ಅಜ್ಜಾವರ ಗ್ರಾಮ ಪಂಚಾಯತ್‌ನಲ್ಲಿ ಕಳ್ಳತನ, ದಾಖಲೆ ಚೆಲ್ಲಾಪಿಲ್ಲಿ
ಸುಳ್ಯ, ಅಕ್ಟೋಬರ್ 27 : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮ ಪಂಚಾಯತ್‍ನ ಬೀಗ ಒಡೆದು ಕಳ್ಳರು ಸಿಕ್ಕಷ್ಟು ಹಣ ದೋಚಿ ಹಾಗೂ ದಾಖಲೆ ಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ ಘಟನೆ ಆದಿತ್ಯವಾರ ತಡರಾತ್ರಿ ನಡೆದಿದೆ.
ಸೋಮವಾರ ಬೆಳಿಗ್ಗೆ ಪಂಚಾಯತ್‍ನ ಸಿಬ್ಬಂದಿಗಳು ಬಂದ ಮೇಲಷ್ಟೆ ವಿಷಯ ಗಮನಕ್ಕೆ ಬಂದಿದೆ. ಪಂಚಾಯತ್ ಎದುರಿನ ಬೀಗವನ್ನು ಕಬ್ಬಿಣದ ಸರಪಳಿಯನ್ನು ಬಳಸಿ ತುಂಡು ಮಾಡಿದ ಕಳ್ಳರು ಒಳಹೋಗಿ ಕಪಾಟಿನ ಬೀಗ ಮುರಿದು ದಾಖಲೆ ಪತ್ರಗಳನ್ನು ಬೀಳಿಸಿ ಹಾಕಿದ್ದಾರೆ. [ಸಿಸಿಬಿ ಪೊಲೀಸರ ಬಲಗೆ ಬಿದ್ದ ವಿಗ್ರಹ ಚೋರರು]

ಗ್ರಂಥಾಲಯ ಕೊಠಡಿಗೆ ಹೋಗಿ ಅಲ್ಲಿ ಟೇಬಲ್‍ನೊಳಗಿದ್ದ 2 ಸಾವಿರ ರೂಪಾಯಿ ನಗದನ್ನು ಕದ್ದೊಯ್ದಿದ್ದಾರೆ. ಅಲ್ಲೇ ಇನ್ನೊಂದು ಬದಿಯಿರುವ ಗ್ರಾಮ ಕರಣಿಕರ ಕೊಠಡಿಗೆ ಹೋಗಿ ಕಪಾಟಿನ ಬೀಗ ಮುರಿದು ಕಪಾಟಿನಲ್ಲಿದ್ದ ದಾಖಲೆಗಳನ್ನು ಟೇಬಲ್ ಮೇಲೆ ಇರಿಸಿದ್ದಾರೆ. ಅಲ್ಲಿ ಕಪಾಟಿನಲ್ಲಿದ್ದ 400 ರೂ.ಗಳನ್ನು ಕಳವು ಮಾಡಲಾಗಿದೆ.
ಸ್ಥಳಕ್ಕೆ ಸುಳ್ಯ ಎಸ್.ಐ. ಚಂದ್ರಶೇಖರ್, ಕ್ರೈಂ ಎಸ್.ಐ. ಸಂಜಯ್ ಕಲ್ಲೂರ ಸೇರಿಂತೆ ಪೊಲೀಸರು ಆಗಮಿಸಿದ್ದು, ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಕೂಡಾ ಆಗಮಿಸಿದ್ದಾರೆ. ಯಾವುದಾದರೂ ದಾಖಲೆಗೆ ಬೇಕಾಗಿ ಈ ಕೃತ್ಯ ನಡೆದಿರಬಹುದೆಂದು ಊರವರು ಶಂಕಿಸಿದ್ದಾರೆ.












Click it and Unblock the Notifications