ಕರ್ನಾಟಕ ಖಾಕಿ: ಕೊರೊನಾ 2ನೇ ಅಲೆಯಲ್ಲಿ ಪ್ರತಿದಿನ ಒಬ್ಬ ಪೊಲೀಸ್ ಸಾವು!
ಬೆಂಗಳೂರು, ಮೇ 19: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯಿಂದ ಪೊಲೀಸರು ಜನರನ್ನು ರಕ್ಷಿಸಲು ರಸ್ತೆಗೆ ಇಳಿದಿದ್ದಾರೆ. ಕರ್ನಾಟಕದಲ್ಲಿ ಕೊವಿಡ್-19 ನಿಯಮ ಪಾಲನೆ ಹಿಂದಿನ ಸೂತ್ರದಾರರಂತೆ ಕೆಲಸ ಮಾಡುತ್ತಿರುವ ಆರಕ್ಷಕರಿಗೇ ಜೀವ ರಕ್ಷಣೆ ಇಲ್ಲದಂತಾ ಸ್ಥಿತಿ ಎದುರಾಗಿದೆ.
ಕರ್ನಾಟಕದಲ್ಲೂ ಪ್ರತಿನಿತ್ಯ ನೂರಾರು ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಡುತ್ತಿದ್ದಾರೆ. ಈ ಸಾವಿನ ಪಟ್ಟಿಯಲ್ಲಿ ಪ್ರತಿನಿತ್ಯ ಒಬ್ಬ ಪೊಲೀಸ್ ಅಧಿಕಾರಿಯ ಹೆಸರು ಇದ್ದೇ ಇರುತ್ತದೆ ಎಂಬುದು ಇತ್ತೀಚಿಗೆ ಲಭ್ಯವಾಗಿರುವ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಕಳೆದ ಏಪ್ರಿಲ್ 1 ರಿಂದ ಮೇ 13ರವರೆಗೆ ದಿನವೂ ಒಬ್ಬ ಪೊಲೀಸ್ ಅಧಿಕಾರಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿರುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಅಂಕಿ-ಅಂಶಗಳಿಂದ ಸ್ಪಷ್ಟವಾಗಿದೆ.
|
ಸಬ್-ಇನ್ಸ್ ಪೆಕ್ಟರ್ ಕೊರೊನಾಗೆ ಬಲಿ
ಸಬ್-ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ 28 ವರ್ಷದ ಶಾಮಿಲಿ ಅವರು ಕೊರೊನಾವೈರಸ್ ಸೋಂಕಿನಿಂದ ಮಂಗಳವಾರ ಪ್ರಾಣ ಬಿಟ್ಟಿದ್ದಾರೆ. ಏಳು ತಿಂಗಳ ಗರ್ಭಿಣಿ ಆಗಿದ್ದ ಹಿನ್ನೆಲೆ ಶಾಮಿಲಿ ಅವರಿಗೆ ಕೊವಿಡ್-19 ಲಸಿಕೆ ನೀಡಿರಲಿಲ್ಲ. ಕೊರೊನಾವೈರಸ್ ಸೋಂಕು ತಗುಲಿದ ಅವರಿಗೆ ಕೋಲಾರದ ಆರ್ ಎಂ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನ್ವಾನೆ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಮೂಲದ ಶಾಮಿಲಿ ಅವರ ಸಾವಿಗೆ ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ಸಂತಾಪ ಸೂಚಿಸಿದ್ದಾರೆ.

ಕೊವಿಡ್-19 ಸೋಂಕಿನಿಂದ ಯುವ ಪೊಲೀಸ್ ಅಧಿಕಾರಿ ಸಾವು
28 ವರ್ಷದ ಶಾಮಿಲಿ ಅವರು ಕೊರೊನಾವೈರಸ್ ಎರಡನೇ ಅಲೆಯಲ್ಲಿ ಸೋಂಕಿನಿಂದ ಪ್ರಾಣಬಿಟ್ಟ ಅತಿ ಕಿರಿಯ ವಯಸ್ಸಿನ ಪೊಲೀಸ್ ಅಧಿಕಾರಿ ಆಗಿದ್ದಾರೆ. ಕೊವಿಡ್-19 ಸೋಂಕಿನ 2ನೇ ಅಲೆಯಲ್ಲಿ ಪ್ರಾಣ ಬಿಟ್ಟಿರುವ 41 ಪೊಲೀಸ್ ಅಧಿಕಾರಿಗಳಲ್ಲಿ ನಾಲ್ವರು 27-35 ವಯಸ್ಸಿನವರೇ ಆಗಿದ್ದಾರೆ. ಕಳೆದ 41 ದಿನಗಳಲ್ಲಿ 4203 ಪೊಲೀಸರಿಗೆ ಕೊರೊನಾವೈರಸ್ ಸೋಂಕು ತಗುಲಿರವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಪ್ರಸ್ತುತ ಈ 4203 ಸೋಂಕಿತರ ಪೈಕಿ 1508 ಪೊಲೀಸರಲ್ಲಿ ಕೊವಿಡ್-19 ಸೋಂಕು ಸಕ್ರಿಯವಾಗಿದೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

ಯಾವ ಜಿಲ್ಲೆಯಲ್ಲಿ ಅತಿಹೆಚ್ಚು ಪೊಲೀಸರಿಗೆ ಕೊರೊನಾ ಸೋಂಕು?
ಕೊರೊನಾವೈರಸ್ ಎರಡನೇ ಅಲೆಯಲ್ಲಿ ಬೆಂಗಳೂರಿನಲ್ಲೇ ಅತಿಹೆಚ್ಚು ಪೊಲೀಸರಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಬೆಂಗಳೂರು - 1439, ಮೈಸೂರು - 257, ತುಮಕೂರು 216, ಬಳ್ಳಾರಿ - 148, ಕಲಬುರಗಿ - 140, ಮತ್ತು ಹಾಸನ - 123 ಮಂದಿ ಪೊಲೀಸರಿಗೆ ಕೊವಿಡ್-19 ಸೋಂಕು ತಗುಲಿರುವುದು ವರದಿಯಾಗಿದೆ. ಬೆಂಗಳೂರಿನಲ್ಲೇ ಅತಿಹೆಚ್ಚು ಪೊಲೀಸರು ಕೊರೊನಾವೈರಸ್ ಸೋಂಕಿಗೆ ಬಲಿಯಾಗಿದ್ದು, ಈವರೆಗೂ ಮೃತಪಟ್ಟ 41 ಮಂದಿ ಪೊಲೀಸರಲ್ಲಿ 13 ಸಾವಿನ ಪ್ರಕರಣಗಳು ಬೆಂಗಳೂರಿಗೆ ಸೇರಿವೆ.

ಲಸಿಕೆ ನೀಡಿದ್ದರಿಂದ ಕೊರೊನಾವೈರಸ್ ನಿಯಂತ್ರಣ
ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯನ್ನು ನಿಯಂತ್ರಿಸಲು ಲಸಿಕೆಯಿಂದ ಸಾಧ್ಯವಾಯಿತು ಎಂದು ಐಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ. ಕಳೆದ ವರ್ಷ ಇದೇಕೊವಿಡ್-19 ಸೋಂಕಿನಿಂದ 103 ಮಂದಿ ಪೊಲೀಸರು ಪ್ರಾಣ ಬಿಟ್ಟಿದ್ದು, 9600ಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು ತಗುಲಿತ್ತು. ಆದರೆ ಈ ಬಾರಿ ಇಡೀ ಪೊಲೀಸ್ ಇಲಾಖೆಯ ಬಹುಪಾಲು ಸಿಬ್ಬಂದಿಗೆ ಲಸಿಕೆ ನೀಡಿರುವುದರಿಂದ ಸೋಂಕಿತರು ಮತ್ತು ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ಹೇಳಿದ್ದಾರೆ.
Recommended Video

ಕೊರೊನಾವೈರಸ್ ಲಸಿಕೆ ಪಡೆದ ಸಿಬ್ಬಂದಿ ವಿವರ
ಕರ್ನಾಟಕದಲ್ಲಿ 87,917 ಪೊಲೀಸ್ ಸಿಬ್ಬಂದಿ ಪೈಕಿ ಶೇ.96ರಷ್ಟು ಅಂದರೆ 84,917 ಸಿಬ್ಬಂದಿ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಶೇ.82ರಷ್ಟು ಅಂದರೆ 72,648 ಪೊಲೀಸ್ ಸಿಬ್ಬಂದಿ 2ನೇ ಡೋಸ್ ಕೊರೊನಾವೈರಸ್ ಲಸಿಕೆ ಪಡೆದುಕೊಂಡಿದ್ದಾರೆ. ಉಳಿದ 2993 ಸಿಬ್ಬಂದಿಯ ಪೈಕಿ 2557 ಪೊಲೀಸ್ ಸಿಬ್ಬಂದಿಯು ಲಸಿಕೆ ಪಡೆಯುವುದಕ್ಕೆ ಸಾಧ್ಯವಾಗದಂತಾ ಆರೋಗ್ಯ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಬಾಕಿ ಉಳಿದ 436 ಸಿಬ್ಬಂದಿ ಲಸಿಕೆ ಪಡೆಯಬೇಕಿದೆ ಎಂದು ಪ್ರವೀಣ್ ಸೂದ್ ಹೇಳಿದ್ದಾರೆ.












Click it and Unblock the Notifications