2ನೇ ಹಂತದ ಚುನಾವಣೆ : ಬಿಜೆಪಿ ಕ್ಷೇತ್ರಗಳ ಮೇಲೆ ಮೈತ್ರಿಕೂಟದ ಕಣ್ಣು
Recommended Video
ಬೆಂಗಳೂರು, ಏಪ್ರಿಲ್ 21 : 2ನೇ ಹಂತದ ಲೋಕಸಭಾ ಚುನಾವಣೆಗೆ ಕರ್ನಾಟಕ ಸಜ್ಜಾಗಿದೆ. ಭಾನುವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು, ಏಪ್ರಿಲ್ 23ರ ಮಂಗಳವಾರ ಮತದಾನ ನಡೆಯಲಿದೆ.
14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 2.43 ಕೋಟಿ ಮತದಾರರು 237 ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲಿದ್ದಾರೆ. 28,022 ಮತಗಟ್ಟೆಗಳನ್ನು ಚುನಾವಣಾ ಆಯೋಗ ಸ್ಥಾಪನೆ ಮಾಡಲಿದೆ.
ಮೊದಲ ಹಂತಕ್ಕಿಂತ 2ನೇ ಹಂತದ ಚುನಾವಣೆ ಹಲವು ಕಾರಣಗಳಿಗೆ ಕುತೂಹಲಕ್ಕೆ ಕಾರಣವಾಗಿದೆ. 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿಜೆಪಿಯ ಪ್ರಾಬಲ್ಯವೇ ಹೆಚ್ಚಿದೆ. 14 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಲ್ಲಿ ಬಿಜೆಪಿಯ ಹಾಲಿ ಸಂಸದರು ಇದ್ದಾರೆ.

ಎರಡನೇ ಹಂತದ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಬಿಜೆಪಿಗೆ ಶಾಕ್ ನೀಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ತಂತ್ರ ರೂಪಿಸಿದೆ. ಇಬ್ಬರು ಕೇಂದ್ರ ಸಚಿವರು, ಲೋಕಸಭೆಯ ಕಾಂಗ್ರೆಸ್ ನಾಯಕರು 2ನೇ ಹಂತದ ಚುನಾವಣಾ ಕಣದಲ್ಲಿದ್ದಾರೆ.
ಎಲ್ಲೆಲ್ಲಿ ಚುನಾವಣೆ? : ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ರಾಯಚೂರು, ಗುಲ್ಬರ್ಗ, ಬೀದರ್, ಕೊಪ್ಪಳ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ.
ಯಡಿಯೂರಪ್ಪ, ಸಿದ್ದರಾಮಯ್ಯ : ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಷ್ಠೆ 2ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಅಡಗಿದೆ.
ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗದಿಂದ ಕಣದಲ್ಲಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕೊಪ್ಪಳ ಮತ್ತು ಬಾಗಲಕೋಟೆ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವುದು ಪರಿಷ್ಠೆಯ ಪ್ರಶ್ನೆಯಾಗಿದೆ.
ಕಣದಲ್ಲಿರುವ ಪ್ರಮುಖರು : 2ನೇ ಹಂತದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ (ಗುಲ್ಬರ್ಗ), ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ (ಉತ್ತರ ಕನ್ನಡ), ಬಿ.ವೈ.ರಾಘವೇಂದ್ರ (ಶಿವಮೊಗ್ಗ), ಮಧು ಬಂಗಾರಪ್ಪ (ಶಿವಮೊಗ್ಗ), ಕೇಂದ್ರ ಸಚಿವ ರಮೇಶ್ ಜಿಗಜಿಣಗಿ (ವಿಜಯಪುರ), ವಿ.ಎಸ್.ಉಗ್ರಪ್ಪ (ಬಳ್ಳಾರಿ), ಜಿ.ಎಂ.ಸಿದ್ದೇಶ್ವರ (ದಾವಣಗೆರೆ), ಈಶ್ವರ ಖಂಡ್ರೆ (ಬೀದರ್).
ಪ್ರಮುಖ ಕ್ಷೇತ್ರಗಳು : ಗುಲ್ಬರ್ಗ, ಶಿವಮೊಗ್ಗ, ಉತ್ತರ ಕನ್ನಡ, ಬಳ್ಳಾರಿ, ದಾವಣಗೆರೆ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ.
ಇಬ್ಬರು ಮಹಿಳಾ ಅಭ್ಯರ್ಥಿಗಳು : ಬಾಗಲಕೋಟೆ ಕ್ಷೇತ್ರದಿಂದ ವೀಣಾ ಕಾಶಪ್ಪನವರ ಮತ್ತು ವಿಜಯಪುರ ಕ್ಷೇತ್ರದಿಂದ ಸುನೀತಾ ದೇವಾನಂದ ಚೌವ್ಹಾಣ್ ಅವರು ಕಣದಲ್ಲಿದ್ದಾರೆ.
ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಗೆಲ್ಲುವ ಉತ್ಸಾಹ : 14 ಕ್ಷೇತ್ರಗಳ ಪೈಕಿ ಚಿಕ್ಕೋಡಿ, ರಾಯಚೂರು, ಗುಲ್ಬರ್ಗ, ಬಳ್ಳಾರಿ ಕ್ಷೇತ್ರಗಳಲ್ಲಿ ಹಾಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನುಗಳಿಸಬೇಕು ಎಂದು ಪಕ್ಷ ತಂತ್ರ ರೂಪಿಸಿದೆ.
ಜೆಡಿಎಸ್‌ಗೆ ನೆಲೆ ಇಲ್ಲ : ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಜೆಡಿಎಸ್ ಸರ್ಕಾರ ನಡೆಸುತ್ತಿದೆ. ಆದರೆ, 2ನೇ ಹಂತದ ಚುನಾವಣೆ ನಡೆಯಲಿರುವ 14 ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷಕ್ಕೆ ನೆಲೆ ಇಲ್ಲ. ವಿಜಯಪುರ ಕ್ಷೇತ್ರವನ್ನು ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಸುನೀತಾ ದೇವಾನಂದ ಚೌವ್ಹಾಣ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ.
ನರೇಂದ್ರ ಮೋದಿ ಸಮಾವೇಶ : 14 ಲೋಕಸಭಾ ಕ್ಷೇತ್ರಗಳ ಪೈಕಿ ಪ್ರಧಾನಿ ನರೇಂದ್ರ ಮೋದಿ ಅವರು ಧಾರವಾಡ, ಕಲಬುರಗಿ, ಚಿಕ್ಕೋಡಿ, ಬಾಗಲಕೋಟೆ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರವನ್ನು ನಡೆಸಿದ್ದಾರೆ.
ಡಾ.ಉಮೇಶ್ ಜಾಧವ್ ಗೆಲ್ತಾರಾ? : 14 ಕ್ಷೇತ್ರಗಳ ಪೈಕಿ ಗುಲ್ಬರ್ಗ ಕ್ಷೇತ್ರ ಬಾರಿ ಕುತೂಹಲ ಮೂಡಿಸಿದೆ. ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಡಾ.ಉಮೇಶ್ ಜಾಧವ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಗುಲ್ಬರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಜಯಗಳಿಸಲಿದ್ದಾರೆಯೇ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications