ಆಗ್ರಿ ಗೋಲ್ಡ್ ವಂಚನೆ ಪ್ರಕರಣ: ತಪ್ಪು ಮಾಹಿತಿ ನೀಡಿದ ರಾಮನಗರ ಎಸಿಗೆ HC ಸಮನ್ಸ್
ಬೆಂಗಳೂರು, ಫೆಬ್ರವರಿ 24: ಅಗ್ರಿ ಗೋಲ್ಡ್ ಕಂಪನಿ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಒಂದೇ ಕಡೆಗೆ ವರ್ಗಾಯಿಸುವ ಸಂಬಂಧ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿಯೇ ಇಲ್ಲ.
ಕಳೆದ ಆರೇಳು ತಿಂಗಳಿನಿಂದ ಅರ್ಜಿ ಸಲ್ಲಿಸಲಾಗಿದೆ ಎಂದು ಹೇಳಿಕೊಂಡು ಬರುತ್ತಿದ್ದ ಸರ್ಕಾರ ಶುಕ್ರವಾರ ಉಲ್ಟಾ ಹೊಡೆದಿದ್ದು, ರಾಮನಗರ ಎಸಿ ತಪ್ಪು ಮಾಹಿತಿಯಿಂದಾಗಿ ಅರ್ಜಿ ಸಲ್ಲಿಸಲಾಗಿತ್ತೆಂದು ಸರ್ಕಾರಿ ವಕೀಲರೇ ಹೈಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಬಗ್ಗೆ ವಿವರಣೆ ನೀಡಲು ರಾಮನಗರ ಉಪ ವಿಭಾಗಾಧಿಕಾರಿ ಮಾ.10ಕ್ಕೆ ಖುದ್ದು ಹಾಜರಾಗಬೇಕು ಆದೇಶಿಸಿದೆ.
ಮಂಗಳೂರಿನ ಅಗ್ರಿ ಗೋಲ್ಡ್ ಗ್ರಾಹಕರು ಮತ್ತು ಏಜೆಂಟ್‌ರ ಕಲ್ಯಾಣ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು, ಅಗ್ರಿ ಗೋಲ್ಡ್ ಕಂಪನಿ ವಂಚನೆ ವಿರುದ್ಧ ಕರ್ನಾಟಕ, ತೆಲಂಗಾಣ ಸೇರಿ ದೇಶದ ಇತರ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಎಲ್ಲ ಪ್ರಕರಣಗಳ ವಿಚಾರಣೆಗೆ ಒಂದೇ ಒಂದು ಕೋರ್ಟ್ ಸ್ಥಾಪಿಸಲು ನಿರ್ದೇಶನ ನೀಡುವಂತೆ ಕೋರಿ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಹಲವು ತಿಂಗಳುಗಳಿಂದ ಹೇಳುತ್ತಿದೆ, ಆದರೆ ಅದರ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿಲ್ಲ ಎಂದರು.
ಆಗ ವಾದಿಸಿದ ಸರ್ಕಾರದ ಪರ ವಕೀಲರು, ಹಿಂದೆ ರಾಮನಗರ ಉಪ ವಿಭಾಗಾಧಿಕಾರಿ ಕಚೇರಿಯಿಂದ ಬಂದ ಮಾಹಿತಿಯಂತೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಕೋರ್ಟ್‌ಗೆ ತಿಳಿಸಲಾಗಿತ್ತು. ಆದರೆ, ಈ ಬಗ್ಗೆ ಪರಿಶೀಲಿಸಿದಾಗ ಉಡುಪಿ ಕೋರ್ಟ್‌ನಲ್ಲಿ ಮಾತ್ರ ಪ್ರಕರಣ ಬಾಕಿ ಇದೆ. ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಯಾವುದೇ ಅರ್ಜಿ ಸಲ್ಲಿಸಿಲ್ಲ ವಿಚಾರಣೆಯೂ ಬಾಕಿ ಇಲ್ಲ ಎಂದರು.
ಆಗ ಸಿಟ್ಟಿಗೆದ್ದ ಸಿಜೆ, ಇದೇನಿದು ಹೈಕೋರ್ಟ್ ಅನ್ನು ಏನೆಂದು ಭಾವಿಸಿದ್ದೀರಿ, ಕೋರ್ಟ್‌ಗೆ ನೀಡಿರುವ ಹೇಳಿಕೆಗೆ ಬೆಲೆ ಇಲ್ಲವೇ? ಯಾವ ಅಧಿಕಾರಿ ತಪ್ಪು ಮಾಹಿತಿ ನೀಡಿದ್ದು, ಏಕೆ ತಪ್ಪು ಮಾಹಿತಿ ನೀಡಿದ್ದು ಎಂದು ಖಾರವಾಗಿ ಪ್ರಶ್ನಿಸಿದರು.
ಅಲ್ಲದೆ, ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬಾಕಿ ಇದೆ ಎಂಬ ಕಾರಣ ನೀಡಿ ಅರ್ಜಿಯನ್ನು ನಾಲ್ಕು ಬಾರಿ ಸರ್ಕಾರ ಮುಂದಕ್ಕೆ ಹಾಕಿಸಿಕೊಂಡಿದೆ. 6 ತಿಂಗಳಿನಿಂದ ವಿಚಾರಣೆ ವಿಳಂಬವಾಗಿದೆ. ಇದೀಗ ಸುಪ್ರೀಂಕೋರ್ಟ್‌ಗೆ ಯಾವುದೇ ಅರ್ಜಿ ಸಲ್ಲಿಸಿಲ್ಲ ಎಂದರೆ ಏನರ್ಥ ಎಂದು ತರಾಟೆಗೆ ತೆಗೆದುಕೊಂಡಿತು.
ಅಧಿಕಾರಿ ಖುದ್ದು ಹಾಜರಿಗೆ ಆದೇಶ: ಜೊತೆಗೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಕುರಿತು ಸುಳ್ಳು ಮಾಹಿತಿ ನೀಡಿದರೆನ್ನಲಾದ ರಾಮನಗರ ಉಪ ವಿಭಾಗಾಧಿಕಾರಿ ಮಾ.10ಕ್ಕೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ವಿವರಣೆ ನೀಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ಅಂದಿಗೆ ಮುಂದೂಡಿತು.
32 ಲಕ್ಷ ಹೂಡಿಕೆದಾರರಿಗೆ ವಂಚನೆ: ಕಳೆದ ವರ್ಷ ಜು.6ರಂದು ನಡೆದಿದ್ದ ಅರ್ಜಿ ವಿಚಾರಣೆಗೆ ಹಾಜರಾಗಿದ್ದ ಸಕ್ಷಮ ಪ್ರಾಧಿಕಾರದ ಅಧಿಕಾರಿ, ಕಂಪನಿಯಲ್ಲಿ ಅಂದಾಜು 32 ಲಕ್ಷ ಹೂಡಿಕೆದಾರರಿದ್ದು, ರಾಜ್ಯದ 8.8 ಲಕ್ಷ ಹೂಡಿಕೆದಾರರು ವಿವಿಧ ಶಾಖೆಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಸೇರಿ ಇತರ ರಾಜ್ಯಗಳಲ್ಲಿ ಅಗ್ರಿಗೋಲ್ಡ್ ಕಂಪನಿಯ ಅವ್ಯವಹಾರ ನಡೆದಿದೆ. ಅಲ್ಲಿಯೂ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಕಂಪನಿಗೆ ಸೇರಿದ ಒಟ್ಟು 290 ಆಸ್ತಿಗಳನ್ನು ತೆಲಂಗಾಣ ಸರ್ಕಾರ ಜಪ್ತಿ ಮಾಡಿದೆ ಎಂದು ಹೇಳಿದ್ದರು.
ಅಲ್ಲದೆ, ಎಲ್ಲ ರಾಜ್ಯಗಳಲ್ಲಿನ ಪ್ರಕರಣಗಳ ವಿಚಾರಣೆಗೆ ಒಂದು ನೋಡಲ್ ರಾಜ್ಯ ಹಾಗೂ ಒಂದು ನ್ಯಾಯಾಲಯ ಸ್ಥಾಪನೆಗೆ ಕೋರಿ ಸುಪ್ರೀಂಕೊರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದರು.












Click it and Unblock the Notifications