ರಾಜ್ಯ ಸಭಾ ಚುನಾವಣೆಗೂ ಮುನ್ನ ಎಲ್ಲಾ ಸ್ಥಾನ ಗೆಲ್ಲುವ ವಿಶ್ವಾಸದಲ್ಲಿ ಬೊಮ್ಮಾಯಿ
ಬೆಂಗಳೂರು, ಜೂನ್ 08: ''ಹೊಂದಾಣಿಕೆಯ ಮೇಲೆ ಭಾರತೀಯ ಜನತಾ ಪಕ್ಷ ನಿಂತಿಲ್ಲ. ಏನಾಗುತ್ತದೆ ಎಂದು ಕಾದು ನೋಡಿ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದಲ್ಲಿ ಜೂನ್ 8ರಂದು ನಡೆದ ಭಾರತೀಯ ಜನತಾ ಪಕ್ಷ(ಬಿಜೆಪಿ) ಶಾಸಕಾಂಗ ಪಕ್ಷದ ಸಭೆಯ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯ ಸಭಾ ಚುನಾವಣೆ ಮೀಸಲಾತಿ ನಿಗದಿಯಾಗಿರುವ ಪ್ರಕಾರ ಆಗಲಿದೆ. ನಾಲ್ಕನೇ ಸುತ್ತಿಗೆ ಕೋಟಾ ಮುಟ್ಟುವ ಪರಿಸ್ಥಿತಿ ಇಲ್ಲ. ಹಾಗಾಗಿ ಎಲಿಮಿನೇಷನ್ ಪ್ರಕ್ರಿಯೆ ಪ್ರಾರಂಭವಾಗಲಿದೆ. ಹೊರಹೋದವರ ಮತಗಳು ವರ್ಗಾವಣೆ ಆಗುತ್ತವೆ ಎಂದರು.
ಇಂದಿನ ರಾಜಕೀಯ ಸ್ಥಿತಿಗತಿಯನ್ನು ಅವಲೋಕಿಸಿದರೆ ಭಾಜಪಕ್ಕೆ 32 ಹೆಚ್ಚುವರಿ ಇದ್ದು, ಎರಡನೇ ಪ್ರಾಶಸ್ತ್ಯದಲ್ಲಿ ಮತದಾನವಾದರೆ, ಮತಗಳು ದೊರೆಯಲಿದೆ. ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಆಯ್ಕೆಯಾಗಲಿದ್ದಾರೆ. ರಾಜ್ಯ ಸಭಾ ಚುನಾವಣೆ ನಡೆದ ಸಂದರ್ಭದಲ್ಲಿ ಪಕ್ಷದಲ್ಲಿ ಏರುಪೇರಾಗಿರುವುದು ಇದೆ. ಈ ಚುನಾವಣೆ ಹೀಗೇ ಆಗುತ್ತದೆ ಎಂದು ಹೇಳುವುದು ಕಷ್ಟ. ಚುನಾವಣೆ ಪ್ರಕ್ರಿಯೆಯ ಮಧ್ಯಂತರ ದಲ್ಲಿ ಬದಲಾವಣೆಗಳಾಗಿವೆ. ಅಲ್ಲಿಯವರೆಗೂ ಕಾಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಚುನಾವಣಾ ಉಸ್ತುವಾರಿ ಕಿಶನ್ ರೆಡ್ಡಿ
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆ ಇಂದು ಮುಕ್ತಾಯವಾಗಿದ್ದರೂ ನಾಳೆ ಮತ್ತೊಮ್ಮೆ ಸಭೆ ಕರೆಯುವ ಸಾಧ್ಯತೆಯಿದೆ. ರಾಜ್ಯಸಭೆ ಚುನಾವಣಾ ಉಸ್ತುವಾರಿ ಕಿಶನ್ ರೆಡ್ಡಿ ಕೂಡಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದ್ದು, ರಾಜ್ಯಸಭೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತ ನೀಡುವಂತೆ ಸೂಚಿಸಲಾಗಿದೆ. ಜೂನ್ 10ಕ್ಕೆ ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಕುರಿತು ಚರ್ಚೆ ನಡೆಸಲಾಯಿತು. ಈ ನಡುವೆ ಜೂನ್ 9 ರಂದು ಬಿಜೆಪಿ ಶಾಸಕರಿಗೆ ಔತಣಕೂಟ ಆಯೋಜಿಸಲಾಗಿದೆ. ಜೂನ್ 10 ರಂದು ಬೆಳಗ್ಗೆ ಕೂಡಾ ಶಾಸಕರಿಗೆ ಮತದಾನದ ಬಗ್ಗೆ ಹಿರಿಯ ಮುಖಂಡರಿಂದ ಪಾಠ ನಡೆಸುವ ಸಾಧ್ಯತೆಯಿದೆ. ಪ್ರಾಶಸ್ತ್ಯ ಮತದಾನದ ಬಗ್ಗೆ ಶಾಸಕರಿಗಿರುವ ಗೊಂದಲ ಪರಿಹರಿಸಲು ಆರ್ ಅಶೋಕ್, ಬಿಸಿ ನಾಗೇಶ್, ಸುನಿಲ್ ಕುಮಾರ್‌ಗೆ ಹೊಣೆ ನೀಡಲಾಗಿದೆ.

ಶ್ರೀನಿವಾಸ್ ಪೂಜಾರಿ ಸೇರಿದಂತೆ ಪ್ರಮುಖರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ಬೆಂಗಳೂರಿನಲ್ಲಿ ಭಾರತೀಯ ಜನತಾ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ , ವಿಧಾನಪರಿಷತ್ ಸಭಾನಾಯಕ ಹಾಗೂ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸೇರಿದಂತೆ ಪ್ರಮುಖ ಭಾಗವಹಿಸಿದ್ದರು.

11 ರಾಜ್ಯಗಳಲ್ಲಿ ಒಟ್ಟು 41 ರಾಜ್ಯಸಭೆ ಸದಸ್ಯರನ್ನು ಅವಿರೋಧ ಆಯ್ಕೆ
11 ರಾಜ್ಯಗಳಲ್ಲಿ ಒಟ್ಟು 41 ರಾಜ್ಯಸಭೆ ಸದಸ್ಯರನ್ನು ಅವಿರೋಧವಾಗಿ ಚುನಾಯಿಸಲಾಗಿದೆ. ಕರ್ನಾಟಕದಲ್ಲಿ ಒಬ್ಬ ಅಭ್ಯರ್ಥಿ ಗೆಲುವಿಗೆ ಕನಿಷ್ಠ 45 ಮತಗಳು ಅಗತ್ಯವಾಗಿದೆ. ಬಿಜೆಪಿಯು 121 ಶಾಸಕರನ್ನು ಹೊಂದಿದ್ದು, ರಾಜ್ಯಸಭೆಯ ಮೂರು ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. 70 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದೆ. ಇನ್ನೊಂದು ಮಗ್ಗಲಿನಲ್ಲಿ 32 ಶಾಸಕರನ್ನು ಹೊಂದಿರುವ ಜೆಡಿಎಸ್ ಒಬ್ಬರನ್ನು ಕಣಕ್ಕಿಳಿಸಿದ್ದು ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

15 ರಾಜ್ಯಗಳಲ್ಲಿನ 57 ರಾಜ್ಯಸಭಾ ಸ್ಥಾನ
ಕರ್ನಾಟಕವೂ ಸೇರಿದಂತೆ 15 ರಾಜ್ಯಗಳಲ್ಲಿನ 57 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶವೊಂದರಲ್ಲೇ 11 ಸ್ಥಾನಗಳಿವೆ. ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ತಲಾ ಆರು ಸ್ಥಾನಗಳಿವೆ. ಬಿಹಾರದಲ್ಲಿ ಐದು, ಕರ್ನಾಟಕ, ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ ನಾಲ್ಕು ಸ್ಥಾನಗಳು ತೆರವಾಗಿದ್ದು, ಚುನಾವಣೆ ನಡೆಯಲಿದೆ. 57 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ ಎಂಟು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ರಾಜಸ್ಥಾನದಲ್ಲಿ 2, ಛತ್ತೀಸ್‌ಗಢ್‌ನಲ್ಲಿ 2, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ತಲಾ ಒಂದೊಂದು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ. ರಾಜಸ್ಥಾನದಲ್ಲಿ ಬಿಜೆಪಿಯೇತರ ಎಲ್ಲಾ ಪಕ್ಷಗಳ ಬೆಂಬಲ ಸಿಕ್ಕರೆ ಒಂದು ಹೆಚ್ಚುವರಿ ಸ್ಥಾನ ಕೂಡ ಕಾಂಗ್ರೆಸ್‌ಗೆ ದಕ್ಕಬಹುದು












Click it and Unblock the Notifications