ಸತ್ಯ ಸೂರ್ಯನ ಬೆಳಕಿನಂತೆ ಯಾರೂ ಮರೆಮಾಚಲಾಗದು: ಸೌಜನ್ಯ ಪ್ರಕರಣದ ಬಗ್ಗೆ ದುನಿಯಾ ವಿಜಯ್ ಟ್ವೀಟ್
ಸೌಜನ್ಯ ಪ್ರಕರಣ ಕುರಿತಂತೆ ನಟ ದುನಿಯಾ ವಿಜಯ್ ಟ್ವೀಟ್ ಮಾಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಸದ್ಯ ಭಾರಿ ಸಂಚಲನ ಮೂಡಿಸಿದೆ. ದುನಿಯಾ ವಿಜಯ್ ಧರ್ಮಸ್ಥಳ ಮಂಜುನಾಥದ ಭಕ್ತರಾಗಿದ್ದು, ಪ್ರತಿ ವರ್ಷ ಭೇಟಿ ನೀಡಿ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಈ ಬಾರಿ ದೇವರ ದರ್ಶನ ಮಾಡಬಾರದು ಎನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ." ಎಂದು ಹೇಳಿದ್ದಾರೆ.

ಮುಂದುವರೆದು ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು ಎಂದು ಬುದ್ಧನ ಹೇಳಿಕೆಯನ್ನು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ದುನಿಯಾ ವಿಜಯ್ ಅವರ ಟ್ವೀಟ್ ಸಂಚಲನ ಸೃಷ್ಟಿಸಿದೆ.
ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ.
— Duniya Vijay (@OfficialViji) August 1, 2023
ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು - ಬುದ್ಧ#Justiceforsoujanya pic.twitter.com/wlxF84dHY4
ದುನಿಯಾ ವಿಜಯ್ ಟ್ವೀಟ್‌ಗೆ ಮಿಶ್ರಪ್ರತಿಕ್ರಿಯೆ
ಇನ್ನು ನಟ ದುನಿಯಾ ವಿಜಯ್ ಅವರ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ವಿಜಯ್ ಅವರ ಟ್ವೀಟ್ ಅನ್ನು ಮೆಚ್ಚಿಕೊಂಡಿದ್ದು, ಹೀಗೆ ಧ್ವನಿ ಎತ್ತಲು ತುಂಬಾ ಧೈರ್ಯ ಬೇಕು, ಇದಕ್ಕಾಗಿ ನೀವು ಹೆಚ್ಚು ಇಷ್ಟವಾಗೋದು ಎಂದು ಹೇಳಿದ್ದಾರೆ.
ಇನ್ನೂ ಕೆಲವರು ನಿಮ್ಮ ಮಾತು ಕೇಳಿ ಯಾರೂ ಮಂಜುನಾಥನ ದರ್ಶನ ಮಾಡುವುದನ್ನು ಬಿಡಲ್ಲ, ಸರಿಯಾಗಿ ತನಿಖೆ ಮಾಡಲು ಸರ್ಕಾರಕ್ಕೆ ಹೇಳಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ, ಮಂಜುನಾಥಸ್ವಾಮಿಯನ್ನು ಮಧ್ಯದಲ್ಲಿ ತರಬೇಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೆ ಕೆಲವರು ಈ ರೀತಿ ಎಲ್ಲರೂ ಧ್ವನಿ ಎತ್ತಿದರೆ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗುವ ಸಾಧ್ಯತೆ ಇದೆ, ಎಲ್ಲರೂ ಈ ಬಗ್ಗೆ ಮಾತನಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಮನಸಾಕ್ಷಿ, ಮಾನವೀಯತೆ, ಮಾತೃ ಹೃದಯದ ಮನುಷ್ಯರಿಂದ ಮಾತ್ರ ಈ ಮಾತುಗಳನ್ನು ನಿರೀಕ್ಷೆ ಮಾಡಬಹುದು. ಸೌಜನ್ಯ ಕುಟುಂಬಕ್ಕೆ ನೀವು ಕೊಟ್ಟ ಈ ನೈತಿಕ ಬೆಂಬಲಕ್ಕೆ ಧನ್ಯವಾದ. ಎಂದು ಇನ್ನೊಬ್ಬ ಟ್ವಿಟರ್ ಬಳಕೆದಾರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸೌಜನ್ಯ ಪ್ರಕರಣ ಮರು ತನಿಖೆಗೆ ಹೆಚ್ಚಿದ ಕೂಗು
ಸೌಜನ್ಯ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿ ನಿರಪರಾಧಿ ಎಂದು ಕೋರ್ಟ್ ಹೇಳಿದ ಬಳಿಕ, ನಿಜವಾದ ಅಪರಾಧಿಗಳನ್ನು ಬಂಧಿಸಬೇಕು ಎನ್ನುವ ಕೂಗು ಜೋರಾಗಿದೆ. ಪ್ರಕರಣವನ್ನು ನಿಸ್ಪಕ್ಷಪಾತವಾಗಿ ಮರು ತನಿಖೆ ಮಾಡಿಸಬೇಕು, ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯ ಕೇಳಿಬಂದಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪರಿಶೀಲನೆ ನಡೆಸಿದ ಬಳಿಕ ತೀರ್ಮಾನ ಮಾಡುವುದಾಗಿ ಭರವಸೆ ನೀಡಿದ್ದಾರೆ.












Click it and Unblock the Notifications