Vijayalakshmi Darshan: ಡಿ ಕೆ ಶಿವಕುಮಾರ್ ಭೇಟಿ ಮಾಡಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ : ಚರ್ಚೆಯಾಗಿದ್ದೇನು?
ಬೆಂಗಳೂರು, ಜುಲೈ 24: : ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಹಲವರು ಅರೆಸ್ಟ್ ಆಗಿದ್ದಾರೆ. ಜೈಲಿನಲ್ಲಿದ್ದರು ನಟ ದರ್ಶನ್ ಅವರ ಬಿಡುಗಡೆಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಕಾನೂನು ಹೋರಾಟವನ್ನ ನಡೆಸುತ್ತಿದ್ದು, ಡಿಸಿಎಂ ಡಿ ಕೆ ಶಿವಕುಮಾರ್ ಅವರ ಭೇಟಿ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ಎರಡು ದಿನಗಳ ಹಿಂದಷ್ಟೇ ನಟ ದರ್ಶನ್‌ರನ್ನು ನೋಡಲು ದಿನಕರ್ ತೂಗುದೀಪ್ ಜೊತೆ ಪತ್ನಿ ವಿಜಯಲಕ್ಷ್ಮಿ ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದರು. ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದು, ಈ ವಿಚಾರದ ಕುರಿತು ವಿಜಯಲಕ್ಷ್ಮೀ ಅವರು ಇಂದು(ಬುಧವಾರ) ಸದಾಶಿವನಗರದಲ್ಲಿರುವ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರ ನಿವಾಸಕ್ಕೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಭೇಟಿ ನೀಡಿದ್ದು, ಕುತೂಹಲ ಮೂಡಿಸಿದೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಜೊತೆಗೆ ದರ್ಶನ್ ಸಹೋದರ ದಿನಕರ್ ತೂಗುದೀಪ ಸಹ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅವರು ಜೈಲಿನಲ್ಲಿದ್ದಾರೆ. ಹೀಗಾಗಿ ಹೇಗಾದರೂ ಮಾಡಿ ಸಹಾಯ ಮಾಡುವಂತೆ ಅಂಗಲಾಚಿದ್ದಾರೆ ಎಂದು ತಿಳಿದು ಬಂದಿದೆ.
ನಟ ದರ್ಶನ್ ಅವರು ಸದ್ಯ ಜೈಲಿನಲ್ಲಿದ್ದು, ನಟ ದರ್ಶನ್ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ, ಏನಾದರೂ ಅನ್ಯಾಯ ಆಗಿದ್ದರೆ ಸರಿಪಡಿಸಲು ಪ್ರಯತ್ನ ಮಾಡುವೆ. ಆದರೆ, ನಾವು ಕಾನೂನಿಗೆ ಗೌರವ ಕೊಡಬೇಕು. ನಾವೆಲ್ಲ ದೇಶದ ಹಾಗೂ ನೆಲದ ಕಾನೂನು ಪಾಲಿಸಬೇಕು. ಅನ್ಯಾಯ ಆಗಿದ್ದವರಿಗೆ ನಾವೆಲ್ಲ ಸೇರಿ ನ್ಯಾಯ ಒದಗಿಸುವ ಕೆಲಸ ಮಾಡೋಣ. ನೊಂದ ಎಲ್ಲರಿಗೂ ತಾಯಿ ಚಾಮುಂಡೇಶ್ವರಿ ಅನುಗ್ರಹ ನೀಡಲಿ ಎಂದು ಹೇಳಿದರು.











Click it and Unblock the Notifications