'ಸೇನೆ ಸೇರೋದು ದೇಶ ಸೇವೆಗೆ, ಎಡಬಿಡಂಗಿಗಳಿಗೆ ಅರ್ಥವಾಗುವುದಿಲ್ಲ'
ಬೆಂಗಳೂರು, ಜೂನ್ 19: ಅಗ್ನಿಪಥ್ ವಿಚಾರದಲ್ಲಿ ದೇಶದಲ್ಲಿ ಎದ್ದಿರುವ ಅಶಾಂತಿಯ ಸನ್ನಿವೇಶ ಮತ್ತು ಕಾಂಗ್ರೆಸ್ ನಾಯಕರ ವರ್ತನೆಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕಟುವಾದ ಶಬ್ದದಿಂದ ಹರಿಹಾಯ್ದಿದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ರವಿ, "ಕೇಂದ್ರ ಸರಕಾರ ಹೊಸದಾಗಿ ತರಲು ಉದ್ದೇಶಿಸಿರುವ ಅಗ್ನಿಪಥ್ ಯೋಜನೆಯ ರೀತಿಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರ ಮತ್ತು ಅಮೆರಿಕಾದಲ್ಲೂ ಯುವಕರನ್ನು ಸೇನೆಗೆ ಭರ್ತಿ ಮಾಡಿಕೊಳ್ಳಲಾಗಿದೆ. ಇದರ ಮೂಲ ಉದ್ದೇಶವನ್ನು ಮರೆತು ಕಾಂಗ್ರೆಸ್ಸಿಗರು ಮತ್ತು ಎಡಪಂಥೀಯರು ಯುವ ಸಮುದಾಯವನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಮಾಡುತ್ತಿದ್ದಾರೆ"ಎಂದು ಹೇಳಿದ್ದಾರೆ.
"ದೇಶದ ಮೇಲೆ ಭಕ್ತಿ ಇರುವವರು ಸೇನೆಗೆ ಸೇರುತ್ತಾರೆ, ಇಲ್ಲದೇ ಇದ್ದವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ರೀತಿಯಲ್ಲಿ ಬೇಜವಬ್ದಾರಿ ಹೇಳಿಕೆಯನ್ನು ನೀಡುತ್ತಾರೆ. ಸರಕಾರ ಏನೇ ಕೆಲಸ ಮಾಡಿದರೂ, ಅದನ್ನು ಟೀಕಿಸುವುದಷ್ಟೇ ಇವರ ಉದ್ದೇಶ"ಎಂದು ಸಿ . ಟಿ. ರವಿ ಸಿದ್ದರಾಮಯ್ಯನವರ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

"ಶಿಕ್ಷಣದ ಜೊತೆಗೆ ಸೇನೆಗೂ ತರಬೇತಿ ನೀಡುವ ಕೆಲಸವನ್ನು ವಿಶ್ವದ ಎಂಟು ರಾಷ್ಟ್ರಗಳು ಮಾಡುತ್ತಿವೆ ಎನ್ನುವುದನ್ನು ನಮ್ಮ ದೇಶದ ಎಡಬಿಂಡಗಿಗಳು ಅರಿತುಕೊಳ್ಳಬೇಕು. ಅಗ್ನಿಪಥ್ ಸಾಮರ್ಥ್ಯ ತುಂಬುವ ಕೆಲಸ ಮಾಡುತ್ತದೆಯೇ ಹೊರತು ದುರ್ಬಲ ಮಾಡಲು ತಂದ ಯೋಜನೆಯಲ್ಲ"ಎಂದು ಸಿ. ಟಿ. ರವಿ ಸ್ಪಷ್ಟ ಪಡಿಸಿದರು.
"ಸಿದ್ಧಾಂತ ಅನ್ನೋದು ಇಲ್ಲದವರು ಸಿದ್ದರಾಮಯ್ಯನವರ ರೀತಿಯಲ್ಲಿ ಮಾತನಾಡುತ್ತಾರೆ. ಸಿದ್ದರಾಮಯ್ಯ ಒಬ್ಬ ಎಡಬಿಡಂಗಿ ಎಂದು ಹಲವು ಬಾರಿ ಹೇಳಿದ್ದೇನೆ. ಅಗ್ನಿಪಥ್ ಜಾಬ್ ಗ್ಯಾರಂಟಿ ಸ್ಕೀಮ್ ಅಲ್ಲ. ಇದು ಭಾರತ ಮಾತೆಯ ಸೇವೆ"ಎಂದು ಸಿ. ಟಿ. ರವಿ ಹೇಳಿದರು.

"ಹೊಸಸೇನಾ ನೇಮಕಾತಿ ಅಗ್ನಿಪಥ್ ಕೇವಲ ಸೇನಾ ನೇಮಕಾತಿಗಷ್ಟೇ ಸೀಮಿತವಾಗಲಾರದು. ಸೈನಿಕರ ಅನ್ನ ಕಸಿಯಲು ಹೊರಟಿರುವ ಈ ದೇಶದ್ರೋಹಿ, ಜನವಿರೋಧಿ ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಇತರ ಸರ್ಕಾರಿ ಉದ್ಯೋಗಗಳ ಮೇಲೆಯೂ ಸವಾರಿ ಮಾಡಲು ಹೊರಡುವುದು ಖಚಿತ. ಎಚ್ಚೆತ್ತುಕೊಳ್ಳಲು ಇದು ಸಕಾಲ!"ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.












Click it and Unblock the Notifications