ಮೈಸೂರು ಒಡೆಯರು; ಗಣರಾಜ್ಯ ದಿನದ ರಾಜಮನೆತದ ಬೇರುಗಳು: ಗಿರೀಶ್ ಲಿಂಗಣ್ಣ ಬರಹ
ಪ್ರತಿವರ್ಷವೂ ಜನವರಿ 26ರಂದು ನಾವು ಪರೇಡುಗಳು, ತ್ರಿವರ್ಣ ಧ್ವಜಗಳು, ಮತ್ತು ಅಪಾರ ಹೆಮ್ಮೆಯಿಂದ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ. ಈ ದಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಮತ್ತು ಆಧುನಿಕ ಭಾರತವನ್ನು ನಿರ್ಮಿಸಿದವರನ್ನು ಸ್ಮರಿಸುತ್ತೇವೆ. ಆದರೆ, ಸಾಮಾನ್ಯವಾಗಿ ಜನರು ಮರೆಯುವಂತಹ ಒಂದು ಅದ್ಭುತವಾದ ಕಥೆಯೂ ಇದೆ. ಅದುವೇ ಭಾರತ ಸ್ವತಂತ್ರವಾಗುವ ಮುನ್ನವೇ ಪ್ರಜಾಪ್ರಭುತ್ವವನ್ನು ಮೈಸೂರು ಮಹಾರಾಜರು ಚಾಲ್ತಿಗೆ ತಂದ ಕಥೆ. (ಬರಹ: ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ )
ಒಡೆಯರ್ ವಂಶ ಮೈಸೂರು ಸಂಸ್ಥಾನವನ್ನು ಶತಮಾನಗಳ ಕಾಲ ಆಳಿದ್ದರೂ, ಅವರ ಆಡಳಿತದ ಸುವರ್ಣಕಾಲ 1800ನೇ ಶತಮಾನದ ಕೊನೆಯಲ್ಲಿ ಮತ್ತು 1900ರ ಆದಿ ಭಾಗದಲ್ಲಿ ಬಂದಿತ್ತು. ಈ ಕಾಲಘಟ್ಟದಲ್ಲಿ ಅವರು ಜಾರಿಗೆ ತಂದ ಸುಧಾರಣೆಗಳು ನಿಜಕ್ಕೂ ಕ್ರಾಂತಿಕಾರಕವಾಗಿದ್ದವು. ಭಾರತದ ಬಹಳಷ್ಟು ಸಂಸ್ಥಾನಗಳ ರಾಜರು ಎಲ್ಲ ನಿರ್ಧಾರಗಳನ್ನೂ ತಾವೇ ತೆಗೆದುಕೊಳ್ಳುತ್ತಿದ್ದರೆ, ಮೈಸೂರು ಮಹಾರಾಜರು ಬೇರೆಯೇ ಮಾರ್ಗದಲ್ಲಿ ಸಾಗಿದ್ದರು. ಅವರು ಅಧಿಕಾರವನ್ನು ತಮ್ಮ ಪ್ರಜೆಗಳೊಡನೆ ಹಂಚಿಕೊಂಡಿದ್ದರು!

1881ರಲ್ಲಿ ಮಹಾರಾಜ 10ನೇ ಚಾಮರಾಜೇಂದ್ರ ಒಡೆಯರ್ ಹೊಸ ಇತಿಹಾಸವನ್ನೇ ನಿರ್ಮಿಸಿದ್ದರು. ಅವರು ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಆರಂಭಿಸಿದರು. ಇದು ಭಾರತದ ಯಾವುದೇ ರಾಜಾಡಳಿತದ ಸಂಸ್ಥಾನದಲ್ಲಿ ಇಂತಹ ಮೊತ್ತಮೊದಲ ಸುಧಾರಣೆಯಾಗಿತ್ತು. ಈ ಸುಧಾರಣೆ ಏನು ಎಂದೊಮ್ಮೆ ಆಲೋಚಿಸಿ. ಸಮಾಜದ ವಿವಿಧ ವರ್ಗಗಳ 144 ಜನರಿಗೆ ಸಂಸ್ಥಾನದ ಆಡಳಿತ ಹೇಗೆ ನಡೆಯಬೇಕು ಎಂದು ನಿರ್ಧರಿಸುವ ಸಭೆಗಳಲ್ಲಿ ಪಾಲ್ಗೊಂಡು, ಚರ್ಚಿಸಲು ಅವಕಾಶ ಕಲ್ಪಿಸಲಾಗಿತ್ತು. ವ್ಯಾಪಾರಿಗಳು, ಭೂಮಾಲೀಕರು ಮತ್ತು ಸ್ಥಳೀಯ ನಾಯಕರು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿ, ಬಜೆಟ್ ಕುರಿತು ಚರ್ಚಿಸಿ, ಪ್ರಮುಖ ನಿರ್ಧಾರಗಳ ಮೇಲೆ ತಮ್ಮ ಪ್ರಭಾವ ಬೀರಲು ಸಾಧ್ಯವಾಗಿತ್ತು. ಭಾರತದ ಯಾವುದೇ ಪ್ರದೇಶಗಳು ಇಂತಹ ಆಲೋಚನೆ ಹೊಂದುವ ದಶಕಗಳ ಮುನ್ನವೇ ಮೈಸೂರಿನಲ್ಲಿ ಈ ಸುಧಾರಣೆ ಬಂದಿತ್ತು. ಮಹಾರಾಜರು ʼಪ್ರಜೆಗಳ ಧ್ವನಿಯೂ ಮುಖ್ಯʼ ಎಂಬ ಸಂದೇಶವನ್ನು ರವಾನಿಸಿದ್ದರು.
ಇನ್ನು 1902ರಿಂದ 1940ರ ತನಕ ಆಡಳಿತ ನಡೆಸಿದ, ರಾಜರ್ಷಿ ಎಂದೇ ಪ್ರಸಿದ್ಧರಾದ ನಾಲ್ವಡಿ ಕೃಷ್ಣರಾಜ ಒಡೆಯರ ಅವಧಿಯಲ್ಲಿ ಪ್ರಜಾಪ್ರಭುತ್ವದ ಪ್ರಯೋಗಗಳು ಸಾಕಷ್ಟು ಪ್ರಗತಿ ಸಾಧಿಸಿದವು. ಓರ್ವ ರಾಜ ಕೇವಲ ಆಡಳಿತಗಾರನಾಗಿ ಇರುವ ಬದಲು, ತನ್ನ ಪ್ರಜೆಗಳಿಗೆ ಸೇವೆ ಸಲ್ಲಿಸಲು ಬಯಸುವುದನ್ನೊಮ್ಮೆ ಊಹಿಸಿಕೊಳ್ಳಿ. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಸಂಸ್ಥಾನವನ್ನು ಮಾದರಿ ರಾಜ್ಯವಾಗಿಸಲು ಶ್ರೇಷ್ಠ ಇಂಜಿನಿಯಿರ್ ಆಗಿದ್ದ ಸರ್ ಎಂ ವಿಶ್ವೇಶ್ವರಯ್ಯ ಅವರೊಡನೆ ಕಾರ್ಯಾಚರಿಸಿದ್ದರು.
1907ರಲ್ಲಿ ಮಹಾರಾಜರು ಈ ಶಾಸನ ಸಭೆಯನ್ನು ಎರಡು ಮನೆಗಳ ವ್ಯವಸ್ಥೆಯಾಗಿ ಬದಲಾಯಿಸಿದರು. ಇದು ಆಧುನಿಕ ಸಂಸದೀಯ ವ್ಯವಸ್ಥೆಯನ್ನು ಹೋಲುವಂತಿತ್ತು. ಈಗ ಈ ವ್ಯವಸ್ಥೆಯಡಿ ಸರ್ಕಾರದ ವೆಚ್ಚವನ್ನು ಪ್ರಜೆಗಳಿಗೆ ತಿಳಿಯಲು ಸಾಧ್ಯವಾಗುತ್ತದೆ. ಆದರೆ, ಮೈಸೂರು ಸಂಸ್ಥಾನದಲ್ಲಿ ಆಗಲೇ ಬಜೆಟ್ ಕುರಿತ ಪಾರದರ್ಶಕತೆ ಮತ್ತು ಜನ ಸಾಮಾನ್ಯರಿಗೆ ಹೆಚ್ಚಿನ ಪಾಲ್ಗೊಳ್ಳುವಿಕೆಯ ಅವಕಾಶಗಳಿದ್ದವು. ಭೂ ಸುಧಾರಣೆ, ತೆರಿಗೆ ಮತ್ತು ಸಾರ್ವಜನಿಕ ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದ ಕಾನೂನುಗಳ ಕುರಿತು ಚರ್ಚೆಗಳು ನಡೆದು, ಚುನಾಯಿತ ಸದಸ್ಯರು ಹೊಸ ಕಾನೂನುಗಳನ್ನು ರೂಪಿಸಿದ್ದರು. ಭಾರತದ ರಾಷ್ಟ್ರೀಯ ನಾಯಕರು ಇಂತಹ ಸಾಧ್ಯತೆಗಳನ್ನು ಮನಗಂಡು, ಚರ್ಚಿಸುವ ಅದೆಷ್ಟೋ ಮುನ್ನವೇ ಮೈಸೂರಿನಲ್ಲಿ ಇಂತಹ ಸುಧಾರಣೆಗಳಾಗಿದ್ದವು.
ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿ ಕೇವಲ ರಾಜಕೀಯ ಸುಧಾರಣೆಗಳಿಗೆ ಸೀಮಿತವಾಗಿರಲಿಲ್ಲ. ನೈಜ ಸುಧಾರಣೆ ಎನ್ನುವುದು ಜೀವನದ ಎಲ್ಲ ಆಯಾಮಗಳಲ್ಲೂ ಪ್ರಗತಿ ತರಬೇಕು ಎನ್ನುವುದು ಅವರ ದೃಢ ನಂಬಿಕೆಯಾಗಿತ್ತು. ಅವರು ವಿದ್ಯಾರ್ಥಿಗಳಿಗೆ, ಅದರಲ್ಲೂ ಹೆಣ್ಣುಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಉಚಿತ ಮತ್ತು ಕಡ್ಡಾಯವಾಗಿಸಿದರು. ಬಹುತೇಕ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣವೇ ಇಲ್ಲದ ಕಾಲಘಟ್ಟದಲ್ಲಿ ಕಡ್ಡಾಯ ಶಿಕ್ಷಣವನ್ನು ಜಾರಿಗೆ ತರುವುದು ಎಂತಹ ಕ್ರಾಂತಿಕಾರಿ ಸುಧಾರಣೆ ಎಂದೊಮ್ಮೆ ಊಹಿಸಿ! 1916ರಲ್ಲಿ ನಾಲ್ವಡಿಯವರು ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಇದು ಭಾರತದ ಆರನೇ ವಿಶ್ವವಿದ್ಯಾಲಯವಾಗಿದ್ದು, ರಾಜಾಡಳಿತದ ಸಂಸ್ಥಾನದಲ್ಲಿ ಮೊದಲನೇ ವಿಶ್ವವಿದ್ಯಾಲಯವಾಗಿತ್ತು. ಈ ವಿಶ್ವವಿದ್ಯಾಲಯ ವಿಜ್ಞಾನ, ಕಲೆ ಮತ್ತು ಸಾರ್ವಜನಿಕ ಸೇವಾ ಕ್ಷೇತ್ರಗಳಲ್ಲಿ ಮಹಾನ್ ಸಾಧಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿತು.
ಇನ್ನು ನಾಲ್ವಡಿ ಕೃಷ್ಣರಾಜ ಒಡೆಯರ ಮಹೋನ್ನತ ಸಾಧನೆ ಎಂದರೆ ಅದ್ಭುತವಾದ ಕೃಷ್ಣರಾಜಸಾಗರ ಅಣೆಕಟ್ಟಿನ ನಿರ್ಮಾಣ. ಈ ಅಣೆಕಟ್ಟು ಸಾವಿರಾರು ರೈತರಿಗೆ ನೀರು ಒದಗಿಸಿ, ಮನೆಗಳು ಮತ್ತು ಕಾರ್ಖಾನೆಗಳಿಗೆ ವಿದ್ಯುತ್ ಉತ್ಪಾದಿಸಿತು. ನಾಲ್ವಡಿಯವರು ಭದ್ರಾವತಿ ಉಕ್ಕಿನ ಕಾರ್ಖಾನೆ ಮತ್ತು ಮೈಸೂರು ಗಂಧದ ಎಣ್ಣೆಯ ಕಾರ್ಖಾನೆ ಆರಂಭಿಸಿ, ಉದ್ಯೋಗಗಳನ್ನೂ ಸೃಷ್ಟಿಸಿದರು. ಸ್ವತಂತ್ರ ಭಾರತ ಸರ್ಕಾರಕ್ಕೂ ಮುನ್ನವೇ ನಾಲ್ವಡಿಯವರು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದ್ದರು. ಅವರು ಮಹಿಳಾ ಸಬಲೀಕರಣ ಯೋಜನೆಗಳು, ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಿಗೂ ಚಾಲನೆ ನೀಡಿದ್ದರು. ಅವರು ಕೈಗೊಂಡ ಬಹುತೇಕ ಎಲ್ಲ ಸುಧಾರಣೆಗಳೂ ಬಳಿಕ ನಮ್ಮ ಸಂವಿಧಾನದಲ್ಲಿನ ನಿರ್ದೇಶಕ ತತ್ವಗಳಾದ ಸಮಾನತೆ, ಶಿಕ್ಷಣ ಮತ್ತು ಎಲ್ಲರನ್ನೂ ಒಳಗೊಂಡ ಆರ್ಥಿಕ ಸುಧಾರಣೆಗಳ ಭಾಗವಾದವು.
ಭಾರತ 1947ರಲ್ಲಿ ಸ್ವಾತಂತ್ರ್ಯ ಗಳಿಸಿದಾಗ, ಮೈಸೂರಿನ ಕೊನೆಯ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ನೈಜ ದೇಶಪ್ರೇಮವನ್ನು ಪ್ರದರ್ಶಿಸಿದರು. ಆಗಸ್ಟ್ 9, 1947ರಂದು, ಭಾರತ ಸ್ವತಂತ್ರವಾಗುವ ಮುನ್ನವೇ ಅವರು ಭಾರತದ ಏಕೀಕರಣಕ್ಕೆ ಸಹಿ ಹಾಕಿದ ಮೊದಲ ರಾಜರುಗಳ ಸಾಲಿಗೆ ಸೇರಿದರು. ಅವರು ಸ್ವಯಂಪ್ರೇರಿತರಾಗಿ ತನ್ನ ಶ್ರೀಮಂತ ಸಂಸ್ಥಾನವನ್ನು ಭಾರತೀಯ ಒಕ್ಕೂಟದ ಭಾಗವಾಗಿಸಿದರು. ಇದಕ್ಕೆ ಅವರು ಯಾವುದೇ ವಿರೋಧವನ್ನಾಗಲಿ, ಷರತ್ತುಗಳನ್ನಾಗಲಿ ಒಡ್ಡಿರಲಿಲ್ಲ. ಹೈದರಾಬಾದ್, ಕಾಶ್ಮೀರಗಳಂತಹ ರಾಜ್ಯಗಳು ಹಿಂಜರಿದು, ಪರಿಸ್ಥಿತಿಯನ್ನು ಕಷ್ಟಕರವಾಗಿಸಿದರೆ, ಜಯಚಾಮರಾಜೇಂದ್ರ ಒಡೆಯರ್ ಏಕೀಕೃತ ಭಾರತದ ನಿರ್ಮಾಣಕ್ಕಾಗಿ ಸುಗಮವಾಗಿ ತನ್ನ ಅಧಿಕಾರವನ್ನು ಹಸ್ತಾಂತರಿಸಿದರು.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಾವೇಕೆ ಈ ಮಹಾರಾಜರುಗಳನ್ನು ನೆನೆಯಬೇಕು? ಏಕೆಂದರೆ, ನಮ್ಮ ಗಣರಾಜ್ಯ ಪ್ರಜಾಪ್ರಭುತ್ವ, ಸಮಾನತೆ ಮತ್ತು ಪ್ರಗತಿ ಎಂಬ ಸ್ತಂಭಗಳ ಆಧಾರದಲ್ಲಿ ನಿಂತಿದ್ದು, ಮೈಸೂರು ಮಹಾರಾಜರು ಈ ಮೌಲ್ಯಗಳನ್ನು ಭಾರತ ವಸಾಹತುಶಾಹಿ ಆಡಳಿತದ ಸಂಕೋಲೆಯಲ್ಲಿದ್ದಾಗಲೇ ಜಾರಿಗೆ ತಂದಿದ್ದರು. ಅವರ ಪ್ರಜಾಪ್ರತಿನಿಧಿ ಸಭೆಗಳು ನಮ್ಮ ಸಂಸತ್ತಿನ ಆರಂಭಿಕ ಆವೃತ್ತಿಗಳಂತಿದ್ದವು. ಅವರು ಜಾರಿಗೆ ತಂದ ಸಾಮಾಜಿಕ ಸುಧಾರಣೆಗಳು ನಮ್ಮ ಸಂವಿಧಾನ ನೀಡಿರುವ ಭರವಸೆಗಳನ್ನು ಹೋಲುವಂತಿದ್ದವು. ಅವರು ಸ್ವಯಂಪ್ರೇರಿತರಾಗಿ ಭಾರತದ ಭಾಗವಾದದ್ದು ಐಕ್ಯತೆಗೆ ಬಲಪ್ರಯೋಗದ ಅಗತ್ಯವಿಲ್ಲ. ಬದಲಿಗೆ ದೂರದೃಷ್ಟಿ ಮತ್ತು ನಿಸ್ವಾರ್ಥಗಳು ಬೇಕು ಎನ್ನುವ ಸಂದೇಶ ನೀಡಿತ್ತು.
ಈ ಗಣರಾಜ್ಯೋತ್ಸವದಂದು ನಾವು ತ್ರಿವರ್ಣ ಧ್ವಜವನ್ನು ಹಿಡಿಯುವಾಗ, ಈ ಪ್ರಗತಿಪರ ರಾಜರು ಜನರನ್ನು ಆಳುವ ಬದಲು, ಅವರ ಬಲವರ್ಧನೆ ನಡೆಸುವುದೇ ನೈಜ ನಾಯಕತ್ವ ಎಂದು ಸಾಬೀತುಪಡಿಸಿದ್ದನ್ನು ನೆನೆಯೋಣ. ಪ್ರಜಾಪ್ರಭುತ್ವ ಎನ್ನುವುದು ಭಾರತಕ್ಕೆ ವಿದೇಶೀಯರು ನೀಡಿದ ಪರಿಕಲ್ಪನೆಯಲ್ಲ, ಬದಲಿಗೆ ನಮ್ಮ ಮಣ್ಣಲ್ಲೇ ಬೇರೂರಿರುವ, ದೂರದೃಷ್ಟಿಯ ಆಡಳಿತಗಾರರು ಬೆಳೆಸಿರುವ ವ್ಯವಸ್ಥೆ ಎನ್ನುವುದನ್ನು ಮೈಸೂರು ಮಹಾರಾಜರು ಸಾಬೀತುಪಡಿಸಿದ್ದರು. ಅವರು ತಮ್ಮ ಅಧಿಕಾರಕ್ಕಿಂತಲೂ ಜನಹಿತವನ್ನೇ ಆದ್ಯತೆಯನ್ನಾಗಿಸಿಕೊಂಡಿದ್ದರು.
ಪ್ರಜಾಪ್ರಭುತ್ವವಾಗುವತ್ತ ಭಾರತದ ಹೆಜ್ಜೆಗೆ ಬಹಳಷ್ಟು ಜನರ ಕೊಡುಗೆ ಇರುವುದನ್ನು ಈ ಕತೆ ನೆನಪಿಸುತ್ತದೆ. ಇಂತಹ ಅವಿಸ್ಮರಣೀಯ ಕೊಡುಗೆ ನೀಡಿದವರನ್ನು ಗೌರವಿಸುವ ಮೂಲಕ ನಾವು ನಮ್ಮ ರಾಷ್ಟ್ರೀಯ ಪರಿಕಲ್ಪನೆಯನ್ನು ಪೂರ್ಣಗೊಳಿಸಿ, ಅವರು ಕಟ್ಟಲು ನೆರವಾದ ನಮ್ಮ ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಬಲವರ್ಧನೆಗೆ ಕೊಡುಗೆ ನೀಡೋಣ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications