7th Pay Commission; ಸರ್ಕಾರಿ ನೌಕರರಿಗೆ ಹೋರಾಟ ಅನಿವಾರ್ಯವೇ?
ಬೆಂಗಳೂರು, ಫೆಬ್ರವರಿ 17; ಹಣಕಾಸು ಸಚಿವರೂ ಆದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ 2024-25ನೇ ಸಾಲಿನ ಬಜೆಟ್ ಮಂಡಿಸಿದರು. ಬಜೆಟ್ ಭಾಷಣದಲ್ಲಿ ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ 7ನೇ ವೇತನ ಆಯೋಗದ ವರದಿ ಜಾರಿ ಕುರಿತು ಸ್ಪಷ್ಟವಾದ ಭರವಸೆ ನೀಡಿಲ್ಲ.
ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ಬಜೆಟ್ ಬಳಿಕ ಪ್ರತಿಕ್ರಿಯೆ ನೀಡಿದ್ದು, ಅಸಮಾಧಾನ ವ್ಯಕ್ತಪಡಿಸಿದೆ. ನೌಕರರ ಸಂಘಟನೆಗಳು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಘ ಉಲ್ಲೇಖ ಮಾಡಿದೆ.

ಈ ಕುರಿತು ಸಂಘದ ಅಧ್ಯಕ್ಷ ರಮೇಶ ಸಂಗಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. 'ಸನ್ಮಾನ್ಯ ಮುಖ್ಯಮಂತ್ರಿಯವರು 2024-25ನೇ ಸಾಲಿನ ಆಯವ್ಯಯ ಮಂಡಿಸಿದ್ದು, ಆಯವ್ಯಯ ಭಾಷಣದಲ್ಲಿ ಸರ್ಕಾರಿ ನೌಕರರ 7ನೇ ವೇತನ ಆಯೋಗದ ಅನುಷ್ಠಾನದ ಕುರಿತು ಹಾಗೂ ಹಳೆ ಪಿಂಚಣಿ ಯೋಜನೆ ಮರು ಸ್ಮಾಪನೆ ಕುರಿತು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದೇ ಇರುವುದು ನಮ್ಮ ಅಧಿಕಾರಿ/ ನೌಕರರಿಗೆ ತೀವ್ರ ನಿರಾಸೆ ಮೂಡಿರುತ್ತದೆ' ಎಂದು ಹೇಳಿದ್ದಾರೆ.
'ಅದಲ್ಲದೇ ಹಳೆಯ ಪಿಂಚಣಿ ಯೋಜನೆಯನ್ನು ಪುನ: ಸ್ಥಾಪಿಸಲು ಪ್ರಸ್ತುತ ಸರ್ಕಾರವು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದರೂ ಸಹ ಅದನ್ನು ಆಯವ್ಯಯದಲ್ಲಿ ಘೋಷಿಸದಿರುವುದು ವಿಷಾದನೀಯ' ಎಂದು ಸರ್ಕಾರ ಒಪಿಎಸ್ ಜಾರಿಗೆ ವಿಳಂಬ ಮಾಡುತ್ತಿರುವುದನ್ನು ಪ್ರಸ್ತಾಪಿಸಿದ್ದಾರೆ.
'ಈಗಾಗಲೇ 7ನೇ ವೇತನ ಆಯೋಗದ ಅನುಷ್ಠಾನವು ವಿಳಂಬವಾಗಿರುವ ಕಾರಣ ಶೀಘ್ರದಲ್ಲೇ ಸರ್ಕಾರವು ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಅಂತಿಮವಾಗಿ ನೌಕರರ ಸಂಘಟನೆಗಳು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆಂದು ಸ್ಪಷ್ಟಪಡಿಸುತ್ತಾ, ಕೂಡಲೇ ಮೇಲ್ಕಂಡ ಬೇಡಿಕೆಗಳ ಬಗ್ಗೆ, ಕ್ರಮ ಕೈಗೊಳ್ಳುವಂತೆ ನಮ್ಮ ಸಂಘವು ಸರ್ಕಾರಕ್ಕೆ ಆಗ್ರಹಿಸುತ್ತದೆ' ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಹೇಳಿದ್ದೇನು?; ಶುಕ್ರವಾರ ಸಿದ್ದರಾಮಯ್ಯ 3,71,383 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದರು. ಭಾಷಣದಲ್ಲಿ 7ನೇ ರಾಜ್ಯ ವೇತನ ಆಯೋಗದ ಕುರಿತು ಉಲ್ಲೇಖಿಸಿದರು. ಆದರೆ ಹಳೆ ಪಿಂಚಣಿ ವ್ಯವಸ್ಥೆ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಲಿಲ್ಲ.
ಈಗಾಗಲೇ ಸರ್ಕಾರ ಕೆ. ಸುಧಾಕರ್ ನೇತೃತ್ವದಲ್ಲಿ ರಾಜ್ಯ 7ನೇ ವೇತನ ಆಯೋಗವನ್ನು ರಚನೆ ಮಾಡಿದೆ. ಭಾಷಣದಲ್ಲಿ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗವನ್ನು ರಚಿಸಲಾಗಿದ್ದು, ಆಯೋಗದ ವರದಿ ಸ್ವೀಕರಿಸಿದ ನಂತರ ಪರಿಶೀಲಿಸಿ ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.
ಬಜೆಟ್ ಭಾಷಣದಲ್ಲಿ ಸರ್ಕಾರಿ ನೌಕರರ ಬೇಡಿಕೆಯಂತೆ ಎನ್‌ಪಿಎಸ್ ರದ್ದು ಮಾಡಿ ಹಳೆ ಪಿಂಚಣಿ ಯೋಜನೆ ಜಾರಿ ಮಾಡುವುದು, ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ ಎಂಬುದು ಸರ್ಕಾರಿ ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ.
ಕರ್ನಾಟಕ ಸರ್ಕಾರ 2023ರ ನವೆಂಬರ್‌ನಲ್ಲಿ ರಾಜ್ಯ 7ನೇ ವೇತನ ಆಯೋಗದ ಅವಧಿಯನ್ನು 15/3/2024ರ ತನಕ ವಿಸ್ತರಣೆ ಮಾಡಿದೆ. ಈಗ ಆಯೋಗ ವರದಿ ನೀಡುವ ಮಾರ್ಚ್ 15ರ ಹೊತ್ತಿಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಇದೆ.
ಈ ಹಿನ್ನಲೆಯಲ್ಲಿ ಬಜೆಟ್‌ನಲ್ಲಿ ವೇತನ ಆಯೋಗದ ಕುರಿತು ಯಾವುದಾದರೂ ಘೋಷಣೆ ಆಗಲಿದೆ? ಎಂಬ ನಿರೀಕ್ಷೆ ಸರ್ಕಾರಿ ನೌಕರರಲ್ಲಿ ಇತ್ತು. ಆದರೆ ಬಜೆಟ್ ಭಾಷಣದ ಬಳಿಕ ನೌಕರರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಬೆಂಗಳೂರಿನಲ್ಲಿ ಫೆಬ್ರವರಿ 27ರಂದು ನಡೆಯಲಿದೆ. ಈ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಅನೇಕ ಸಚಿವರು, ಶಾಸಕರು ಪಾಲ್ಗೊಳ್ಳುತ್ತಿದ್ದಾರೆ.
ಈ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳು ಒಪಿಎಸ್ ಜಾರಿ ಮತ್ತು 7ನೇ ರಾಜ್ಯ ವೇತನ ಆಯೋಗ ವರದಿ ಕುರಿತು ಯಾವುದಾದರೂ ಘೋಷಣೆ ಮಾಡಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications