ರಾಹುಲ್ ಗಾಂಧಿ ಪತ್ತೆ ಹಚ್ಚುವಲ್ಲಿ ಸುಬ್ರಮಣ್ಯ ಸ್ವಾಮಿ ಯಶಸ್ವಿ!
ರಾಯಚೂರು, ಏ 11: ಬಹುದಿನಗಳಿಂದ ನಾಪತ್ತೆಯಾಗಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಎಲ್ಲಿದ್ದಾರೆಂದು ಕಂಡುಕೊಳ್ಳುವಲ್ಲಿ ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಯಶಸ್ವಿಯಾಗಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿಂದು (ಏ 11) ಮಾಧ್ಯಮದರೊಂದಿಗೆ ಮಾತನಾಡುತ್ತಿದ್ದ ಸ್ವಾಮಿ, ರಾಹುಲ್ ಗಾಂಧಿ ಲ್ಯಾಟಿನ್ ಅಮೆರಿಕಾದ ಉರುಗ್ವೆ ದೇಶದಲ್ಲಿದ್ದಾರೆಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಎಲ್ಲಿದ್ದಾರೆಂದು ಕಾಂಗ್ರೆಸ್ ಮುಖಂಡರಿಗೇ ಸರಿಯಾಗಿ ತಿಳಿದಿಲ್ಲ. ಈ ವಿಚಾರದಲ್ಲಿ ಸೋನಿಯಾ ಗಾಂಧಿ ಆ ಮಟ್ಟಿಗೆ ಗೌಪ್ಯತೆ ಕಾಪಾಡಿಕೊಂಡು ಬಂದಿದ್ದಾರೆ. (ಹೊಸ ಹಿಂದೂ ಸಂಘಟನೆಗೆ ಓಂಕಾರ ಬರೆದ ಸ್ವಾಮಿ)

ಕಾಂಗ್ರೆಸ್ ಪಕ್ಷದಲ್ಲೀಗ ಹಣದ ಕೊರತೆಯಿದ್ದು, ಅದಕ್ಕಾಗಿ ಸದಸ್ಯತ್ವ ಅಭಿಯಾನದ ಹೆಸರಿನಲ್ಲಿ ಹಣ ಪಡೆದುಕೊಳ್ಳಲಾಗುತ್ತಿದೆ ಎಂದು ಲೇವಡಿ ಮಾಡಿದ ಸ್ವಾಮಿ, ರಾಹುಲ್ ಗಾಂಧಿ ರಜೆಯಿಂದ ಭಾರತಕ್ಕೆ ವಾಪಸ್ ಬಂದ ನಂತರ ಹೊಸ ಬದಲಾವಣೆಯಾಗಲಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಮೂರ್ಖತನ ಎಂದು ಜರಿದಿದ್ದಾರೆ.
ಮುಂಬೈ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಲ್ಲಾ ದಾಖಲೆಗಳಿದ್ದರೂ ಉಗ್ರ ಲಕ್ವಿಯನ್ನು ಬಂಧ ಮುಕ್ತಗೊಳಿಸಲಾಗಿದೆ. ಇದು ಪಾಕಿಸ್ತಾನದಲ್ಲಿ ಸರಕಾರಕ್ಕಿಂತ ಐಎಸ್ಎ ಪ್ರಬಲವಾಗಿದೆ ಎನ್ನುವುದನ್ನು ರುಜುವಾತು ಪಡೆಸುತ್ತದೆ ಎಂದು ಸುಬ್ರಮಣ್ಯಂ ಸ್ವಾಮಿ ಆರೋಪಿಸಿದ್ದಾರೆ.
ಕೇಜ್ರಿವಾಲ್ 420: ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಕ್ಕಾ 420. ಪಕ್ಷದ ಸಂಸ್ಥಾಪಕ ಸದಸ್ಯರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳಲಾಯಿತು ಎನ್ನುವುದನ್ನು ದೆಹಲಿ ಜನತೆ ನೋಡಿದ್ದಾರೆ.
ದೆಹಲಿ ಚುನಾವಣೆಯಲ್ಲಿ ಪ್ರತಿ ಮನೆಗೂ ವೈಫೈ ಸಂಪರ್ಕದ ಭರವಸೆ ಕೇಜ್ರಿವಾಲ್ ನೀಡಿದ್ದರು. ಆದರೆ ಇದುವರೆಗೂ ಅದನ್ನು ಈಡೇರಿಸಲು ಕೇಜ್ರಿವಾಲ್ ಅವರಿಗೆ ಸಾಧ್ಯವಾಯಿತೇ ಎಂದು ಸುಬ್ರಮಣ್ಯ ಸ್ವಾಮಿ ಪ್ರಶ್ನಿಸಿದ್ದಾರೆ.












Click it and Unblock the Notifications