ಗ್ರಾಮ ಪಂಚಾಯಿತಿಗಳನ್ನು ಬಿಜೆಪಿ ಅಡ್ಡೆಯಾಗಿಸಲು ಹೊರಟಿದೆ- ಎಎಪಿ
ಬೆಂಗಳೂರು, ಮೇ 16: ಯಾವುದೇ ದುರಂತವಾದರೂ, ಅದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಬಿಜೆಪಿ, ಕೊರೋನಾ ಸೋಂಕನ್ನು ನೆಪವಾಗಿಟ್ಟುಕೊಂಡು ಗ್ರಾಮ ಪಂಚಾಯಿತಿ ಚುನಾವಣೆಯನ್ನು 6 ತಿಂಗಳುಗಳ ಕಾಲ ಮುಂದೂಡುತ್ತಿರುವುದು ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನಡೆ ಖಂಡನೀಯ ಎಂದು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ರಾಜ್ಯ ಮಾಧ್ಯಮ ಸಂಚಾಲಕರ ಜಗದೀಶ್ ವಿ ಸದಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಒಟ್ಟಾರೆ 6,012 ಗ್ರಾಮ ಪಂಚಾಯತಿಗಳಿದ್ದು, ಕೆಲವು ಪಂಚಾಯಿತಿಗಳನ್ನು ಹೊರತುಪಡಿಸಿದರೆ, ಬಹುತೇಕ ಪಂಚಾಯಿತಿಗಳ ಅವಧಿ ಜೂನ್ ವೇಳೆಗೆ ಕೊನೆಯಾಗಲಿದೆ. ಲಾಕ್‌ಡೌನ್ ನಿಧಾನವಾಗಿ ಸಡಿಲಗೊಳ್ಳುತ್ತಿದೆ. ಈ ಹೊತ್ತಿನಲ್ಲಿ ಚುನಾವಣೆಯನ್ನು 6 ತಿಂಗಳುಗಳ ಕಾಲ ಮುಂದೂಡಲು ಚುನಾವಣಾ ಆಯೋಗಕ್ಕೆ ಈಗಾಗಲೇ ಸರ್ಕಾರವು ಪತ್ರ ಬರೆದಿದೆ .ಚುನಾವಣಾ ಆಯೋಗದಿಂದ ಇದುವರೆವಿಗೂ ಸ್ಪಷ್ಟವಾದ ನಿರ್ಧಾರ ಪ್ರಕಟವಾಗಿಲ್ಲ ಎಂದು ಎಎಪಿ ತಿಳಿಸಿದೆ.
ಕೊರೊನಾ ಪರಿಣಾಮ; ಬಿಬಿಎಂಪಿ ಚುನಾವಣೆ ಮುಂದೂಡಿಕೆ?
ಈ ಮಧ್ಯೆ ಖಾಲಿಯಾಗುವ ಸ್ಥಾನಗಳಿಗೆ ಚುನಾಯಿತ ಪ್ರತಿನಿಧಿಗಳ ಬದಲು ಆಡಳಿತ ಮಂಡಳಿಯನ್ನು ನಿಯೋಜಿಸಲು ಹೊರಟಿರುವುದು ನೋಡಿದರೆ ಸೌಹಾರ್ದಯುತವಾಗಿ ಬದುಕುತ್ತಿರುವ ಗ್ರಾಮಗಳಲ್ಲೂ ಕೋಮುವಾದವನ್ನು ಹರಡಿ ಅಧಿಕಾರ ಪಡೆಯುವ ಹುನ್ನಾರ ಎಂದು ಆರೋಪ ಮಾಡಿದೆ.

ನಾಚೀಕೆಗೇಡಿನ ಸಂಗತಿ
''ಈಗಾಗಲೇ ಆರ್ ಎಸ್ ಎಸ್ ಹಾಗೂ ಬಿಜೆಪಿ ಕಾರ್ಯಕರ್ತರುಗಳನ್ನು ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿಯೂ ನಾಮನಿರ್ದೇಶನ ಸದಸ್ಯರನ್ನಾಗಿಸುವ ಪ್ರಕ್ರಿಯೆ ಪಕ್ಷದಲ್ಲಿ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ನೆಲೆಯೇ ಇಲ್ಲದ ಬಿಜೆಪಿ ವಾಮಮಾರ್ಗದ ಮೂಲಕ ಹಣ ಹಾಗೂ ಅಧಿಕಾರವನ್ನು ಕಬಳಿಸುವ ಕೆಟ್ಟ ಚಾಳಿ ಇದಾಗಿದೆ. ಬಿಜೆಪಿ ತನ್ನ ಅಜೆಂಡಾವನ್ನು ಎಲ್ಲಾ ಕಡೆ ಪಸರಿಸಲು ಈ ಸಂದಿಗ್ಧ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿರುವುದು ನಾಚೀಕೆಗೇಡಿನ ಸಂಗತಿ.'' ಎಂದಿದೆ ಎಎಪಿ

ಕೆಟ್ಟ ಸಂಪ್ರದಾಯ
''ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿರುವ ಬಿ.ಎಸ್.ಯಡಿಯೂರಪ್ಪನವರು ಇದುವರೆಗೂ ಒಂದು ಬಾರಿಯೂ ಬಹುಮತವನ್ನು ಪಡೆಯದೇ ಕೇವಲ ಆಪರೇಷನ್ ಕಮಲ ಎನ್ನುವ ಕೆಟ್ಟ ಸಂಪ್ರದಾಯದ ಮೂಲಕವೇ ಅಧಿಕಾರ ಹಿಡಿದಿರುವುದಲ್ಲದೇ. ಗ್ರಾಮ ಪಂಚಾಯಿತಿಗಳಲ್ಲೂ ಸಹ ಇದೇ ರೀತಿಯ ರಾಜಕಾರಣ ಮಾಡಲು ಹೊರಟಿರುವುದನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ.'' ಎಂದಿದ್ದಾರೆ ಜಗದೀಶ್ ವಿ ಸದಂ.

ಬ್ರಹ್ಮಾಂಡ ಭ್ರಷ್ಟಾಚಾರ
''ಅಧಿಕಾರ ಹಿಡಿದ ಕಡೆಯೆಲ್ಲಾ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುವುದನ್ನೆ ಚಾಳಿ ಮಾಡಿಕೊಂಡಿರುವ ಬಿಜೆಪಿಯ ನಾಯಕರು ಲಾಕ್‌ಡೌನ್ ವೇಳೆ ಹಂಚಲು ಇದ್ದ ಆಹಾರವನ್ನೂ ಕದ್ದು ತಮ್ಮ ಹೆಸರಿನಲ್ಲಿ ಹಂಚಿದ್ದು, ಬಿಬಿಎಂಪಿಯ ಕಡತಗಳ ಕೊಠಡಿಯನ್ನೇ ಸುಟ್ಟು ಹಾಕಿದ್ದು, ಗಣಿ ಹಗರಣ ಹೀಗೆ ಸಾಲು ಸಾಲು ಲೂಟಿ ಮಾಡಿ ಈಗ ಅಧಿಕಾರ ವಿಕೇಂದ್ರೀಕರಣ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ಕೊಡಲು ಮುಂದಾಗಿದೆ.'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನತೆಗೆ ಸಹಾಯ ಮಾಡಿ
''ಸಂಘ ಪರಿವಾರದ ಸೂಚನೆಯಂತೆ ಮೂಲೆ ಮೂಲೆಯಲ್ಲಿರುವ ಬಿಜೆಪಿ ಕಾರ್ಯಕರ್ತರನ್ನು ಆಯ ಕಟ್ಟಿನ ಜಾಗದಲ್ಲಿ ಕೂರಿಸುತ್ತಿರುವುದು ನೋಡಿದರೆ ಯಾವುದೇ ನಿರ್ಧಾರದ ಮೇಲೆ ಮುಖ್ಯಮಂತ್ರಿಗಳು ನಿಯಂತ್ರಣ ಹೊಂದಿಲ್ಲ ಎನ್ನಬಹುದು. ಈ ರೀತಿಯ ಅಧಿಕಾರದ ಲಾಲಸೆಯನ್ನು ಬಿಟ್ಟು ಸಂಕಷ್ಟದಲ್ಲಿ ಇರುವ ಜನತೆಗೆ ಸಹಾಯ ಮಾಡುವ ಬುದ್ಧಿಯನ್ನು ಬೆಳೆಸಿಕೊಳ್ಳಿ ಎಂದು ಆಮ್ ಆದ್ಮಿ ಪಕ್ಷ ಸಲಹೆ ನೀಡಿದೆ.