ಮಳೆ, ಭೂ ಕುಸಿತ : ಎಲ್ಲಾ ವಾಹನಗಳಿಗೆ ಶಿರಾಡಿ ಘಾಟ್ ರಸ್ತೆ ಬಂದ್
Recommended Video

ಬೆಂಗಳೂರು, ಆಗಸ್ಟ್ 21 : ಶಿರಾಡಿ ಘಾಟ್‌ನಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಬೆಂಗಳೂರು-ಮಂಗಳೂರು ಸಂಪರ್ಕಿಸುವ ಪ್ರಮುಖ ರಸ್ತೆ ಇದರಿಂದಾಗಿ ಬಂದ್ ಆಗಿದೆ.
ಸಕಲೇಶಪುರ ತಾಲೂಕಿನಲ್ಲಿ ನಿರಂತರವಾಗಿ ಸುರಿದಿರುವ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 48ರ ಬೆಂಗಳೂರು-ಮಂಗಳೂರು ಶಿರಾಡಿ ಘಾಟ್ ರಸ್ತೆಯಲ್ಲಿ ಭಾರಿ ಭೂಕುಸಿತ ಉಂಟಾಗುತ್ತಿದೆ. ಆದ್ದರಿಂದ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
'ಶಿರಾಡಿ ಘಾಟ್ ರಸ್ತೆಯಲ್ಲಿ ಮುಂದಿನ ಆದೇಶದವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ' ಎಂದು ಸಕಲೇಶಪುರ ಉಪವಿಭಾಗಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಹೇಳಿದ್ದಾರೆ.

ಸಕಲೇಶಪುರ ತಾಲೂಕಿನಲ್ಲಿ ಸತತವಾಗಿ ಸುರಿದ ಮಳೆಯಿಂದ ಈಗಾಗಲೇ ಹಲವು ಕಡೆಗಳಲ್ಲಿ ಗುಡ್ಡ ಕುಸಿತ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಕಷ್ಟಕರವಾಗಿದೆ. ಆದ್ದರಿಂದ, ರಸ್ತೆಯನ್ನು ಬಂದ್ ಮಾಡಲಾಗಿದೆ.
'ಸತತವಾದ ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಶಿರಾಡಿ ಘಾಟ್ ರಸ್ತೆ ಹಾಳಾಗಿದೆ. ಹೊಸದಾಗಿ ನಿರ್ಮಾಣ ಮಾಡಿದ ರಸ್ತೆಯ ಹಲವು ಕಡೆ ಗುಡ್ಡ ಕುಸಿದಿದೆ. ಆದ್ದರಿಂದ, ಮುಂದಿನ 3 ರಿಂದ 4 ತಿಂಗಳುಗಳ ಕಾಲ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸುವ ಪ್ರಸ್ತಾಪವಿದೆ' ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದರು.
ರಸ್ತೆಯನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ಮುಂದಿನ ಆದೇಶದ ತನಕ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿದ್ದಾರೆ.












Click it and Unblock the Notifications