಗಿದೆ. ಆದರೆ ಮತ್ತೊಂದು ಹುದ್ದೆಯಾದ ಫೈರ್ & ಎಮರ್ಜೆನ್ಸಿ ಡಿಜಿ ಸ್ಥಾನದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಬಿಹಾರ ಮೂಲದ ಡಾ. ಅಲೋಕ್ ಮೋಹನ್ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರು 1987ನೇ ಬ್ಯಾಚ್‌ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದು, 36 ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸುತ್ತಿದ್ದಾರೆ. ಅಗ್ನಿಶಾಮಕ ದಳ, ತುರ್ತು ಸೇವೆಗಳ ಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕಾರಾಗೃಹ ಡಿಜಿಪಿ, ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತ, ಎಸಿಬಿ ಎಡಿಜಿಪಿ ಸೇರಿದಂತೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ. 2025ರ ಏಪ್ರಿಲ್ನಲ್ಲಿ ನಿವೃತ್ತರಾಗಲಿದ್ದಾರೆ.
ಸೇವಾ ಹಿರಿತನದ ಆಧಾರದ ಮೇಲೆ 87ನೇ ಬ್ಯಾಚ್‌ನ ಅಧಿಕಾರಿ ಹಾಗೂ ರಾಜ್ಯ ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕದಳದ ಮುಖ್ಯಸ್ಥರಾಗಿದ್ದ ಅಲೋಕ್ ಮೋಹನ್ ಅವರನ್ನು ರಾಜ್ಯ ಪೊಲೀಸ್ ಡಿಜಿ ಮತ್ತು ಐಜಿಪಿಯಾಗಿ ಆಯ್ಕೆ ಮಾಡಲಾಗಿತ್ತು. ಮೇ 22 ರಂದು ಇವರು ಅಧಿಕಾರ ವಹಿಸಿಕೊಂಡಿದ್ದರು.
ಬಿಹಾರ ರಾಜ್ಯದ ಪಾಟ್ನಾ ಮೂಲದವರಾದ ಡಾ. ಅಲೋಕ್ ಮೋಹನ್, 1965ರ ಏಪ್ರಿಲ್ 18ರಂದು ಜನಿಸಿದರು. ಉತ್ತರಾಖಂಡದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಎಸ್‌ಸಿ, ಭಾರತೀಯ ಆಂತರಿಕ ಭದ್ರತೆ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದುಕೊಂಡಿದ್ದಾರೆ.
ಕರ್ನಾಟಕದ ಕರಾವಳಿ, ಉತ್ತರ ಕರ್ನಾಟಕ ಭಾಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅಲೋಕ್ ಮೋಹನ್, ಸಿಐಡಿ ಡಿಜಿಪಿ, ಬೆಂಗಳೂರು ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ, ಬಳಿಕ ಮಂಗಳೂರು ಪಶ್ಚಿಮ ವಲಯ ಐಜಿಪಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಎಡಿಜಿಪಿ ಆಡಳಿತ ಹಾಗೂ ಕಾರಾಗೃಹ ಮತ್ತು ಅಗ್ನಿಶಾಮಕ ದಳ ಡಿಜಿಪಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ಈ ಹಿಂದೆ ರಾಜ್ಯ ಪೊಲೀಸ್ ಮುಖ್ಯಸ್ಥರಾಗಿದ್ದ ಪ್ರವೀಣ್ ಸೂದ್ ಅವರು ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರಾಗಿ ನೇಮಕಗೊಂಡ ಬಳಿಕ ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಡಾ.ಅಲೋಕ್ ಮೋಹನ್ ಅವರಿಗೆ ಹೆಚ್ಚುವರಿ ಹೊಣೆಯಾಗಿ ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ನೇಮಕ ಮಾಡಿತ್ತು. ಇದೀಗ ಅದೇ ಹುದ್ದೆಯನ್ನು ಮುಂದುವರೆಸಿ ರಾಜ್ಯ ಸರ್ಕಾರ ಆದೇಶಿಸಿದೆ.











Click it and Unblock the Notifications