Ambulance Scam: ಆಸ್ಪತ್ರೆ ಸೇರಲು 06 ಗಂಟೆ 06 ಆಂಬ್ಯುಲೆನ್ಸ್ ಬದಲಿಸಿದ ರೋಗಿ, ಏನಿದು ವ್ಯಥೆ?
ಬೆಂಗಳೂರು, ಆಗಸ್ಟ್ 19: ರಾಜ್ಯ ಸರ್ಕಾರ ಎಂತಹದ್ದೇ ಅನಾರೋಗ್ಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೆರವಾಗಲು ಅನುಕೂಲವಾಗುವಂತೆ ತುರ್ತು ಸೇವೆಗೆ ಆಂಬ್ಯುಲೆನ್ಸ್ ಸೇವೆ ಜಾರಿಗೆ ತಂದಿದೆ. ಆದರೆ ದುರದೃಷ್ಟವಶಾತ್ '108 ಆರೋಗ್ಯ ಕವಚ ಆಂಬ್ಯುಲೆನ್ಸ್‌ಗಳೇ' ಇದೀಗ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿವೆ. ಹೃದಯಾಘಾತದಂತಹ ಸಂದರ್ಭದಲ್ಲೂ ಅನಾರೋಗ್ಯ ವ್ಯಕ್ತಿಗೆ ಆಂಬ್ಯುಲೆನ್ಸ್ ಚಾಲಕರು ಕರುಣೆ ತೋರಿಸದ ಅಮಾನವೀಯ ಘಟನೆ ನಡೆದಿದೆ ಎಂದು 'ಡಿಎಚ್' ವರದಿ ಮಾಡಿದೆ.
108 ಆರೋಗ್ಯ ಕವಚ ಆಂಬ್ಯುಲೆನ್ಸ್ ಕಾರ್ಯಾಚರಣೆಯಲ್ಲಿ ಲೋಪಗಳು ಕಂಡು ಬಂದಿವೆ. ಜನರ ಜೀವ ಉಳಿಸಬೇಕಾದ ಇದೇ ಆಂಬ್ಯುಲೆನ್ಸ್‌ಗಳು, ಆಂಬ್ಯುಲೆನ್ಸ್ ಚಾಲಕರೇ ಅಮಾಯಕ ಜೀವಗಳ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಹೃದಯಾಘಾತದಂತಹ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗೆ ಸಕಾಲದಲ್ಲಿ ಆಂಬ್ಯುಲೆನ್ಸ್ ಸಹಾಯ ದೊರೆತಿಲ್ಲ.

ಎಲ್ಲಕ್ಕೂ ಮಿಗಿಲಾಗಿ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಹೃದಯಾಘಾತಕ್ಕೆ ಈಡಾದ ವ್ಯಕ್ತಿಗೆ ಒಂದು ಘಂಟೆ ನಂತರ ಆಂಬ್ಯುಲೆನ್ಸ್ ಸಿಕ್ಕಿದೆ. ಅಲ್ಲಿಂದ ಜಿಲ್ಲಾಸ್ಪತ್ರೆಗೆ ಮೊದಲು ಆ ವ್ಯಕ್ತಿಯನ್ನು ಸಾಗಿಸಲಾಗಿದೆ. ಅಲ್ಲಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ ಬರಬೇಕಾದರೆ ಆ ವ್ಯಕ್ತಿ ಮತ್ತು ಕುಟುಂಬದವರು ಬರೋಬ್ಬರಿ 06 ಆಂಬ್ಯುಲೆನ್ಸ್ ಗಳನ್ನು ಬದಲಾಯಿಸಬೇಕಾಯಿತು.
ಅಚ್ಚರಿ ಎನಿಸಿದರೂ ಆಂಬ್ಯುಲೆನ್ಸ್ ವಿರುದ್ಧ ಇದೊಂದು ಗಂಭೀರ ಆರೋಪ ರಾಜ್ಯದಲ್ಲಿ ಕೇಳಿ ಬಂದಿದೆ. ಈ ಕುರಿತು ರಾಜ್ಯ ಆರೋಗ್ಯ ಇಲಾಖೆ, ಸಂಬಂಧಿಸಿದ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ಜೊತೆಗೆ ಈ ರೀತಿ ಅಮಾನವೀಯವಾಗಿ ವರ್ತಿಸುವ ಆಂಬ್ಯುಲೆನ್ಸ್ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಸ್ಥಳದಲ್ಲಿ ಆಗಿದ್ದೇನು? ಇಲ್ಲಿದೆ ವಿವರಣೆ
ಕಳೆದ ತಿಂಗಳು ಜುಲೈ 19 ರಂದು ಚಿತ್ರದುರ್ಗದಲ್ಲಿ ವ್ಯಕ್ತಿ ಸೈಯದ್ ಇಫ್ತಿಕಾರ್ ಅವರು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಇಂತಹ ಗಂಭೀರ ಕಾಯಿಲೆಗೆ ತುತ್ತಾದ ನಂತರ 06 ಗಂಟೆಗಳಲ್ಲಿ ಆರು ಆಂಬ್ಯುಲೆನ್ಸ್‌ಗಳಲ್ಲಿ ರೋಗಿಯನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ, ನಂತರ ಅಲ್ಲಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ರವಾನಿಸಲಾಗಿದೆ.
ಅನಾರೋಗ್ಯ ಪೀಡಿತ ವ್ಯಕ್ತಿ ಸಹೋದರ ಸೈಯದ್ ಮುಮ್ತಾಜ್ ಮತ್ತು ಅವರ ಸಂಬಂಧಿಕರು ಚಿತ್ರದುರ್ಗದಲ್ಲಿ ಕನಿಷ್ಠ ಒಂದು ಗಂಟೆ ಕಾದ ಬಳಿಕವೇ ಅವರಿಗೆ 108 ಸಹಾಯವಾಣಿ ಸಂಪರ್ಕಿಸಲು ಸಾಧ್ಯವಾಗಿದೆ. ಅಲ್ಲಿಯವರೆಗೆ ಕರೆ ಮಾಡುತ್ತಲೇ ಇದ್ದಾರೆ.
20 ಕಿಮೀಗಿಂತ ಹೆಚ್ಚಿನ ದೂರ ಹೋಗಲ್ಲ
ಸಹಾಯವಾಣಿಗೆ ಕರೆ ಮಾಡಿದ ಆರಂಭದಲ್ಲಿ ಯಾವುದೇ ಸೇವೆಗಳನ್ನು ಒದಗಿಸಲಾಗುವುದಿಲ್ಲ ಎಂದು ಹೇಳಲಾಗಿದೆ. ನಂತರ ಮನವಿ ಮಾಡಿದ ಬಳಿಕ ರಾತ್ರಿ ಸುಮಾರು 11.30 ಹೊತ್ತಿಗೆ ಒಂದು ಆಂಬ್ಯುಲೆನ್ಸ್ ಅವರಿದ್ದಲ್ಲಿಗೆ ಬಂದಿದೆ. ಈ ವೇಳೆ ನಾವು 20 ಕಿಮೀಗಿಂತ ಹೆಚ್ಚಿನ ದೂರ ಹೋಗುವುದಿಲ್ಲ ಎಂದು ಆಂಬ್ಯುಲೆನ್ಸ್ ರೋಗಿ ಪೋಷಕರಿಗೆ ತಿಳಿಸಿದ್ದಾರೆ. ಮತ್ತೊಂದು ವಾಹನ ಬರುವವರೆಗೂ ನೀವು ಕಾಯಬೇಕು ಎಂದು ಹೆದ್ದಾರಿಯಲ್ಲಿಯೇ ರೋಗಿ ಸೇರಿದಂತೆ ಕುಟುಂಬಸ್ಥರನ್ನು ಕಾಯಿಸಿದ್ದಾರೆ ಎಂದು ಕುಟುಂಬಸ್ಥರು ವಿವರಿಸಿದ್ದಾರೆ.

ಚಿತ್ರದುರ್ಗದ ಜಿಲ್ಲಾಸ್ಪತ್ರೆಯಿಂದ 04 ಆಂಬ್ಯುಲೆನ್ಸ್ ತುಮಕೂರಿಗೆ (ಸುಮಾರು 82 ಕಿ.ಮೀ) ಸೈಯದ್ ಇಫ್ತಿಕಾರ್ ಅವರನ್ನು ಸಾಗಿಸಲಾಗಿದೆ. ಅಲ್ಲಿಂದ ಮತ್ತೆ ಎರಡು ಆಂಬ್ಯುಲೆನ್ಸ್ ವಾಹನಗಳ ಮೂಲಕ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತಲುಪಲಾಗಿದೆ. ಇಷ್ಟು ತಡವಾಗಿ ಕರೆದೊಯ್ಯಲು ಆಂಬ್ಯುಲೆನ್ಸ್ ವಾನಹಗಳ ಚಾಲಕರು ನಡೆದುಕೊಂಡ ರೀತಿಯೇ ಕಾರಣವಾಗಿದೆ ಎಂದರು.
ಸಹೋದಯ ಸೈಯದ್ ಮುಮ್ತಾಜ್ ಒಂದು ಆಂಬ್ಯುಲೆನ್ಸ್ ಇಳಿದು ಮತ್ತೊಂದು ಆಂಬ್ಯುಲೆನ್ಸ್ ಹತ್ತುವ, ರೋಗಿಯನ್ನು ಬೇರೆ ಬೇರೆ ವಾಹನಗಳಿಗೆ ಸ್ಥಳಾಂತರಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ವಾಹನಗಳ ನಂಬರ್ ಪ್ಲೇಟ್ ಬೇರೆ ಬೇರೆ ಇರುವುದು ಗೊತ್ತಾಗುತ್ತದೆ. ಒಂದು ವಿಡಿಯೋದಲ್ಲಿ ಇಫ್ತಿಕಾರ್ ಮಾತನಾಡಿದ್ದು, ಇದು ನಾಲ್ಕನೇ ಆಂಬ್ಯುಲೆನ್ಸ್ ಎಂದು ಹೇಳಿರುವುದು ಕೇಳಿಸುತ್ತದೆ. ಈ ರೀತಿಯ ಬೆಳವಣಿಗೆಗೆ ಸಾರ್ವಜನಿಕ ವಲಯದಲ್ಲಿ ಖಂಡನೆ ವ್ಯಕ್ತವಾಗಿದೆ.
ತುರ್ತು ವೈದ್ಯಕೀಯ ತಂತ್ರಜ್ಞರಿಲ್ಲದ ವಾಹನಗಳು
ದೂರದ ಆಸ್ಪತ್ರೆಗಳಿಗೆ ರೋಗಿ ಸ್ಥಳಾಂತರಿಸುವಾಗ ಒಂದು ಆಂಬ್ಯುಲೆನ್ಸ್ ನಿಂದ ಮತ್ತೊಂದು ಆಂಬ್ಯುಲೆನ್ಸ್ ಗೆ ಸ್ಥಳಾಂತರಿಸುವುದನ್ನು 'ಡಬಲ್ ಡಿಸ್ಪ್ಯಾಚ್" ಎನ್ನಲಾಗುತ್ತದೆ. ರೋಗಿಗಳು ಆರೈಕೆ ದೃಷ್ಟಿಯಿಂದ ಹಾಗೂ ವೇಗವಾಗಿ ತಲುಪಲು ಹೆಚ್ಚಿನ ದೂರಕ್ಕೆ ಹೋಗಬೇಕದಲ್ಲಿ ಗರಿಷ್ಠ ಮೂರು ವರ್ಗಾವಣೆಗೆ ಅನುಮತಿ ಇದೆ. ಆದರೆ ಇಲ್ಲಿ ಯಾವುದೇ ನಿಯಮ ಪಾಲನೆ ಆಗದೇ ನಡು ರಸ್ತೆಯಲ್ಲಿ ಹೇಗೆಂದರೆ ಹಾಗೆ ರೋಗಿಗಳನ್ನು ಕಾಯಿಸಿರುವುದು ಗೊತ್ತಾಗಿದೆ.
ಇನ್ನೂ ಅನೇಕ ಆಂಬ್ಯುಲೆನ್ಸ್‌ಗಳು ತುರ್ತು ವೈದ್ಯಕೀಯ ತಂತ್ರಜ್ಞರಿಲ್ಲದೆ ಕಾರ್ಯಾಚರಣೆ ಮಾಡುತ್ತಿವೆ. ಇಂತಹ ವಾಹನಗಳಲ್ಲಿ ತೆರಳುವಾಗ ರೋಗಿಗೆ ಏನಾದರೂ ಸಂಭವಿಸಿದರೆ ಯಾರು ಹೊಣೆ. ಕುಟುಂಬಸ್ಥರು ಜೊತೆಗಿದ್ದರು ಏನು ಮಾಡಲು ಸಾಧ್ಯವಾಗುವುದಿಲ್ಲ. ಇದೇ ರೀತಿ ಆಂಬ್ಯುಲೆನ್ಸ್ ಚಾಲಕರ ನಿರ್ಲಕ್ಷ್ಯದಂತಹ ಘಟನೆಗಳು ರಾಜ್ಯದಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ. ಅವುಗಳಿಗೆ ಕಡಿವಾಣ ಹಾಕಬೇಕಿದೆ.












Click it and Unblock the Notifications