ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಬಿಜೆಪಿ ತ್ವರಿತವಾಗಿ ಮಾಡಬೇಕಿರುವ 7 ಸಂಗತಿ

ಉತ್ತರಪ್ರದೇಶದ ಐತಿಹಾಸಿಕ ಜಯದ ಕರ್ನಾಟಕದ ಗದ್ದುಗೆ ಇನ್ನೇನು ಸಲೀಸು ಎಂದು ಬಿಳಿಮೀಸೆಯಡಿಯಲ್ಲಿ ನಗುತ್ತಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮುಂದೆ ಹಲವಾರು ಸವಾಲುಗಳಿವೆ.

By Prasad
|
Google Oneindia Kannada News

ಬೆಂಗಳೂರು, ಮಾರ್ಚ್ 15 : ಇದೇ ಕ್ಷಣದಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆದರೆ, ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಯಡಿಯೂರಪ್ಪನವರಲ್ಲ, ಅವರ ಮಗ ರಾಘವೇಂದ್ರ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿ ಕಣಕ್ಕಿಳಿದರೂ ಭಾರತೀಯ ಜನತಾ ಪಕ್ಷಕ್ಕೆ ಜಯ ಕಟ್ಟಿಟ್ಟ ಬುತ್ತಿ.

ದೇಶದಾದ್ಯಂತ ಅಲ್ಲದಿದ್ದರೂ ಹಲವಾರು ರಾಜ್ಯಗಳಲ್ಲಿ ನರೇಂದ್ರ ಮೋದಿ ಅಲೆ ಮತ್ತು ಅಮಿತ್ ಶಾ ಅವರ ಚಮತ್ಕಾರ ಅಂಥದೊಂದು ಸನ್ನಿವೇಶವನ್ನು ಸೃಷ್ಟಿ ಮಾಡಿದೆ. ಕರ್ನಾಟಕದ ಮಟ್ಟಿಗೆ ಮೋದಿ ಅಲೆ ಕೆಲಸ ಮಾಡುವುದು ಅಕ್ಷರಶಃ ಸತ್ಯ. ಇದನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿಯೂ ನೋಡಿದ್ದೇವೆ.

ಈ ಕಾರಣಕ್ಕಾಗಿಯೇ, ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಿದ್ದಂತೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದ 74 ವರ್ಷದ ಯಡಿಯೂರಪ್ಪನವರು, "ಕರ್ನಾಟಕದಲ್ಲಿಯೂ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಬಿಜೆಪಿಯನ್ನು ಗೆಲ್ಲಿಸಿಕೊಡಲಿದ್ದಾರೆ" ಎಂದು ಹೇಳಿದ್ದು.

ಕಬ್ಬಿಣ ಬಿಸಿಯಾಗಿದ್ದಾಗಲೇ ಬಡಿಯಬೇಕೆಂಬ ತತ್ತ್ವವನ್ನು ಯಡಿಯೂರಪ್ಪನವರು ಬಲ್ಲರು. ಆದರೆ, ಕೊಂಚ ತಡಕಳ್ಳಿ ಸ್ವಾಮೀ, ಚುನಾವಣೆ ಇನ್ನೂ ಶ್ಯಾನೆ ದೂರ ಐತೆ. ಅಷ್ಟರ ನಡುವಿನಲ್ಲಿ ಬಿಜೆಪಿಯಲ್ಲಿ ಏನು ಬೇಕಾದರೂ ಆಗಬಹುದು.[ಮೋದಿ ಅಗ್ನಿಪರೀಕ್ಷೆ ಗೆದ್ದಿದ್ದಾರೆ: ವಿ.ಶ್ರೀನಿವಾಸ್ ಪ್ರಸಾದ್]

ಇದು ಸಾಧ್ಯವಾಗಬೇಕಾದರೆ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಮಾಡಬೇಕಾದ ಒಂದಿಷ್ಟು ಸಂಗತಿಗಳಿವೆ. ಅವನ್ನು ಗಮನದಲ್ಲಿಟ್ಟರೆ ಮುಂದಿನ ಕೆಲಸ ಬೆಣ್ಣೆಯಲ್ಲಿ ಕೂದಲು ತೆಗೆದಷ್ಟೇ ಸಲೀಸು. ಇಲ್ಲವಾದರೆ, ಒಂದು ಎರಡು ಅರಿಯದವನು ಗಣಿತ ಪರೀಕ್ಷೆ ಬರೆಯಲು ಕುಳಿತಂತಾಗುತ್ತದೆ.

ಉಪಚುನಾವಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು

ಉಪಚುನಾವಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು

ಏಪ್ರಿಲ್ 9ರಂದು, ಭಾನುವಾರ ನಡೆಯಲಿರುವ ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರ ನಂಜನಗೂಡು ಮತ್ತು ಚಾಮರಾಜನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರ ಗುಂಡ್ಲುಪೇಟೆ ಚುನಾವಣೆಯಲ್ಲಿ ಪಕ್ಷದ ಎಲ್ಲ ನಾಯಕರು ತೊಡಗಿಸಿಕೊಳ್ಳುವುದು. ಒಂದು ಶ್ರೀನಿವಾಸ ಪ್ರಸಾದ ರಾಜೀನಾಮೆಯಿಂದ ಮತ್ತು ಮತ್ತೊಂದು ಮಹದೇವ ಪ್ರಸಾದ ನಿಧನದಿಂದ ಉದ್ಭವವಾಗಿರುವುದು. ಎರಡರಲ್ಲೂ ಬಿಜೆಪಿ ವಿರೋಧಿ ಅಲೆ ಇದೆ ಎಂಬುದನ್ನು ಬಿಜೆಪಿ ಮರೆಯಬಾರದು. ಮತದಾರರು ಯಾರಿಗೆ 'ಪ್ರಸಾದ' ನೀಡಲಿದ್ದಾನೆ ಎಂಬುದು ಏಪ್ರಿಲ್ 13ರಂದು ತಿಳಿದುಬರಲಿದೆ.

ಯಡಿಯೂರಪ್ಪನವರಲ್ಲಿ ನಾಯಕತ್ವ ಕಾಣುವುದು

ಯಡಿಯೂರಪ್ಪನವರಲ್ಲಿ ನಾಯಕತ್ವ ಕಾಣುವುದು

ಬಿಜೆಪಿಯಲ್ಲಿ ಯಡಿಯೂರಪ್ಪನವರನ್ನು ಬಿಟ್ಟರೆ ಅಷ್ಟೊಂದು ವರ್ಚಸ್ಸು, ಪ್ರಭಾವ, ಸೆಳೆಯುವ ಶಕ್ತಿಯಿರುವ ನಾಯಕರಿರೋದು ಕಡಿಮೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದ ತೊಡೆತಟ್ಟಿ ನಿಂತಿದ್ದ ಜಟ್ಟಿಗಳ ಮೀಸೆ ಏನಾಯಿತೆಂದು ಕಳೆದ ಚುನಾವಣೆಯಲ್ಲಿ ಎಲ್ಲರೂ ನೋಡಿದ್ದಾರೆ. ಅವರಲ್ಲಿ ಹೂಂಕರಿಸುತ್ತಿರುವುದು ಸದ್ಯಕ್ಕೆ ಒಬ್ಬರೇ. ಕಳೆದ ಬಾರಿ ಮಾಡಿದ ತಪ್ಪು ಮತ್ತೆ ಆಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ.[ಏಪ್ರಿಲ್ ನಲ್ಲಿ ನಡೆಯಲಿದೆ ಗುಂಡ್ಲುಪೇಟೆ-ನಂಜನಗೂಡು ಉಪ ಚುನಾವಣೆ]

ಈಶ್ವರಪ್ಪ ಬ್ಲಾಕ್ ಮೇಲ್ ತಂತ್ರ ಕೈಬಿಡದಿದ್ದರೆ

ಈಶ್ವರಪ್ಪ ಬ್ಲಾಕ್ ಮೇಲ್ ತಂತ್ರ ಕೈಬಿಡದಿದ್ದರೆ

ತಕ್ಕಡಿಯಲ್ಲಿ ತಮಗೆ ಬೆಲೆ ಕಡಿಮೆಯಾಯಿತೆಂದು ತಿಳಿದ ಕೂಡಲೆ ಬಾಲ ಸುಟ್ಟ ಬೆಕ್ಕಿನಂತೆ ಆಡುವ ಈಶ್ವರಪ್ಪನವರು, 'ರಾಯಣ್ಣ ಬ್ರಿಗೇಡ್' ಬ್ಲಾಕ್ ಮೇಲ್ ತಂತ್ರದ ಬಳಕೆಯನ್ನು ಕಡಿಮೆ ಮಾಡಬೇಕಿರುವುದು. ಈ ಬ್ಲಾಕ್ ಮೇಲ್ ತಂತ್ರದಿಂದಾಗಿ ಎತ್ತು ಏರಿಗೆ, ಕೋಣ ನೀರಿಗೆ ಎಂಬಂತೆ ಆಗುವ ಸಂಭವನೀಯತೆಯೇ ಹೆಚ್ಚು. ಅಮಿತ್ ಶಾ ಅವರ ಗದರಿಸಿದಾಗೆಲ್ಲ 'ನಾನು ಯಡಿಯೂರಪ್ಪ ಅಣ್ತಮ್ಮ ಇದ್ದಂತೆ' ಎನ್ನುವ ಈಶ್ವರಪ್ಪ ಮತ್ತೆ ಯಾವಾಗ ಉಲ್ಟಾ ಹೊಡೀತಾರೋ ಆ ಈಶ್ವರನೂ ಬಲ್ಲ!

ಎಲ್ಲರನ್ನೂ ವಿಶ್ವಾಸಕ್ಕೆ ಬಿಎಸ್ವೈ ತೆಗೆದುಕೊಳ್ಳಬೇಕು

ಎಲ್ಲರನ್ನೂ ವಿಶ್ವಾಸಕ್ಕೆ ಬಿಎಸ್ವೈ ತೆಗೆದುಕೊಳ್ಳಬೇಕು

ಎಲ್ಲಕ್ಕಿಂತ ಪ್ರಮುಖವಾಗಿರುವುದೆಂದರೆ, ಯಡಿಯೂರಪ್ಪನವರನ್ನು ಪಕ್ಷದ ಎಲ್ಲ ನಾಯಕರುಗಳನ್ನು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು. ಇದು ಸಾಧ್ಯವಾಗುತ್ತಿಲ್ಲವೆಂದು ತಾನೆ ಆಗಾಗ ಅಸಮಾಧಾನ ಭುಗಿಲೇಳುವುದು. ಮೇಲ್ಮೇಲೆ ಮುಗುಳ್ನಗುತ್ತಲೇ ತನ್ನ ವಿರೋಧಿಗಳಿಗೆ ಬತ್ತಿ ಇಡುವುದು, ತನ್ನ ಆಜ್ಞಾಧಾರಕರಿಗೆ ಮಣೆ ಹಾಕುವುದು ಯಡಿಯೂರಪ್ಪನವರಿಗೆ ಹೊರದೇನೂ ಅಲ್ಲ.[ಸಿಎಂನಿಂದಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೋಲು: ಪೂಜಾರಿ ಭವಿಷ್ಯ]

ಸ್ವಚ್ಛ ನೀರಿನೊಡನೆ ಕೊಚ್ಚೆ ನೀರು

ಸ್ವಚ್ಛ ನೀರಿನೊಡನೆ ಕೊಚ್ಚೆ ನೀರು

ಇರುವ ನಾಯಕರೇ ಸಾಲದೆಂಬಂತೆ, ಹಲವಾರು ಧೀರೋದಾತ್ತ ನಾಯಕರು ಬಿಜೆಪಿಗೆ ಹರಿದುಬರುತ್ತಿದ್ದಾರೆ. ಈ ಪ್ರವಾಹದಲ್ಲಿ ಸ್ವಚ್ಛ ನೀರಿನೊಡನೆ ಕೊಚ್ಚೆ ನೀರು ಹರಿದುಬರದಂತೆ ತಡೆಯುವ ಜವಾಬ್ದಾರಿ ಯಡಿಯೂರಪ್ಪನವರ ಮೇಲಿದೆ. ಇಲ್ಲದಿದ್ದರೆ, ಕೊನೆಗೆ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುವುದರಲ್ಲಿ ಅಚ್ಚರಿಯಿಲ್ಲ. ಮೂಲ ಸದಸ್ಯರನ್ನು ಕಡೆಗಣಿಸಿ, ವಲಸಿಗರಿಗೆ ಟಿಕೇಟು ನೀಡಿ ಹೆಚ್ಚಿನ ಮಹತ್ವ ಕೊಟ್ಟರೆ ಏನಾಗುತ್ತದೆಂದು ಕಾಂಗ್ರೆಸ್ ಸಾಕಷ್ಟು ಕಂಡಿದೆ.

ಎಸ್ಸೆಂ ಕೃಷ್ಣ ಎಂಥ ಪಾತ್ರ ವಹಿಸಲಿದ್ದಾರೆ

ಎಸ್ಸೆಂ ಕೃಷ್ಣ ಎಂಥ ಪಾತ್ರ ವಹಿಸಲಿದ್ದಾರೆ

ಹಿರಿಯ ನಾಯಕರಾಗಿರುವ ಎಸ್ಎಂ ಕೃಷ್ಣರಂಥವರ ಜವಾಬ್ದಾರಿ ಇನ್ನೂ ಹೆಚ್ಚಿನದು. ಅವರು ಒಂದು ವೇಳೆ ಅನ್ಯ ರಾಜ್ಯಕ್ಕೆ ರಾಜ್ಯಪಾಲರಾಗಿ 'ನಿವೃತ್ತ' ಜೀವನ ಕಳೆಯಲು ಹೋಗದಿದ್ದರೆ ಚುನಾವಣಾ ಪ್ರಚಾರದಲ್ಲಿ ಮಹತ್ವದ ಪಾತ್ರ ವಹಿಸಬೇಕಾಗುತ್ತದೆ. ಕೃಷ್ಣರಿಗಿರುವ ವರ್ಚಸ್ಸು ಮಂಡ್ಯದಲ್ಲಿ ದುರ್ಬಲವಾಗಿರುವ ಬಿಜೆಪಿಗೆ ಸಾಕಷ್ಟು ಮತಗಳನ್ನು ಸೆಲೆಯಬಲ್ಲದು. ಕೃಷ್ಣ ಅವರು ರಾಜಕೀಯದಲ್ಲಿ ಸಕ್ರೀಯರಾಗಿರುತ್ತಾರೋ, ನಿವೃತ್ತ ಜೀವನಕ್ಕೆ ಕಾಲಿಡುತ್ತಾರೋ ಎಂಬುದು ಸದ್ಯದಲ್ಲಿಯೇ ತಿಳಿಯಲಿದೆ.

ಮೋದಿ ಅಲೆಯನ್ನೇ ನಂಬಿ ಕೂತರೆ ಗೋವಿಂದ

ಮೋದಿ ಅಲೆಯನ್ನೇ ನಂಬಿ ಕೂತರೆ ಗೋವಿಂದ

ಎಲ್ಲ ರಾಜ್ಯಗಳಲ್ಲೂ ಮೋದಿ ಅಲೆ ಇಲ್ಲ ಎಂಬುದು ಮಣಿಪುರ, ಗೋವಾ, ಪಂಜಾಬ್ ರಾಜ್ಯಗಳಲ್ಲಿ ಸಾಬೀತುಪಡಿಸಿದೆ. ಕರ್ನಾಟಕದಲ್ಲೂ ಮೋದಿ ಹವಾ ಕೆಲಸ ಮಾಡುತ್ತದೆ, ನಾವು ಕೈಕಟ್ಟು ಕುಳಿತರೂ ಸಾಕು ಎಂದು ಯಡಿಯೂರಪ್ಪ ಅಂಡ್ ಪಟಾಲಂ ಮೈಮರೆತು ಕುಳಿತರೆ ಸರಿಯಾದ ಬುದ್ಧಿ ಕಲಿಸಲು ಮತದಾರ ಕಾದು ಕುಳಿತಿರುತ್ತಾನೆ. ಮೋದಿ ಅಲೆಯ ಮೇಲೆಯೇ ತೇಲಿ ಹೋಗಲು ಕರ್ನಾಟಕದ ಮತದಾರರು ಅಂಥ ಮೂರ್ಖರಲ್ಲ.

English summary
Not just Yeddyurappa, even if BJP projects any other leader it will win in assembly election in Karnataka. Narendra Modi wave and Amit Shah's power are so strong at the moment. But, BJP leaders should take precautions to hold everyone together. Here are 7 things BJP should do in Karnataka to become stronger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X