ಕರ್ನಾಟಕ ಚುನಾವಣೆಗೂ ಮುನ್ನ ಆಪರೇಶನ್ 'ಕಮಲ', 'ಹಸ್ತ'ಕ್ಕೆ ಸಿದ್ಧವಾಯ್ತು ವೇದಿಕೆ: ಇಲ್ಲಿದೆ ಪಟ್ಟಿ, ಮಾಹಿತಿ
ಬೆಂಗಳೂರು,
ಜನವರಿ 06: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿವೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಪಕ್ಷಗಳು ಶತಾಯಗತಾಯ ಗೆಲ್ಲಲೇಬೇಕೆಂದು ಹರಸಾಹಸ ನಡೆಸಿವೆ. ಬೇರೆ ಪಕ್ಷದ ಶಾಸಕರನ್ನು ಹಾಗೂ ಮುಖಂಡರನ್ನು ತಮ್ಮತ್ತ ಸೆಳೆದು ಪಕ್ಷದ ತಳಹದಿಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ನಾಯಕರು ಕಾರ್ಯಗತರಾಗಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ನೇರ ಹಣಾಹಣಿ ಇದ್ದರೂ, ಜೆಡಿಎಸ್ ಪಕ್ಷವನ್ನು ಕಡೆಗಣಿಸುವಂತಿಲ್ಲ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ಗಟ್ಟಿ ತಳಹದಿ ಇದೆ. ಈ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದ ಶಾಸಕರಿಗೆ ಎರಡೂ ರಾಷ್ಟ್ರೀಯ ಪಕ್ಷಗಳು ಗಾಳ ಹಾಕಿವೆ ಎಂಬ ಮಾತುಗಳು ಕೇಳಿ ಬಂದಿವೆ. id="toptextpromo"> id='are-slot-1' class='oiad oi-axt oiadv'>
ಆಪರೇಶನ್ ಕಮಲಕ್ಕೆ ಮತ್ತೆ ಚಾಲನೆ
ಅಧಿಕಾರದಲ್ಲಿರುವ ಬಿಜೆಪಿ 'ಆಪರೇಶನ್ ಕಮಲಕ್ಕೆ' ಮತ್ತೆ ಚಾಲನೆ ನೀಡಿದೆ ಎನ್ನಲಾಗಿದೆ. ಎರಡು ವಾರಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಆಗಿದ್ದ ಸಿಎಂ ಬಸವರಾಜ ಬೊಮ್ಮಾಯಿ ಈ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೇರೆ ಪಕ್ಷದ ಶಾಸಕರು ಹಾಗೂ ಪ್ರಭಾವಿ ಮುಖಂಡರನ್ನು ಸೆಳೆಯುವ ನಿಟ್ಟಿನಲ್ಲಿ ಚರ್ಚೆ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆಪರೇಶನ್ ಕಮಲಕ್ಕೆ ಸಿದ್ದವಾಗಿರುವ ಪಟ್ಟಿಯನ್ನೂ ಸಿಎಂ ಬೊಮ್ಮಾಯಿ ಅಮಿತ್ ಶಾ ಅವರಿಗೆ ನೀಡಿದ್ದಾರೆ.
ತುಮಕೂರಿನ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಚಿತ್ರನಟ ಶಶಿಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್.ಅನಿಲ್ ಕುಮಾರ್, ಕಾಂಗ್ರೆಸ್ ಮುಖಂಡ ಎಸ್. ಸಚ್ಚಿದಾನಂದ ಜೊತೆ ಹಲವು ಮುಖಂಡರು ಈಗಾಗಲೇ ಬಿಜೆಪಿ ಸೇರಿದ್ದಾರೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಬಿಜೆಪಿ ಪ್ರಬಲವಿದೆ. ಆದರೆ, ಹಳೇ ಮೈಸೂರು ಭಾಗದಲ್ಲಿ ತನ್ನ ಪ್ರಾಬಲ್ಯವನ್ನು ಇನ್ನೂ ಸಾಧಿಸಿಲ್ಲ. ಹೀಗಾಗಿ, ಆಪರೇಶನ್ ಕಮಲಕ್ಕೆ ಹಳೇ ಮೈಸೂರು ಭಾಗವನ್ನೇ ಹೆಚ್ಚು ಕೇಂದ್ರಿಕರಿಸಲಾಗಿದೆ ಎಂದು ತಿಳಿದುಬಂದಿದೆ. ಮುಖ್ಯವಾಗಿ ಜೆಡಿಎಸ್ ನಾಯಕರನ್ನು ಸೆಳೆಯುವ ನಿಟ್ಟಿನಲ್ಲಿ ಕಸರತ್ತು ನಡೆದಿದೆ.

ಆಪರೇಶನ್ ಹಸ್ತಕ್ಕೂ ಸಿದ್ದವಾದ ತಂತ್ರ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಪರೇಶನ್ ಹಸ್ತದ ಮುನ್ಸೂಚನೆ ನೀಡಿದ್ದಾರೆ. ಸಂಕ್ರಾಂತಿ ನಂತರ ಯಾವ ಯಾವ ಮುಖಂಡರು ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂಬುದನ್ನು ಕಾದು ನೋಡಿ ಎಂದಿದ್ದಾರೆ. 'ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ಧ. ಹೀಗಾಗಿ ನೀವು ಗೆಲ್ಲುವ ಪಕ್ಷವನ್ನು ಸೇರಿಕೊಳ್ಳಿ. ನಮ್ಮ ಜೊತೆ ಅಸಮಾಧಾನ ಹೊಂದಿ ಪಕ್ಷದಿಂದ ದೂರ ಹೋದವರು ಮತ್ತೆ ಪಕ್ಷಕ್ಕೆ ಬಂದು ಸೇರಬಹುದು' ಎಂದು ಡಿಕೆಶಿ ಹೇಳಿದ್ದಾರೆ.
ಈಗಾಗಲೇ ಜೆಡಿಎಸ್‌ನ ಹಲವು ಶಾಸಕರು ಹಾಗೂ ಮಾಜಿ ಶಾಸಕರ ಜೊತೆ ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ, ಗುಬ್ಬಿ ಶಾಸಕ ಶ್ರೀನಿವಾಸ, ಮಾಜಿ ಶಾಸಕ ವೈ.ಎಸ್.ವಿ ದತ್ತಾ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬುದು ಬಹಿರಂಗಗೊಂಡಿರುವ ವಿಚಾರ. ಇನ್ನು ಬಿಜೆಪಿ ಎಂಎಲ್‌ಸಿ ಎಚ್. ವಿಶ್ವನಾಥ ಅವರೂ ಕಾಂಗ್ರೆಸ್ ಸೇರುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಮುಂಬೈ ಕರ್ನಾಟಕ ಭಾಗದ ಇಬ್ಬರು, ಹಳೇ ಮೈಸೂರು ಭಾಗದ ಒಬ್ಬರು, ಬೆಂಗಳೂರಿನ ಇನ್ನರು ಹಾಗೂ ಕಲ್ಯಾಣ ಕರ್ನಾಟಕದಿಂದ ಒಬ್ಬರು ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿ ರಮೇಶ ಜಾರಕಿಹೊಳಿ ನಡೆ ನಿಗೂಢ
ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಮಹತ್ವ ಪಾತ್ರ ವಹಿಸಿದ್ದ ರಮೇಶ ಜಾರಕಿಹೊಳಿ ನಡೆ ನಿಗೂಢವಾಗಿದೆ. ಅವರು ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅವರಿಬ್ಬರ ಗುಟ್ಟಾದ ಭೇಟಿಯಲ್ಲಿ ಯಾವುದರ ಬಗ್ಗೆ ಮಾತುಕತೆಗಳು ನಡೆದಿವೆ ಎಂದು ಸ್ಪಷ್ಟವಾಗಿಲ್ಲ. ಸಚಿವ ಸ್ಥಾನ ಸಿಗದಿರುವುದಕ್ಕೆ ಬಿಜೆಪಿಯೊಂದಿಗೆ ರಮೇಶ ಜಾರಕಿಹೊಳಿ ಮುನಿಸಿಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ. ರಮೇಶ ಜಾರಕಿಹೊಳಿ ಅವರ ಮುಂದಿನ ನಡೆ ಏನಿರಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದಲ್ಲಿ ಯಾತ್ರೆಗಳ ಸರಣಿ
ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇದೆ. ಈಗಾಗಲೇ ರಾಜಕೀಯ ಪಕ್ಷಗಳು ಯಾತ್ರೆಗಳಿಗೆ ಮೊರೆಹೋಗಿವೆ. ಬಿಜೆಪಿಯು ಜನಸಂಕಲ್ಪ ಯಾತ್ರೆ ನಡೆಸುತ್ತಿದೆ. ಜೆಡಿಎಸ್ ಪಂಚರತ್ನ ಯಾತ್ರೆ ನಡೆಸುತ್ತಿದೆ. ಕಾಂಗ್ರೆಸ್‌ನಿಂದ ಜನವರಿ 11ರಂದು ಬಸ್ ಯಾತ್ರೆ ಆರಂಭವಾಗಲಿದೆ. ನಾಯಕರ ಈ ಕಸರತ್ತು ಯಾವ ಪಕ್ಷಕ್ಕೆ ಲಾಭ ತಂದುಕೊಡಲಿವೆ ಎಂಬುದನ್ನು ಚುನಾವಣೆ ಫಲಿತಾಂಶಗಳೇ ಹೇಳಬೇಕಿದೆ.












Click it and Unblock the Notifications