ಕರ್ನೂಲ್ ಬಸ್ ದುರಂತ ಬೆನ್ನಲ್ಲೆ ಎಚ್ಚೆತ್ತ ಕರ್ನಾಟಕ: ಸಾರಿಗೆ ಸಚಿವರ ಮಹತ್ವದ ಸೂಚನೆ
ಬೆಂಗಳೂರು, ಅಕ್ಟೋಬರ್ 26: ಈ ಹಿಂದೆ ಕರ್ನಾಟಕದ ಹಾವೇರಿ ಜಿಲ್ಲೆಯ ಕುಣಿಮರಳಿಹಳ್ಳಿ ಕಡೆ ಬಸ್ ದುರಂತ ಸಂಭವಿಸಿತ್ತು. ಅದಾದ ಬಳಿಕ ಮೊನ್ನೆಯಷ್ಟೇ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಬೆಂಕಿಗೆ ಸುಟ್ಟು ಹಲವರು ಮೃತಪಟ್ಟಿದ್ದರು. ಇದರ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಕರ್ನಾಟಕ ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಇಲಾಖೆ ವ್ಯವಸ್ಥಾಪಕ ನಿರ್ದೇಶಕರಿಗೆ ಮಹತ್ವದ ಸೂಚನೆ ನೀಡಿದ್ದಾರೆ.
ಕರ್ನಾಟಕದಾದ್ಯಂತ ಸಾವಿರಾರು ಸಾರ್ವಜನಿಕ ಬಸ್‌ಗಳ ಸಂಚರಿಸುತ್ತವೆ. ಬಸ್ಸುಗಳಲ್ಲಿನ ಸುರಕ್ಷತಾ ಕ್ರಮಗಳ (Safety Audit) ಕುರಿತು ಪರಿಶೀಲಿಸುವ ಬಗ್ಗೆ ಸಚಿವರು ಸೂಚನೆ ನೀಡಿದ್ದಾರೆ. ಕರ್ನೂಲ್ ಬಸ್ ದುರಂತ ತೀವ್ರ ದುಃಖಕರವಾದ ಸಂಗತಿ. ಆ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿರುವ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಬೇಕು ಎಂದು ತಿಳಿಸಿದ್ದಾರೆ.

ಈ ಹಿಂದೆ ನಾನು ಸಾರಿಗೆ ಸಚಿವನಾಗಿದ್ದಾಗ ಹಾವೇರಿ ಬಳಿ ಜಬ್ಬಾರ್ ಟ್ರಾವೆಲ್ಸ್ ನ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಪ್ರಯಾಣಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ನಾನು ಆ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಸುಮಾರು 50000 ವಾಹನಗಳಲ್ಲಿ ( ಸಾರಿಗೆ ಸಂಸ್ಥೆಗಳ ಬಸ್ಸುಗಳು, ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸುಗಳು, ಖಾಸಗಿ ಟೂರಿಸ್ಟ್ ಬಸ್‌ಗಳು, ಟೆಂಪೋ ಟ್ರಾವೆಲರ್ಸ್, ಶಾಲಾ ವಾಹನಗಳು ಸೇರಿ) ತುರ್ತು ನಿರ್ಗಮನ ದ್ವಾರಗಳನ್ನು ಕಡ್ಡಾಯ ಅಳವಡಿಸಬೇಕು. ಸರ್ಮಪಕವಾಗಿ ದ್ವಾರ ಕೆಲಸ ಮಾಡುತ್ತಿರುವ ಬಗ್ಗೆ ಪರಿಶೀಲಿಸಲು ಒಂದು ಅಭಿಯಾನವನ್ನೇ ಕೈಗೆತ್ತಿಕೊಂಡಿದ್ದರಿಂದ, ಹಲವು ಬಸ್ಸುಗಳಲ್ಲಿನ ಲೋಪದೋಷಗಳು ಗಮನಕ್ಕೆ ಬಂದು ತುರ್ತು ನಿರ್ಗಮನ ದ್ವಾರಗಳ ಅಳವಡಿಕೆ ಕಡ್ಡಾಯವಾಯಿತು.
ಬಸ್ಸುಗಳಲ್ಲಿ ಯಾವುದೇ ವಾಣಿಜ್ಯ ಸರಕು/ ಲಗೇಜ್ ಸಾಗಿಸುವ ಸಂದರ್ಭದಲ್ಲಿ ಬೆಂಕಿ ಸ್ಪರ್ಷಕ್ಕೆ ಸರಳವಾಗಿ ಉರಿಯುವ ಅಥವಾ ಇತರೆ ಸ್ಫೋಟಕ ವಸ್ತುಗಳನ್ನು ಸಾಗಿಸದಂತೆ ನಿಗಾವಹಿಸಬೇಕು. ಎಲ್ಲಾ ಎಸಿ ಬಸ್‌ಗಳಲ್ಲಿ ತುರ್ತು ಸಂದರ್ಭಗಳಲ್ಲಿ ಕಿಟಕಿಗಳನ್ನು ಒಡೆಯಲು ಸುತ್ತಿಗೆಗಳು ಕಡ್ಡಾಯವಾಗಿರಬೇಕು. ಲಗೇಜ್ ಸಾಗಿಸುವ ಜಾಗದಲ್ಲಿ ಯಾವುದೇ ವ್ಯಕ್ತಿ ಮಲಗಲು ಅವಕಾಶ ನೀಡಬಾರದು. ಬಸ್ಸುಗಳ ನವೀಕರಣ ಬಗ್ಗೆ ಪರಿಶೀಲನೆ ನಡೆಸುವಂತೆ ಅವರು ಪತ್ರ ಮೂಲಕ ನಿರ್ದೇಶಿಸಿದ್ದಾರೆ.
ಈ ಮೇಲಿನ ಯಾವುದೇ ನೂನ್ಯತೆ ಕಂಡುಬಂದರೂ ನಿರ್ದಾಕ್ಷಿಣ್ಯವಾಗಿ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಪ್ರಯಾಣಿಕರ ಸುರಕ್ಷತೆ ನಮ್ಮ ಪ್ರಥಮ ಆದ್ಯತೆ. ಪ್ರಾಣ ಹಾನಿಗೆ ಯಾವುದೇ ರೀತಿಯಿಂದಲೂ ನಷ್ಟ ಭರಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಕೂಡಲೇ ಬಸ್ಸುಗಳಲ್ಲಿನ ಸುರಕ್ಷತಾ ಆಡಿಟ್ ಪರಿಶೀಲನೆಗೆ ತಂಡಗಳನ್ನು ರಚಿಸಿ, ಸೂಕ್ತ ಕ್ರಮಕೈಗೊಳ್ಳುವಂತೆ ಸಚಿವರು ತಾಕೀತು ಮಾಡಿದ್ದಾರೆ.












Click it and Unblock the Notifications