ಹೆತ್ತ ಮಗುವನ್ನೇ ಕೊಂದ ನಿಷ್ಕರುಣಿ ತಾಯಿ
ಹೆತ್ತ ತಾಯಿಯೇ 1 ವರ್ಷದ ಮಗನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕೇಶವಾರ ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ, ಏಪ್ರಿಲ್ 22: ಹೆತ್ತ ತಾಯಿಯೇ 1 ವರ್ಷದ ಮಗನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕೇಶವಾರ ಗ್ರಾಮದಲ್ಲಿ ನಡೆದಿದೆ. 1 ವರ್ಷದ ವಿನಯ್ ಕೊಲೆಯಾದ ದುರ್ದೈವಿ.
ತಾಯಿ ನಿರ್ಮಲಾ ಜನ್ಮ ಕೊಟ್ಟ ಮಗನ ಮೇಲೆಯೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಬಳಿಕ ಮನೆಯಿಂದ ಹೊರಗೆ ಓಡಿ ಬಂದು 'ನನ್ನ ಮಗನನ್ನು ದೆವ್ವ ಕೊಂದು ಬಿಟ್ಟಿದೆ' ಎಂದು ರಂಪ ಮಾಡಿದ್ದಾಳೆ.[ಮಾವಿನ ತೋಟದಲ್ಲಿ ಬೇಕೆಂದ ಹಣ್ಣು ಖರೀದಿಸಬೇಕಾ, ಹತ್ತಿ ಬಸ್ಸು..]

ಆತಂಕಗೊಂಡ ಗ್ರಾಮಸ್ಥರು ಮನೆಗೆ ಹೋಗಿ ಗಮನಿಸಿದಾಗ ಮಗು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವಕ್ಕೆಲ್ಲ ಕಾರಣ ತಾನಲ್ಲ ಎಂದು ಮಹಿಳೆ ಹೇಳುತ್ತಿದ್ದರೂ, ಆಕೆ ಗರ್ಭಿಣಿಯಾಗಿದ್ದಾಗಲೂ ಹೀಗೆಯೇ ವರ್ತಿಸುತ್ತಿದ್ದಳು ಎಂದು ಆಕೆಯ ಪತಿ ರಾಜೇಶ್ ಹೇಳಿದ್ದಾರೆ.
ಮೂಲತಃ ಆಂಧ್ರದ ಪುಂಗನೂರು ಮೂಲದ ರಾಜೇಶ್ ಹಾಗೂ ನಿರ್ಮಲ ಕಳೆದ ಆರು ತಿಂಗಳ ಹಿಂದೆಯಷ್ಟೇ ಕೇಶವಾರ ಗ್ರಾಮಕ್ಕೆ ಬಂದು ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು. ರಾಜೇಶ್ ಬೋರ್ ವೆಲ್ ರೀ ಡ್ರಿಲ್ಲಿಂಗ್ ಕೆಲಸ ಮಾಡುತ್ತಿದ್ದು ಮನೆಯಲ್ಲಿ ಮಗುವಿನ ಜೊತೆ ನಿರ್ಮಲ ಮಾತ್ರ ಇರುತ್ತಿದ್ದಳು.

ಮನೆಯಲ್ಲಿನ ದೇವರ ಫೋಟೋ ಇದ್ದಕ್ಕಿದತೆ ಓಡೆದು ಹೋಗಿದೆ. ದೆವ್ವ ಮನೆಗೆ ಬಂದು ಮೊದಲು ಮಗುವನ್ನ ಕೊಂದು, ನಂತರ ನನ್ನನ್ನ ನೇಣಿಗೆ ಹಾಕಲು ಪ್ರಯತ್ನಿಸಿತ್ತು.. ನಾನು ಆಗ ತಪ್ಪಿಸಿಕೊಂಡು ಓಡಿ ಹೋದೆ ಎಂದು ವಿಚಿತ್ರ ಕತೆಗಳನ್ನು ಗಂಡನ ಬಳಿ ಹೇಳಿದ್ದಾಳೆ.
ಸದ್ಯ ಮಗುವಿನ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ನಿರ್ಮಲಾಳನ್ನು ಬಂಧಿಸಿರುವ ಚಿಕ್ಕಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications