Breaking; ಕರ್ನಾಟಕದಲ್ಲಿ 832 ಹೊಸ ಕೋವಿಡ್ ಪ್ರಕರಣ ದಾಖಲು
ಬೆಂಗಳೂರು, ಡಿಸೆಂಬರ್ 31; ಕರ್ನಾಟಕದಲ್ಲಿ 832 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಇಂದು 23 ಕೋವಿಡ್ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.
ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ 24 ಗಂಟೆಯಲ್ಲಿ 335 ಜನರು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 8,712 ಆಗಿದೆ. 24 ಗಂಟೆಯಲ್ಲಿ 8 ಜನರು ಮೃತಪಟ್ಟಿದ್ದಾರೆ.
ಕರ್ನಾಟಕ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3007337. ಒಟ್ಟು ಡಿಸ್ಚಾರ್ಜ್ ಆದವರು 2960261. ಒಟ್ಟು ಮೃತಪಟ್ಟವರು 38335. ರಾಜ್ಯದ ಪಾಸಿಟಿವಿಟಿ ದರ 0.70 ಆಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ರಾಜ್ಯದಲ್ಲಿ 22,102 ಆಂಟಿಜೆನ್, 95,815 ಆರ್‌ಟಿಪಿಸಿಆರ್ ಸೇರಿದಂತೆ ಒಟ್ಟು 1,17,917 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ. ಕರ್ನಾಟಕದಲ್ಲಿ 23 ಹೊಸ ಓಮಿಕ್ರಾನ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ.
ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಗುರುವಾರ ರಾಜ್ಯದಲ್ಲಿ 707 ಹೊಸ ಪ್ರಕರಣ ದಾಖಲಾಗಿತ್ತು. ಹೊಸ ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿಯೇ ಹೆಚ್ಚು ಪ್ರಕರಣಗಳಿವೆ.
ಬೆಂಗಳೂರಿನಲ್ಲಿ ಎಷ್ಟು?: ಬೆಂಗಳೂರು ನಗರದಲ್ಲಿ 656 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದ ಸಕ್ರಿಯ ಪ್ರಕರಣಗಳು 7286. 24 ಗಂಟೆಯಲ್ಲಿ ನಗರದಲ್ಲಿ 5 ಜನರು ಮೃತಪಟ್ಟಿದ್ದಾರೆ.
ಬಳ್ಳಾರಿ 6, ಬೆಳಗಾವಿ 12, ಬೆಂಗಳೂರು ಗ್ರಾಮಾಂತರ 5, ಚಿಕ್ಕಮಗಳೂರು 3, ದಕ್ಷಿಣ ಕನ್ನಡ 30, ಧಾರವಾಡ 9, ಗದಗ 1, ಹಾಸನ 11, ಕಲಬುರಗಿ 9, ಕೊಡಗು 21, ಕೋಲಾರ 8, ಮಂಡ್ಯ 7, ಮೈಸೂರು 9, ರಾಮನಗರ 1, ಶಿವಮೊಗ್ಗ 2, ತುಮಕೂರು 3, ಉಡುಪಿ 35, ಉತ್ತರ ಕನ್ನಡ 1, ವಿಜಯಪುರ 1 ಹೊಸ ಪ್ರಕರಣ ದಾಖಲಾಗಿದೆ.
ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಬೀದರ್, ಬಾಗಲಕೋಟೆಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಶೂನ್ಯ.
ಕರ್ನಾಟಕ ಸರ್ಕಾರ ಕೋವಿಡ್ ಹರಡುವಿಕೆ ತಡೆಯಲು ಡಿಸೆಂಬರ್ 28ರಿಂದಲೇ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಜನವರಿ 7ರ ತನಕ ರಾತ್ರಿ 10 ರಿಂದ ಮುಂಜಾನೆ 5 ಗಂಟೆಯ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಡಿಸೆಂಬರ್ 31ರಂದು ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ನಿಷೇಧ ಹೇರಿದೆ. ಕಳೆದ ಎರಡು ದಿನಗಳಿಂದ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಜನವರಿ 7ರ ಬಳಿಕವೂ ರಾಜ್ಯದಲ್ಲಿ ನೈಟ್ ಕರ್ಫ್ಯೂ ಮುಂದುವರೆಸುವ ಕುರಿತು ಇನ್ನೂ ಸರ್ಕಾರ ತೀರ್ಮಾನ ಕೈಗೊಂಡಿಲ್ಲ. ಪರಿಸ್ಥಿತಿ ನೋಡಿಕೊಂಡು ಈ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಲಸಿಕಾ ಅಭಿಯಾನ; ಪ್ರಧಾನಿ ನರೇಂದ್ರ ಮೋದಿ ಘೋಷಣೆಯಂತೆ ಭಾರತದಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳು ಲಸಿಕಾಕರಣಕ್ಕೆ ಒಳಪಡಲಿದ್ದಾರೆ. 2022ರ ಜನವರಿ 3ರ ಸೋಮವಾರ ಲಸಿಕಾ ಅಭಿಯಾನ ಆರಂಭಗೊಳ್ಳಲಿದೆ. ರಾಜ್ಯದಲ್ಲಿಯೂ ಅಂದು ಅಭಿಯಾನಕ್ಕೆ ಚಾಲನೆ ದೊರೆಯಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರವೇ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರಿಗೆ ಪತ್ರವನ್ನು ಬರೆದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಲ್ಲಿ, ವಿಧಾನಸಭಾ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಮಕ್ಕಳ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕ ಕೋವಿಡ್ ಲಸಿಕಾ ಅಭಿಯಾನದಲ್ಲಿ ಮಹತ್ವದ ಸಾಧನೆ ಮಾಡಿದೆ. ರಾಜ್ಯದಲ್ಲಿ ಇದುವರೆಗೂ 8.5 ಕೋಟಿಗಿಂತ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ. 4.75 ಕೋಟಿ ಮೊದಲ ಡೋಸ್ ಹಾಗೂ 3.78 ಕೋಟಿ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications