ಕರ್ನಾಟಕ: ಎಐಸಿಸಿಯಿಂದ ಮೂವರು ಜಿಲ್ಲಾ ವೀಕ್ಷಕರ ನೇಮಕ
ಬೆಂಗಳೂರು, ಏಪ್ರಿಲ್ 28: ರಂಗೇರಿದ ಕರ್ನಾಟಕ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತ ಎಐಸಿಸಿಯು ನೂತನ ಮೂರು ಜಿಲ್ಲಾ ವೀಕ್ಷಕರನ್ನು ಶುಕ್ರವಾರ ನೇಮಕ ಮಾಡಿ ಪ್ರಕಟಣೆ ಹೊರಡಿಸಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಹೀಗಾಗಿ ಎಲ್ಲ ನಾಯಕರು ಚುನಾವಣಾ ಕ್ಷೇತ್ರಗಳಲ್ಲಿ ಬೀಡು ಬಿಟ್ಟಿದ್ದಾರೆ. ಈ ನಡುವೆ ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕರ್ನಾಟಕ ಕಾಂಗ್ರೆಸ್ ನ ನೂತನ ಜಿಲ್ಲಾ ವೀಕ್ಷಕರನ್ನ ನೇಮಿಸಿ ಪ್ರಕಟಣೆ ಹೊರಡಿಸಿದ್ದಾರೆ.

ಎಐಸಿಸಿ ಹೇಳುವ ಪ್ರಕಾರ, ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಶಕ್ತಿಸಿನ್ಹ ಗೋಹಿಲ್, ಆಂಧ್ರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಸಂಸದ ಉತ್ತಮ್ ಕುಮಾರ್ ರೆಡ್ಡಿ ಮತ್ತು ರಾಯ್ ಗಂಜ್ ಕಾಂಗ್ರೆಸ್ ಸಂಸದೆ ದೀಪ್ ದಾಸ್ಮುನ್ಶಿ ಅವರನ್ನು ಜಿಲ್ಲಾ ವೀಕ್ಷಕರಾಗಿ ನೇಮಕಗೊಂಡಿದ್ದಾರೆ.
ಯಾವ ಜಿಲ್ಲೆಗಳನ್ನು ವಹಿಸಲಾಗಿದೆ.
ಶಕ್ತಿಸಿನ್ಹ ಗೋಹಿಲ್ ಅವರಿಗೆ ದಕ್ಷಿಣ ಕರ್ನಾಟಕದ ಕೋಲಾರ ಮತ್ತು ಚಿಕ್ಕಬಳ್ಳಾಪರ ಜಿಲ್ಲೆಯ ವೀಕ್ಷಕರ ಜವಾಬ್ದಾರಿ ವಹಿಸಿದೆ. ಉತ್ತಮ್ ಕುಮಾರ್ ರೆಡ್ಡಿ ಅವರಿಗೆ ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಮತ್ತು ದೀಪ್ ದಾಸ್ಮುನ್ಶಿ ಅವರನ್ನು ಮಲೆನಾಡು ಜಿಲ್ಲೆಯಾಗಿರುವ ಶಿವಮೊಗ್ಗ ವೀಕ್ಷಕರನ್ನಾಗಿ ಎಐಸಿಸಿ ನೇಮಿಸಿಕೊಂಡಿದೆ.

ರಾಜ್ಯ ಮೂರು ಭಾಗಗಳ ನಾಲ್ಕು ಜಿಲ್ಲೆಗಳಿಗೆ ಜಿಲ್ಲಾ ವೀಕ್ಷಕರನ್ನು ನೇಮಿಸುವ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ತಂತ್ರವನ್ನು ಇನ್ನಷ್ಟು ಬಿಗಿ ಗೊಳಿಸಿದೆ. ಈ ಜಿಲ್ಲಾ ವೀಕ್ಷಕರು ಚುನಾವಣ ಸಂದರ್ಭದಲ್ಲಿ ಮಹತ್ವದ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications