Bhagavad Gita in Schools : ಪಠ್ಯದಲ್ಲಿ ಭಗವದ್ಗೀತೆ; ಯಾವ ತರಗತಿಯಿಂದ ಆರಂಭ?
ಬೆಂಗಳೂರು, ಏ. 12: ಕೋವಿಡ್ ನಿಂದ ಎರಡು ವರ್ಷ ಮಕ್ಕಳು ಕಲಿಕೆಯಿಂದ ಹಿಂದುಳಿದಿದ್ದಾರೆ. ಇದೀಗ ಶಾಲೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಮೇ. 15 ರಿಂದ ಬೇಸಿಗೆ ರಜೆ ಮುಗಿಸಿ ಶಾಲೆಗಳು ಅರಂಭವಾಗಲಿವೆ. ಈ ಬಾರಿ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯದ ಜತೆಗೆ ನೈತಿಕ ಮೌಲ್ಯ ಬೆಳೆಸುವ ಉದ್ದೇಶದಿಂದ ಭಗವದ್ಗೀತೆಯನ್ನು ಹೆಚ್ಚುವರಿ ಪಠ್ಯ ಕ್ರಮವಾಗಿ ಅಳವಡಿಸಲು ಶಿಕ್ಷಣ ಇಲಾಖೆ ಚಿಂತನೆ ಮಾಡಿದೆ.
ರಾಜ್ಯದಲ್ಲಿ ಒಂದೆಡೆ ಶಿಕ್ಷಣವನ್ನು ಕೇಸರೀಕರಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಟಿಪ್ಪು ಕುರಿತು ಪಠ್ಯದಲ್ಲಿ ಅಳವಡಿಸಿರುವ ವಿಚಾರ ರಾಜ್ಯದಲ್ಲಿ ದೊಡ್ಡ ವಿವಾದ ಎದ್ದಿತ್ತು. ಆದರೆ ಈ ಕುರಿತು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಒನ್ ಇಂಡಿಯಾ ಕನ್ನಡಕ್ಕೆ ನೀಡಿದ ಸ್ಪಷ್ಟನೆಯಿದು.
'ಮಕ್ಕಳ ಕಲಿಕೆ ಕೇವಲ ಪಠ್ಯಕ್ರಮ ಅಧ್ಯಯನ ಮತ್ತು ರ್ಯಾಂಕ್ ಗೆ ಸೀಮಿತವಾಗಿದೆ. ಮಕ್ಕಳಲ್ಲಿ ನೈತಿಕ ಮೌಲ್ಯ ಕಣ್ಮರೆಯಾಗುತ್ತಿದೆ. ಹೀಗಾಗಿ ಮಕ್ಕಳಲ್ಲಿ ಹಿರಿಯರ ಬಗ್ಗೆ ಗೌರವ, ಕಷ್ಟ ಕಾಲದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವುದು, ತಂದೆ ತಾಯಿಗೆ ಗೌರವ ಕೊಡುವುದು, ದೇಶಕ್ಕೆ ಗೌರವ ಕೊಡುವುದು ಹೀಗೆ ನಾನಾ ವಿಚಾರಗಳನ್ನು ಕಲಿಸುವ ಅಗತ್ಯ ಬಿದ್ದಿದೆ. ಅದನ್ನು ಶಿಕ್ಷಣದ ಮೂಲಕವೇ ಕಲಿಸುವ ಪ್ರಯತ್ನ ಮಾಡುತ್ತಿದ್ದೇವೆ.

ಮಕ್ಕಳಲ್ಲಿ ಮಾನವೀಯ ಹಾಗೂ ನೈತಿಕ ಪಾಠ ಹೇಳುವ ಸಲುವಾಗಿ ಭಗವದ್ಗೀತೆಯ ಆಯ್ದ ಭಾಗಗಳನ್ನು ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಸುವ ಪ್ರಯತ್ನ ಮಾಡುತ್ತಿದ್ದೇವೆ. ಈ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯೇತರ ವಿಷಯವಾಗಿ ಮಾರಲ್ ಸೈನ್ಸ್ ಅಳವಡಿಸಲಾಗುತ್ತಿದೆ. ಭಗವದ್ಗೀತೆ ಆಧಾರವಾಗಿಟ್ಟುಕೊಂಡು ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳಸುವ ಬುನಾದಿ ಹಾಕಲಾಗುತ್ತಿದೆ' ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ಯಾವ ತರಗತಿಂದ ಭಗವದ್ಗೀತೆ ಅಧ್ಯಯನ:
ಶಿಕ್ಷಣ ಇಲಾಖೆ ಉನ್ನತ ಮೂಲಗಳ ಪ್ರಕಾರ ಐದನೇ ತರಗತಿಯಿಂದಲೇ ಮಕ್ಕಳಿಗೆ ನೈತಿಕ ಪಾಠ ಮಾಡಲು ಚಿಂತನೆ ನಡೆದಿದೆ. ವಿದ್ಯಾರ್ಥಿಗಳಿಗೆ ಕಲಿಕಾ ಹಂತದಲ್ಲಿ ನೈತಿಕ ಪಾಠ ಕಲಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಈ ಪ್ರಸಕ್ತ ವರ್ಷದಿಂದಲೇ ಭಗವದ್ಗೀತೆಯನ್ನು ಸರ್ಕಾರಿ ಶಾಲೆಗಳ ಪಠ್ಯಕ್ರಮದಲ್ಲಿ ಪರಿಚಯಿಸುತ್ತಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಹೆಚ್ಚುವರಿ ಪಠ್ಯ ಮುದ್ರಣ:
ಭಗವದ್ಗೀತೆ ಆಧರಿತ ಮಾರಲ್ ಸೈನ್ಸ್ ಪಠ್ಯವನ್ನು ಸಿದ್ಧತೆ ಮಾಡಲಾಗುತ್ತಿದೆ. ಈ ಸಂಬಂಧ ಶಿಕ್ಷಣ ತಜ್ಞರು ಸಲಹೆ ನೀಡಿದ್ದು ಅದರ ಆಧಾರದ ಮೇಲೆ ಪಠ್ಯವನ್ನು ಮುದ್ರಣ ಮಾಡಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೇ ನೀಡಲಾಗುತ್ತದೆ.












Click it and Unblock the Notifications