ಕೊಡಿ ಹಬ್ಬಕ್ಕೆ ಕೋಟೇಶ್ವರದಲ್ಲಿ ಕಾರ್ಟೂನು ಸವಿಯಿರಿ
ಕುಂದಾಪುರ, ಡಿ. 2: ತಾಲೂಕಿನಲ್ಲಿ ಆಯೋಜಿಸಿದ್ದ 'ಕುಂದಾಪ್ರ ಕಾರ್ಟೂನು ಹಬ್ಬ'ಕ್ಕೆ ಉತ್ತಮ ಸ್ಪಂದನೆ ಹಾಗೂ ಪ್ರತಿಕ್ರಿಯೆ ಬಂದಿತ್ತು. ಇದರಿಂದ ಉತ್ತೇಜನಗೊಂಡಿರುವ ಸಂಘಟಕರು ಮತ್ತೆ ಕಾರ್ಟೂನು ಹಬ್ಬವನ್ನು ಆಯೋಜಿಸಿದ್ದಾರೆ.
ಕೊಡಿಹಬ್ಬದ ಸಂದರ್ಭ ಡಿ. 6 ಮತ್ತು 7ರಂದು ಕಾರ್ಟೂನು ಹಬ್ಬ ಆಯೋಜಿಸಲಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ 'ಕೊಡಿ ಹಬ್ಬಕ್ಕೆ ನಗೆಯ ತೇರು' ಎಂಬ ಟ್ಯಾಗ್ ಲೈನ್‌ನೊಂದಿಗೆ ವ್ಯಂಗ್ಯಚಿತ್ರಕಾರರು ಮತ್ತೆ ಜನರನ್ನು ನಕ್ಕು ನಗಿಸಲು ತಯಾರಾಗಿದೆ.

ಏನೇನು ಕಾರ್ಯಕ್ರಮ ನೋಡಬಹುದು...?
- ನಕ್ಕು ನಗಿಸುವ ನೂರಾರು ಕಾರ್ಟೂನುಗಳ ಪ್ರದರ್ಶನ
- ಕಾರ್ಟೂನು ಪುಸ್ತಕದ ಜೊತೆ ಸ್ಥಳದಲ್ಲೇ ಕ್ಯಾರಿಕೇಚರ್
- ಕಾರ್ಟೂನು ಗೀಚೋಕೆ ಸಾರ್ವಜನಿಕರಿಗೆ ಕ್ಯಾನ್ವಾಸ್
- ಮೋದಿ-ದೋನಿ ಕ್ಯಾರಿಕೇಚರ್ ಬಿಡಿಸಿ ಕ್ಯಾಶ್ ಗೆಲ್ಲಿರಿ
- ಕಾರ್ಟೂನಿಗೆ ಡೈಲಾಗ್ ಬರೆಯೋ ಸ್ಪರ್ಧೆ
- ಸೆಲ್ಫಿ ಕಾರ್ನರ್‌ನಲ್ಲಿ ಫೋಟೊ ತೆಗೆದು ಬಹುಮಾನ ಗೆಲ್ಲಿ

ವಿದ್ಯಾರ್ಥಿಗಳಿಗೆ ಕಾರ್ಟೂನು ಸ್ಪರ್ಧೆ : ವಿದ್ಯಾರ್ಥಿಗಳಿಗೆ ವ್ಯಂಗ್ಯಚಿತ್ರ ಕಲೆಯಲ್ಲಿ ಆಸಕ್ತಿ ಮೂಡಿಸಿ, ಕೌಶಲ್ಯ ಬೆಳೆಸಲು ಅವರಿಗಾಗಿ ಕಾರ್ಟೂನು ಸ್ಪರ್ಧೆ ಆಯೋಜಿಸಲಾಗಿದೆ. ಡಿ. 7ರಂದು ಬೆಳಗ್ಗೆ 11 ಗಂಟೆಗೆ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಸ್ಪರ್ಧೆ ನಡೆಯಲಿದೆ. ಮೆಚ್ಚುಗೆ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುವುದು ಹಾಗೂ ಮುಂದಿನ ಹಬ್ಬದಲ್ಲಿ ಕಾರ್ಟೂನು ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
5ರಿಂದ 8 ಹಾಗೂ 9ರಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಎರಡು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಗೆ ಈ ಕೆಳಗಿನ ಯಾವುದೇ ಒಂದು ವಿಷಯ ಆರಿಸಿಕೊಳ್ಳಬಹುದು.
- ಕೊಡಿ ಹಬ್ಬದಲ್ಲಿ ಹಾಸ್ಯ
- ಕುಂದಾಪುರ ಹುಡುಗರು
- ಲಂಚಕ್ಕೊಂದು ಪಂಚ್ (ಭ್ರಷ್ಟಾಚಾರ)
- ಸ್ವಚ್ಛ ಭಾರತ
ವಿಜೇತರಿಗೆ ಪ್ರಥಮ 2 ಸಾವಿರ, ದ್ವಿತೀಯ 1 ಸಾವಿರ ಹಾಗೂ ತೃತೀಯ 500 (ನಾಲ್ವರಿಗೆ) ರೂ. ಬಹುಮಾನ ನೀಡಲಾಗುವುದು. [ಅಂಗವೈಕಲ್ಯ ಮೆಟ್ಟಿ ನಿಂತ ವ್ಯಂಗ್ಯಚಿತ್ರ ಕಲಾವಿದ]
ನಿಯಮಗಳೇನು?
- ವ್ಯಂಗ್ಯಚಿತ್ರ ಕಪ್ಪು-ಬಿಳುಪು ಅಥವಾ ಬಣ್ಣದಲ್ಲಿರಬೇಕು
- ಸ್ಥಳದಲ್ಲಿ ಕೇವಲ ಪೇಪರ್ ನೀಡಲಾಗುವುದು
- ಚಿತ್ರ ಬಿಡಿಸಲು 2 ಗಂಟೆಗಳ ಕಾಲಾವಕಾಶವಿದೆ
- ಕಾರ್ಟೂನು ಐಡಿಯಾ ನಕಲಾಗಿರಬಾರದು
- ತೀರ್ಪುಗಾರರ ನಿರ್ಧಾರವೇ ಅಂತಿಮ
ಹೆಚ್ಚಿನ ವಿವರಗಳಿಗೆ ಸಂಘಟಕರು ಮೊ. 9482736873, ಇಮೇಲ್ [email protected] ಸಂಪರ್ಕಿಸಬಹುದು. ಈ ಕುರಿತ ಸುದ್ದಿಗಳಿಗಾಗಿ ಜಾಲ ತಾಣ www.kundapra.com ವೀಕ್ಷಿಸಬಹುದು.












Click it and Unblock the Notifications