ಹೊಸ ಸರಕಾರ ಬಂದ ಮೇಲೆ 8 ಚುನಾವಣೆ, ಬಿಜೆಪಿಗೆ ದಕ್ಕಿದ್ದು ಕೇವಲ 3!
Recommended Video

ಬೆಂಗಳೂರು, ಜೂನ್ 13: ರಾಜ್ಯದಲ್ಲಿ ಸರಕಾರ ರಚಿಸಲಾಗದೆ ಭಾರತೀಯ ಜನತಾ ಪಕ್ಷ ತೀವ್ರ ಮುಖಭಂಗ ಅನುಭವಿಸಿತ್ತು. ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ರಚನೆಯಾದ ಬಳಿಕ ನಡೆದ 8 ಚುನಾವಣೆಗಳಲ್ಲಿ 5ರಲ್ಲಿ ಬಿಜೆಪಿ ಸೋತಿದ್ದು, ಕೇವಲ ಮೂರರಲ್ಲಿ ಗೆದ್ದು ಮುಖಭಂಗ ಅನುಭವಿಸಿದೆ.
ಮೈತ್ರಿ ಸರಕಾರ ರಚನೆಯಾದ ಬಳಿಕ ಮೊದಲ ಚುನಾವಣೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿತ್ತು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಯ್ಡು ಗೆಲುವು ಸಾಧಿಸಿದ್ದರು. ಅದರಲ್ಲೂ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದರು. ಹೀಗಿದ್ದೂ ಬಿಜೆಪಿ ಸೋತು ಅಪಮಾನ ಅನುಭವಿಸಿತು.
ನಂತರ ನಡೆದಿದ್ದು ವಿಧಾನ ಪರಿಷತ್ ಚುನಾವಣೆ. ಒಟ್ಟು 6 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ 3 ಕ್ಷೇತ್ರಗಳಲ್ಲಷ್ಟೇ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ, ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಆಯನೂರು ಮಂಜುನಾಥ್ ಗೆಲುವು ಸಾಧಿಸಿದ್ದಾರೆ. ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಅ. ದೇವೇಗೌಡ ಜಯಭೇರಿ ಬಾರಿಸಿದ್ದು ಮೂರು ಸ್ಥಾನಗಳು ಬಿಜೆಪಿ ಪಾಲಾಗಿದೆ.

ಆದರೆ ಉಳಿದ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಲ್ಲಿ ಬಿಜೆಪಿ ವಿಫಲವಾಗಿದೆ.ಈಶಾನ್ಯ ಪದವೀಧರ ಕ್ಷೇತ್ರ ಕಾಂಗ್ರೆಸ್ ಪಾಲಾಗಿದ್ದು ಇಲ್ಲಿ ಚಂದ್ರಶೇಖರ್ ಪಾಟೀಲ್ ಜಯ ಸಾಧಿಸಿದ್ದಾರೆ. ನ್ನುಳಿದಂತೆ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ನ ಮರಿತಿಬ್ಬೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ನ ಎಸ್.ಎಲ್. ಭೋಜೇಗೌಡ ಜಯಶಾಲಿಯಾಗಿದ್ದಾರೆ.
ಇದೇ ವೇಳೆ ಇಂದು ಹೊರಬಿದ್ದ ಜಯನಗರ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಹೀನಾಯವಾಗಿ ಸೋತಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಬಿಜೆಪಿಯ ಬಿ.ಎನ್. ಪ್ರಹ್ಲಾದ್ ರನ್ನು ಸೋಲಿಸಿದ್ದಾರೆ.
ಹೀಗೆ ಒಟ್ಟು 2 ವಿಧಾನಸಭೆ ಮತ್ತು 6 ವಿಧಾನ ಪರಿಷತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಎರಡೂ ವಿಧಾನಸಭೆ ಚುನಾವಣೆಗಳನ್ನು ಗೆದ್ದು ಒಟ್ಟು ಮೂರರಲ್ಲಿ ಗೆಲವು ಸಾಧಿಸಿದೆ. ಜೆಡಿಎಸ್ ಮತ್ತು ಬಿಜೆಪಿ ಕ್ರಮವಾಗಿ 2 ಮತ್ತು ಮೂರು ವಿಧಾನ ಪರಿಷತ್ ಚುನಾವಣೆಗಳಲ್ಲಿ ಗೆದ್ದಿವೆ.












Click it and Unblock the Notifications