Government Employee: ಸರ್ಕಾರಿ ನೌಕರರ ಬೇಡಿಕೆ OPS ಮರು ಜಾರಿಗೆ ದಿನಗಣನೆ ಆರಂಭ
ಬೆಂಗಳೂರು, ಮಾರ್ಚ್ 10: 7ನೇ ರಾಜ್ಯ ವೇತನ ಆಯೋಗದ ವರದಿ ಅನುಷ್ಠಾನಗೊಂಡ ಬಳಿಕ ಕರ್ನಾಟಕದ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಯಾಗಿದೆ. ಈ ಕುರಿತು ಹೋರಾಟಗಳು ನಡೆಯುತ್ತಿವೆ. ಸರ್ಕಾರಕ್ಕೆ ಮನವಿಗಳು ಸಲ್ಲಿಕೆಯಾಗಿದೆ. ಸದ್ಯ ಜಾರಿಯಲ್ಲಿರುವ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ ಒಪಿಎಸ್ ವ್ಯಾಪ್ತಿಗೆ ಎಲ್ಲಾ ಸರ್ಕಾರಿ ನೌಕರರನ್ನು ತರಬೇಕು ಎಂಬುದು ಸರ್ಕಾರಿ ನೌಕರರ ಹಕ್ಕೋತ್ತಾಯವಾಗಿದೆ.
ಕರ್ನಾಟಕದ ಕಾಂಗ್ರೆಸ್ ಪಕ್ಷ 2023ರ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿತ್ತು. 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಕಾಂಗ್ರೆಸ್ ಸರ್ಕಾರ ಒಪಿಎಸ್ ಮರು ಜಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಿ ನೌಕರರು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

ಈಗಾಗಲೇ ಕರ್ನಾಟಕ ಸರ್ಕಾರ ಮೊದಲ ಹಂತದಲ್ಲಿ 2006ರ ಏಪ್ರಿಲ್ ಪೂರ್ವ ನೇಮಕಾತಿ ಅಧಿಸೂಚನೆ ನಂತರ ನೇಮಕಗೊಂಡ ನೌಕರರು ಒಪಿಎಸ್‌ನಿಂದ ಎನ್‌ಪಿಎಸ್‌ಗೆ ಮರಳಲು ಅವಕಾಶವನ್ನು ನೀಡಿದೆ. ಈ ಆದೇಶದಿಂದ 13,500 ಸರ್ಕಾರಿ ನೌಕರರು ಈಗ ದೃಢೀಕರಣ ಪತ್ರದ ಮೂಲಕ ಒಪಿಎಸ್‌ಗೆ ಮರಳಬಹುದು. ಆದರೆ ಎಲ್ಲಾ ನೌಕರರನ್ನು ಒಪಿಎಸ್‌ಗೆ ಒಳಪಡಿಸಬೇಕು ಎಂಬುದು ಸರ್ಕಾರದ ಮುಂದೆ ಸರ್ಕಾರಿ ನೌಕರರು ಇಟ್ಟಿರುವ ಬೇಡಿಕೆಯಾಗಿದೆ.
ಹೋರಾಟದ ಗೆಲುವಿಗೆ ಒಂದೇ ಮೆಟ್ಟಿಲು ಬಾಕಿ: ಎನ್‌ಪಿಎಸ್ ನೌಕರರ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮೂಲಕ ಸರ್ಕಾರಿ ನೌಕರರು ಎನ್‌ಪಿಎಸ್‌ನಿಂದ ಒಪಿಎಸ್‌ಗೆ ಮರಳಲು ಹೋರಾಟವನ್ನು ಕೈಗೊಂಡಿದ್ದಾರೆ. ಮಾರ್ಚ್ 7ರಂದು 2025-26ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್‌ಪಿಎಸ್ ರದ್ಧತಿ ಮತ್ತು ಒಪಿಎಸ್ ಮರು ಜಾರಿ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ.
ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಮರು ಜಾರಿ ಮಾಡಲಾಗಿದೆ. ಸರ್ಕಾರಿ ನೌಕರರ ಬೇಡಿಕೆ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಯಾವ ಮಾದರಿ ಅನುಸರಿಸಲಾಗಿದೆ?. ಇದರಿಂದ ರಾಜ್ಯದ ಬೊಕ್ಕಸದ ಮೇಲೆ ಆಗುವ ಪರಿಣಾಮಗಳೇನು?, ಒಪಿಎಸ್ ಮರು ಜಾರಿ ಸಾಧ್ಯವೇ? ಮುಂತಾದ ಸಾಧ್ಯತೆಗಳ ಕುರಿತು ಪರಿಶೀಲಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ, ವರದಿ ನೀಡುವಂತೆ ಸೂಚಿಸಿದೆ.
ಕರ್ನಾಟಕ ಸರ್ಕಾರ ದಿನಾಂಕ 16/8/2024ರಲ್ಲಿ ಈ ಸಮಿತಿಯನ್ನು ಪುನರ್ ರಚಿಸಿದೆ. ಸದ್ಯದ ಮಾಹಿತಿ ಪ್ರಕಾರ ಹಳೆ ಪಿಂಚಣಿ ಯೋಜನೆ ಮರು ಜಾರಿ ಮಾಡಲು ಸಮಿತಿ ಸಹಮತ ವ್ಯಕ್ತಪಡಿಸಿದ್ದು, 15 ದಿನದಲ್ಲಿ ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ. ವರದಿಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಬೇಕಿದೆ. ಆದ್ದರಿಂದ ಒಪಿಎಸ್, ಎನ್‌ಪಿಎಸ್ ಹೋರಾಟದಲ್ಲಿ ಕೇವಲ 2 ಮೆಟ್ಟಿಲು ಬಾಕಿ ಇದೆ.
ರಾಜಸ್ಥಾನ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳು ಎನ್‌ಪಿಎಸ್‌ನಿಂದ ಒಪಿಎಸ್‌ಗೆ ಮರಳಿವೆ. ಕೆಲವು ದಿನಗಳ ಹಿಂದೆ ನಡೆದ ಸರ್ಕಾರಿ ನೌಕರರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿ ಮಾಡುತ್ತೇವೆ ಎಂದು ಸ್ಪಷ್ಟವಾದ ಭರವಸೆಯನ್ನು ನೀಡಿದ್ದಾರೆ. ಆದ್ದರಿಂದ ಸರ್ಕಾರಿ ನೌಕರರು ವಿಶ್ವಾಸದಲ್ಲಿದ್ದಾರೆ.
ಒಪಿಎಸ್ ಮರು ಜಾರಿ ಕುರಿತು ವರದಿ ನೀಡಲು ಸರ್ಕಾರ ರಚನೆ ಮಾಡಿರುವ ಸಮಿತಿಗೆ ಅಂಜುಮ್ ಪರ್ವೇಜ್ ಮುಖ್ಯಸ್ಥರು. ಸಮಿತಿಯ ಕುರಿತು ಮಾತನಾಡಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಅವರು, "ಅಂಜುಮ್ ಪರ್ವೇಜ್ ಸಮಿತಿ ಒಪಿಎಸ್ ಜಾರಿಗೊಳಿಸಲು ಶಿಫಾರಸು ಮಾಡುವ ಭರವಸೆ ಇದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಒಪಿಎಸ್ ಮರು ಜಾರಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದ್ದರಿಂದ ಒಪಿಎಸ್ ಮರು ಜಾರಿಯಾಗುವ ವಿಶ್ವಾಸವಿದೆ" ಎಂದು ಹೇಳಿದ್ದಾರೆ.
ಸರ್ಕಾರಿ ನೌಕರರಿಗೆ ಪ್ರಯೋಜನಗಳು: ಹಾಗಾದರೆ ಕರ್ನಾಟಕದ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೆ ಏಕೆ ಒತ್ತಾಯಿಸುತ್ತಿದ್ದಾರೆ ಎಂಬ ಅಂಶಗಳನ್ನು ಗಮನಿಸೋಣ
* ಒಪಿಎಸ್ ಮರು ಜಾರಿಯಾದರೆ ಸರ್ಕಾರಿ ನೌಕರರು ನಿವೃತ್ತಿ ವೇಳೆ ಹೊಂದಿದ್ದ ಮೂಲ ವೇತನದ ಶೇ 50ರಷ್ಟು ಲಭ್ಯವಾಗುತ್ತದೆ.
* ತುಟ್ಟಿಭತ್ಯೆ, ಸೇವಾ ಅವಧಿಯ ಕೊನೆಯ 10 ತಿಂಗಳ ಸರಾಸರಿಗಳಿಕೆ ಎರಡರಲ್ಲಿ ಒಂದನ್ನು ಪಡೆಯಲು ಅರ್ಹರಾಗುತ್ತಾರೆ.
* ಹಳೆ ಪಿಂಚಣಿ ಯೋಜನೆಯಲ್ಲಿ ಉದ್ಯೋಗಿಗಳು ಪಿಂಚಣಿಗೆ ಕೊಡುಗೆ ನೀಡಬೇಕಿಲ್ಲ.
* ನಿವೃತ್ತಿಯ ಬಳಿಕ ಕುಟುಂಬಕ್ಕೆ ಪಿಂಚಣಿ ಖಾತರಿ ಇರುತ್ತದೆ.
* ನಿವೃತ್ತರು ಮೃತಪಟ್ಟರೆ ಅವಲಂಬಿತರಿಗೆ ಪಿಂಚಣಿ ಮುಂದುವರೆಯುತ್ತದೆ.
ಈ ಎಲ್ಲಾ ಕಾರಣದಿಂದ ಸರ್ಕಾರಿ ನೌಕರರು ಒಪಿಎಸ್ ಮರು ಜಾರಿಗೆ ಪಟ್ಟು ಹಿಡಿದಿದ್ದಾರೆ. ಕರ್ನಾಟಕ ಮಾತ್ರವಲ್ಲ ವಿವಿಧ ರಾಜ್ಯಗಳ ಸರ್ಕಾರಿ ನೌಕರರು, ಕೇಂದ್ರ ಸರ್ಕಾರಿ ನೌಕರರು ಸಹ ಹಳೆ ಪಿಂಚಣಿ ಯೋಜನೆಯನ್ನು ಪುನಃ ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.
ಕರ್ನಾಟಕ ಸರ್ಕಾರ ಒಪಿಎಸ್ ಮರು ಜಾರಿ ಕುರಿತು ವರದಿ ನೀಡಲು ರಚನೆ ಮಾಡಿರುವ ಸಮಿತಿ ವರದಿಯ ಬಳಿಕ ಮುಂದಿನ ತೀರ್ಮಾನವನ್ನು ಕೈಗೊಳ್ಳಲಿದೆ. ರಾಜ್ಯದ ಎಲ್ಲಾ ಸರ್ಕಾರಿ ನೌಕರರನ್ನು ಪುನಃ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು ಎಂಬುದು ಸರ್ಕಾರದ ಮುಂದಿಟ್ಟಿರುವ ಪ್ರಮುಖ ಬೇಡಿಕೆಯಾಗಿದೆ.
ಸಮಿತಿ ತನ್ನ ವರದಿಯಲ್ಲಿ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಏಕೆ ಬೇಡ. ಈಗಾಗಲೇ ಎನ್‌ಪಿಎಸ್ ಖಾತೆ ಸೇರಿರುವ ಹಣವನ್ನು ನೌಕರರ ಖಾತೆಗೆ ವರ್ಗಾವಣೆ ಮಾಡುವುದು ಹೇಗೆ?, ಒಪಿಎಸ್ ಮರು ಜಾರಿಯಾದರೆ ಸರ್ಕಾರಕ್ಕೆ ಆಗುವ ನಷ್ಟವೇನು?, ಒಪಿಎಸ್ ಸರ್ಕಾರಿ ನೌಕರರಿಗೆ ಹೇಗೆ ಉಪಯೋಗ? ಎಂದು ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಿದೆ. ಬಳಿಕ ಸರ್ಕಾರ ಒಪಿಎಸ್ ಮರು ಜಾರಿಗೊಳಿಸುವ ಕುರಿತು ಅಂತಿಮ ಆದೇಶವನ್ನು ಹೊರಡಿಸಲಿದೆ.












Click it and Unblock the Notifications