ರಾಷ್ಟ್ರೀಯ ಪಕ್ಷದ ಸ್ಥಾನ ಕಳೆದುಕೊಂಡ ಬೆನ್ನಲ್ಲೇ ರಾಜ್ಯ ಚುನಾವಣೆಯಲ್ಲಿ ಕಣಕ್ಕಿಳಿಯಲಿದೆ ಸಿಪಿಐ
ಬೆಂಗಳೂರು, ಏಪ್ರಿಲ್. 15: ಇತ್ತೀಚೆಗಷ್ಟೇ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಕಳೆದುಕೊಂಡಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತನ್ನ 'ಜೋಳ ಮತ್ತು ಕುಡಗೋಲು' ಚಿಹ್ನೆಯ ಮೇಲೆ ಸ್ಪರ್ಧಿಸಲಿದೆ ಎಂದು ಪಕ್ಷದ ಸಂಸದ ಬಿನೋಯ್ ವಿಶ್ವಂ ಮಾಹಿತಿ ನೀಡಿದ್ದಾರೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 1989 ರಲ್ಲಿ 'ರಾಷ್ಟ್ರೀಯ ಪಕ್ಷ' ಎಂದು ಗುರುತಿಸಲ್ಪಟ್ಟಿತು. ಎಲ್ಲಾ ಸಾರ್ವತ್ರಿಕ ಚುನಾವಣೆಗಳಲ್ಲಿ ಒಂದೇ ಚುನಾವಣಾ ಚಿಹ್ನೆಯ ಮೇಲೆ ಸ್ಪರ್ಧಿಸುವ ಏಕೈಕ ರಾಜಕೀಯ ಪಕ್ಷವಾಗಿತ್ತು. ಇದರ ಜೊತೆಗೆ ಲೋಕಸಭೆಯಲ್ಲಿ ನಿರಂತರ ಅಸ್ತಿತ್ವವನ್ನು ಇನ್ನು ಉಳಿಸಿಕೊಂಡಿದೆ. ರಾಜ್ಯಗಳಲ್ಲಿ ಸರ್ಕಾರವನ್ನು ರಚಿಸಿದ ಮೊದಲ ಕಾಂಗ್ರೆಸ್ಸೇತರ ಪಕ್ಷವಾಗಿದ್ದು, ಅನೇಕ ಸರ್ಕಾರಗಳ ಭಾಗವಾಗಿ ಕೆಲಸ ಮಾಡಿದೆ.

ಮಾನ್ಯತೆ ಪಡೆದ ಪಕ್ಷವಲ್ಲದ ರಾಜ್ಯದಲ್ಲಿ ಚುನಾವಣಾ ಚಿಹ್ನೆಯನ್ನು ಬಳಸಲು ಸಿಪಿಐ ಚುನಾವಣಾ ಆಯೋಗದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಹೀಗಾಗಿ ತನ್ನ ಜೋಳ ಮತ್ತು ಕುಡಗೋಲು ಚಿಹ್ನೆ ಅಡಿಯಲ್ಲಿ ಸ್ಪರ್ಧಿಸುವುದಾಗಿ ಸಂಸದ ತಿಳಿಸಿದ್ದಾರೆ. "ಕರ್ನಾಟಕ ಚುನಾವಣೆಯಲ್ಲಿ, ಸಿಪಿಐ 1952 ರಿಂದ ಪಕ್ಷದ ಚುನಾವಣಾ ಚಿಹ್ನೆಯಾಗಿದ್ದ 'ಜೋಳ ಮತ್ತು ಕುಡಗೋಲು' ಚಿಹ್ನೆಯ ಮೇಲೆ ಸ್ಪರ್ಧಿಸಲಿದೆ. ಅದನ್ನು ಉಳಿಸಿಕೊಳ್ಳಲು ಸಿಪಿಐ ಶ್ರಮಿಸುತ್ತದೆ" ಎಂದು ವಿಶ್ವಂ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಸಿಪಿಐನ ರಾಜ್ಯ ಪಕ್ಷದ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲಾಗಿದೆ. ಆದರೆ ಸಿಪಿಐ ಕೇರಳ, ಮಣಿಪುರ ಮತ್ತು ತಮಿಳುನಾಡಿನಲ್ಲಿ ರಾಜ್ಯ ಪಕ್ಷದ ಸ್ಥಾನಮಾನವನ್ನು ಹೊಂದಿದೆ. 'ರಾಷ್ಟ್ರೀಯ ಪಕ್ಷ' ಸ್ಥಾನದ ಪ್ರಮುಖ ಪ್ರಯೋಜನವೆಂದರೆ ಪಕ್ಷವು ತನ್ನ ಅಭ್ಯರ್ಥಿಗಳಿಗೆ ದೇಶಾದ್ಯಂತ ಸಾಮಾನ್ಯ ಚಿಹ್ನೆಯನ್ನು ನೀಡಬಹುದು. ಇದರಿಂದ ಜನರು ಪಕ್ಷವನ್ನು ಗುರುತಿಸಲು ಸುಲಭವಾಗುತ್ತದೆ.

ಏಪ್ರಿಲ್ 10ರ ಸೋಮವಾರ ಚುನಾವಣಾ ಆಯೋಗವು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವನ್ನು (ಎಎಪಿ) ರಾಷ್ಟ್ರೀಯ ಪಕ್ಷವೆಂದು ಗುರುತಿಸಿತ್ತು. ಇದೇ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ), ಶರದ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಗಳನ್ನು ರಾಷ್ಟ್ರೀಯ ಪಕ್ಷದ ಸ್ಥಾನಮಾನದಿಂದ ತೆಗೆದು ಹಾಕಿದೆ..
ಚುನಾವಣಾ ಆಯೋಗ ಹೊರಡಿಸಿದ ಆದೇಶದಲ್ಲಿ, ದೆಹಲಿ, ಗೋವಾ, ಪಂಜಾಬ್ ಮತ್ತು ಗುಜರಾತ್‌ನಲ್ಲಿನ ಚುನಾವಣಾ ಸಾಧನೆಯ ಆಧಾರದ ಮೇಲೆ ಆಮ್ ಆದ್ಮಿ ಪಕ್ಷವನ್ನು ರಾಷ್ಟ್ರೀಯ ಪಕ್ಷವೆಂದು ಹೆಸರಿಸಲಾಗಿದೆ ಎಂದು ತಿಳಿಸಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಪ್ರಸ್ತುತ ದೆಹಲಿ ಮತ್ತು ಪಂಜಾಬ್‌ನಲ್ಲಿ ಅಧಿಕಾರದಲ್ಲಿದೆ.
ಇನ್ನು, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳ ಸಾಧನೆಗಳ ಆಧಾರದ ಮೇಲೆ ಅವುಗಳು ರಾಜ್ಯ ಪಕ್ಷಗಳಾಗಿ ಗುರುತಿಸಲ್ಪಡುತ್ತವೆ ಎಂದು ಆಯೋಗವು ತಿಳಿಸಿದೆ. ಪ್ರಸ್ತುತ ದೇಶದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್, ಸಿಪಿಐ(ಎಂ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮತ್ತು ಆಮ್ ಆದ್ಮಿ ಪಕ್ಷ ಈಗ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಹೊಂದಿವೆ.
ಕರ್ನಾಟಕದಲ್ಲಿ ಮೇ 10 ರಂದು ಚುನಾವಣೆ ನಡೆಲಿದ್ದು, ಚುನಾವಣೆಗೆ ನಾಮನಿರ್ದೇಶನ ಪ್ರಕ್ರಿಯೆಯು ಏಪ್ರಿಲ್ 13 ರಂದು ಪ್ರಾರಂಭವಾಗಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications