ರಂಭಾಪುರಿ ಅಡ್ಡಪಲ್ಲಕ್ಕಿ ಉತ್ಸವ ವಿವಾದ ಅಂತ್ಯ
ಗುಲ್ಬರ್ಗಾ, ಅ.3 : ಭಾರೀ ಚರ್ಚೆಗೆ ಗ್ರಾಸವಾಗಿದ್ದ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ವಿವಾದ ಬಗೆಹರಿದಿದೆ. ಸಾಂಕೇತಿಕವಾಗಿ ಅಡ್ಡಪಲ್ಲಕ್ಕಿ ಉತ್ಸವ ನಡೆಸಲು ಗುಲ್ಬರ್ಗಾ ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅನುಮತಿ ನೀಡಿದ್ದಾರೆ.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಂಭಾಪುರಿ ಮಠದ ರೇಣುಕಾ ವೀರಸೋಮೇಶ್ವರ ಸ್ವಾಮೀಜಿ ಬೆಂಬಲಿಗರು ಮತ್ತು ಅಡ್ಡ ಪಲ್ಲಕ್ಕಿ ಉತ್ಸವ ವಿರೋಧಿ ಬಣಗಳ ನಡುವೆ ಸಂಧಾನ ಸಭೆ ನಡೆಯಿತು. ಸುಮಾರು ಐದು ಗಂಟೆಗಳ ಕಾಲ ನಡೆದ ಸಭೆಯ ನಂತರ ಉತ್ಸವಕ್ಕೆ ಅನುಮತಿ ನೀಡಲಾಗಿದೆ.
ಸಾಂಕೇತಿಕವಾಗಿ ನಡೆಯುತ್ತಿರುವ ಅಡ್ಡ ಪಲ್ಲಕ್ಕಿ ಉತ್ಸವ ನಡೆಸಬಹುದು. ವಿರೋಧಿ ಬಣದವರು ಶರಣರ ಜೀವನ ದರ್ಶನ ಪ್ರವಚನ' ಕಾರ್ಯಕ್ರಮ ನಡೆಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಆದರೆ, ಎರಡೂ ಬಣದವರು ಪ್ರಚೋದನಕಾರಿ ಹೇಳಿಕೆ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದರಿಂದಾಗಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಅಡ್ಡ ಪಲ್ಲಕ್ಕಿ ಉತ್ಸವ ವಿವಾದಕ್ಕೆ ತೆರೆ ಬಿದ್ದಿದೆ. ಮಂಗಳವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ದಸರಾ ದರ್ಬಾರ್ ಮತ್ತು ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ್ದರು.(ಚಿತ್ರಗಳು : ಬಾಲನಗೌಡ್ರ ಸಿ.ಎಚ್.)

ಏನಿದು ಆಚರಣೆ?
ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನಲ್ಲಿರುವ ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ರಂಭಾಪುರಿ ಮಠಾಧೀಶರು ಪ್ರತಿವರ್ಷ ಒಂದೊಂದು ಜಿಲ್ಲೆಯಲ್ಲಿ ದಸರಾ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ನಡೆಸುತ್ತಾರೆ. ಈ ವರ್ಷ ಗುಲ್ಬರ್ಗ ಜಿಲ್ಲೆಯ ಜೇವರ್ಗಿಯಲ್ಲಿ ಅ.5ರಿಂದ 14ರವರೆಗೆ ಉತ್ಸವ ಆಯೋಜಿಸಲಾಗಿದೆ.

ಅಡ್ಡಪಲ್ಲಕ್ಕಿ ಉತ್ಸವ
ದಸರಾ ಉತ್ಸವದ ಕೊನೆಯ ದಿನ ರಂಭಾಪುರಿ ಪೀಠದ ಶ್ರೀಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಭಕ್ತರು ಹೊತ್ತುಕೊಂಡು ಮೆರವಣಿಗೆ ಮಾಡುತ್ತಾರೆ. ಈ ಬಾರಿ ಅ.14ರಂದು ಅಡ್ಡ ಪಲ್ಲಕ್ಕಿ ಉತ್ಸವ ನಡೆಯಲಿದೆ.

ವಿರೋಧ ಏಕೆ
ವ್ಯಕ್ತಿಗಳನ್ನು ಹೀಗೆ ಹೊತ್ತೂಯ್ಯುವುದು ಬಸವಾದಿ ಶರಣರ ತತ್ವಕ್ಕೆ, ಸಂವಿಧಾನಕ್ಕೆ ವಿರೋಧವಾಗಿದ್ದು ಊಳಿಗಮಾನ್ಯ ಪದ್ಧತಿಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಇದನ್ನು ನಡೆಸಬಾರದು ಎಂದು ಹರಿಹರದ ಪಂಚಮಸಾಲಿ ಪೀಠದ ಜಗದ್ಗುರು ಸಿದ್ಧಲಿಂಗ ಸ್ವಾಮೀಜಿ ಮೊದಲು ಧ್ವನಿ ಎತ್ತಿದರು. ನಂತರ ಹಲವಾರು ಮಠಾಧೀಶರು ಇದಕ್ಕೆ ಧ್ವನಿಗೂಡಿಸಿದರು.

ಪರ್ಯಾಯ ಕಾರ್ಯಕ್ರಮ ಘೋಷಣೆ
ರಂಭಾಪುರಿ ಶ್ರೀಗಳ ಉತ್ಸವಕ್ಕೆ ಪರ್ಯಾಯವಾಗಿ ಜೇವರ್ಗಿಯಲ್ಲೇ ಅ.1ರಿಂದ 21ರವರೆಗೆ 'ಶರಣರ ಜೀವನ ದರ್ಶನ ಪ್ರವಚನ' ನಡೆಸುವುದಾಗಿ ಸೆ.14ರಂದು ಹರಿಹರದ ಪಂಚಮಸಾಲಿ ಪೀಠದ ಜಗದ್ಗುರು ಸಿದ್ದಲಿಂಗಸ್ವಾಮಿ ಘೋಷಿಸಿದ್ದರು. ಇದನ್ನು ಶರಣ ಸಂಪ್ರದಾಯವನ್ನು ಪಾಲಿಸುವ ಬಹುತೇಕ ಮಠಗಳು ಬೆಂಬಲಿಸಿದ್ದವು.

ವಿರೋಧಿಸುತ್ತಿರುವವರು ಯಾರು?
ಅಡ್ಡ ಪಲ್ಲಕ್ಕಿ ಉತ್ಸವವನ್ನು ಹರಿಹರದ ಪಂಚಮಸಾಲಿ ಪೀಠದ ಜಗದ್ಗುರು ಸಿದ್ಧಲಿಂಗ ಸ್ವಾಮೀಜಿ, ಮೈಸೂರಿನ ಜ್ಞಾನ ಪ್ರಕಾಶ ಸ್ವಾಮೀಜಿ, ಸುಲಫಲ ಮಹಾಂತ ಶಿವಾಚಾರ್ಯರು, ಸೊನ್ನದ ಶಿವಾನಂದ ಸ್ವಾಮೀಜಿ, ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ, ಬೀದರನ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ, ಬೆಲ್ದಾಳ ಶರಣರು, ಜೇರಟಗಿ ಮಹಾಂತ ಶಿವಾಚಾರ್ಯರು, ಕಲಬುರ್ಗಿ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಶಿವಶರಣಪ್ಪ ಕಲಬುರ್ಗಿ ಮತ್ತಿತರರು ವಿರೋಧಿಸುತ್ತಿದ್ದಾರೆ.












Click it and Unblock the Notifications