ಬೈಕ್ ಕದ್ದವ ಪೊಲೀಸರಿಗೆ ಬರೆದ ತಪ್ಪೊಪ್ಪಿಗೆ ಪತ್ರ!
ಮಂಡ್ಯ, ಜೂ.16 : ಬೈಕ್ ಕಳವು ಮಾಡಿದ್ದ ಆರೋಪಿಗೆ ತನ್ನ ತಪ್ಪಿನ ಅರಿವಾಗಿ, ಬೈಕ್‌ಅನ್ನು ಪೊಲೀಸ್ ಠಾಣೆ ಮುಂದೆ ನಿಲ್ಲಿಸಿ ಪೊಲೀಸರಿಗೆ ಪತ್ರ ಬರೆದು ಹೋಗಿರುವ ವಿಚಿತ್ರ ಘಟನೆ ಮಂಡ್ಯದಲ್ಲಿ ನಡೆದಿದೆ. ಕಳವು ಮಾಡಲಾಗಿದ್ದ ಬೈಕ್ ಚಾಮರಾಜನಗರ ಜಿಲ್ಲೆಗೆ ಸೇರಿದ್ದಾಗಿದೆ.
ಅನಾಮಿಕ ವ್ಯಕ್ತಿಯೊಬ್ಬ ಫೆ. 11ರಂದು ರಾತ್ರಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ಹೊಂಡಾ ಆಕ್ಟೀವಾ ಬೈಕ್‌ಅನ್ನು ಕದ್ದಿದ್ದ. 4 ತಿಂಗಳ ನಂತರ ಆತನಿಗೆ ತನ್ನ ತಪ್ಪಿನ ಅರಿವಾಗಿದ್ದು, ಜೂನ್ 5 ರಂದು ಮಂಡ್ಯದ ಪೂರ್ವ ಪೊಲೀಸ್ ಠಾಣೆ ಬಳಿ ಬೈಕ್‌ನಿಲ್ಲಿಸಿ, ಪತ್ರ ಬರೆದಿಟ್ಟು ಹೋಗಿದ್ದಾನೆ. [ಮೈಸೂರು ಪೊಲೀಸರಿಗೆ ವಾಟ್ಸಪ್ ಮೂಲಕ ದೂರು ಕೊಡಿ]

ಅಪರಿಚಿತ ವಾಹನವನ್ನು ನೋಡಿದ ಪೊಲೀಸರು ಅದನ್ನು ಪರಿಶೀಲಿಸಿದಾಗ ಅದರಲ್ಲಿ ಪತ್ರ ಪತ್ತೆಯಾಗಿತ್ತು. ಪತ್ರದಲ್ಲಿ ನನಗೆ ತಪ್ಪಿನ ಅರಿವಾಗಿದ್ದು, ವಾಹನವನ್ನು ಇಲ್ಲಿ ಸಿಲ್ಲಿಸಿದ್ದೇನೆ. ಇದನ್ನು ಸಂಬಂಧಪಟ್ಟವರಿಗೆ ತಲುಪಿಸಿ ಎಂದು ಕಳ್ಳ ಪತ್ರದಲ್ಲಿ ಮನವಿ ಮಾಡಿದ್ದಾನೆ. [ನಾಯಿ ಚರ್ಮಕ್ಕೆ ಬಣ್ಣ ಬಳಿದು ಹುಲಿ ಚರ್ಮ ಅಂದ್ರು!]
ಪತ್ರದಲ್ಲೇನಿದೆ? : 'ನಾನು ಈ ಬೈಕ್‌ಅನ್ನು ಕಳವು ಮಾಡಿದ್ದೇನೆ. ನನಗೀಗ ನನ್ನ ತಪ್ಪಿನ ಅರಿವಾಗಿದ್ದು ಜ್ಞಾನೋದಯವಾಗಿದೆ. ನಾನು ಈಗ ದುಃಖ ಪಡುತ್ತಿದ್ದೇನೆ. ನಾನು ಗುಂಡ್ಲುಪೇಟೆಯಿಂದ ಇದನ್ನು ಕಳವು ಮಾಡಿದ್ದು ದಯವಿಟ್ಟು ಇದು ಯಾರದೋ ಅವರಿಗೆ ತಲುಪಿಸಿ ನನಗೆ ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡಿ. ನಿಮ್ಮ ಮೇಲಿನ ನಂಬಿಕೆಯಿಂದ ಬೈಕ್ ನಿಲ್ಲಿಸಿ ಹೋಗುತ್ತಿದ್ದೇನೆ'.
ಪತ್ರ ನೋಡಿ ಆಶ್ಚರ್ಯಗೊಂಡ ಪೊಲೀಸರು ಬೈಕ್ ಮತ್ತು ಪತ್ರವನ್ನು ಚಾಮರಾಜನಗರ ಜಿಲ್ಲಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಸದ್ಯದಲ್ಲೇ ಬೈಕ್ ಕಳೆದುಕೊಂಡವರಿಗೆ ಸಿಗಲಿದೆ.












Click it and Unblock the Notifications