ಶೀಘ್ರದಲ್ಲೇ ಸರ್ಕಾರದ 6ನೇ ಗ್ಯಾರಂಟಿ ಘೋಷಣೆ
ರಾಮನಗರ, ಮಾರ್ಚ್ 01: ಪಂಚ ಗ್ಯಾರಂಟಿಗಳ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಕೊಟ್ಟ ಮಾತಿನಂತೆ ಹಂತ ಹಂತವಾಗಿ ಶಕ್ತಿ ಯೋಜನೆ, ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಅನ್ನಭಾಗ್ಯ ಹಾಗೂ ಯುವ ನಿಧಿ ಯೋಜನೆಯನ್ನ ಜಾರಿಗೊಳಿಸಿದೆ. ಇದೀಗ ಶೀಘ್ರದಲ್ಲೇ ಸರ್ಕಾರದ 6ನೇ ಗ್ಯಾರಂಟಿ ಘೋಷಣೆ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಗುರುವಾರ ಮಾಗಡಿ ಕೋಟೆ ಮೈದಾನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಗ್ಯಾರಂಟಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶೀಘ್ರದಲ್ಲೇ ಸರ್ಕಾರದ 6ನೇ ಗ್ಯಾರಂಟಿ ಘೋಷಣೆ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಜೊತೆಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು. ಇನ್ನೂ ಆಶಾಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಆರನೇ ಗ್ಯಾರಂಟಿ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಅಂದ್ರೆ ಬದ್ಧತೆ. ನಮ್ಮ ಸರ್ಕಾರ ಐದು ಗ್ಯಾರಂಟಿಗಳ ಜಾರಿ ಮಾಡಿ ನುಡಿದಂತೆ ನಡೆದಿದೆ. ವಿಪಕ್ಷಗಳು ನಮ್ಮನ್ನು ಟೀಕೆ ಮಾಡಿದವು. ನಮ್ಮದು ನುಡಿದಂತೆ ನಡೆದ ಸರ್ಕಾರ. ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಗೃಹಲಕ್ಷ್ಮಿ ಅನುಕೂಲ ಆಗಿದೆ. ಕಳೆದ ಐದು ವರ್ಷದಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ನಿಮ್ಮ ಸೇವೆ ಮಾಡಿದ್ದಾರೆ. ರಾಜಕಾರಣದಲ್ಲಿ ಅಧಿಕಾರ ಸಿಕ್ಕಾಗ ಜನಸೇವೆ ಮಾಡುವವರು ಬೆರಳೆಣಿಕೆ ಮಂದಿ. ಅದರಲ್ಲಿ ಡಿ.ಕೆ.ಸುರೇಶ್ ಕೂಡಾ ಒಬ್ಬರು ಎಂದು ಹೇಳಿದರು.
ನಾನೂ ಕೂಡಾ ರಾಮನಭಕ್ತೆ. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ್ದಾರೆ. ತುಂಬಾ ಸಂತೋಷ. ಐದು ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಆದರೆ, ನಮ್ಮ ಸರ್ಕಾರ ಒಂದು ತಿಂಗಳಿಗೆ ಮಹಿಳೆಯರಿಗೆ 4 ಸಾವಿರ ಕೋಟಿ ನೀಡಿ ರಾಮರಾಜ್ಯ ಸ್ಥಾಪನೆಗೆ ಮುಂದಾಗಿದೆ ಎಂದು ಹೇಳಿದರು.
ಇನ್ನೂ ಈ ವೇಳೆ ಡಿ ಕೆ ಸುರೇಶ ಮಾತನಾಡಿ, ನಮ್ಮ ರಾಜ್ಯದ ತೆರಿಗೆ ಹಣವನ್ನು ಬೇರೆ ರಾಜ್ಯಗಳಿಗೆ ನೀಡಲಾಗುತ್ತಿದೆ. ನಮ್ಮ ತೆರಿಗೆ ಹಣವನ್ನು ವಾಪಸ್ ನೀಡಲಿ. ನಮ್ಮ ತೆರಿಗೆ ಹಣವನ್ನು ನಮಗೆ ಕೊಡಿ ಎಂದು ನಾನು ಕೇಳಿದರೆ ನನ್ನನ್ನು ವಿಲನ್ ರೀತಿ ನೋಡ್ತೀರಾ? ನೀವುಗಳು ತೆರಿಗೆ ಹಣ ವಾಪಸ್ ಕೊಟ್ಟಿದ್ದೇ ಆದರೆ ಮಹಿಳೆಯರಿಗೆ ಈಗಿರುವ ಮಾಸಿಕ ಎರಡು ಸಾವಿರದ ಜೊತೆಗೆ ಮತ್ತೆರೆಡು ಸಾವಿರ ರುಪಾಯಿ ಸೇರಿಸಿ ಕೊಡುತ್ತೇವೆ ಎಂದು ಹೇಳಿದರು.
ತೆರಿಗೆಗಳ ರೂಪದಲ್ಲಿ ರಾಜ್ಯದಲ್ಲಿ ಸಂಗ್ರಹವಾಗುವ ರೂ 4.30 ಲಕ್ಷ ಕೋಟಿ ಹಣ ಕೇಂದ್ರಕ್ಕೆ ಹೋಗುತ್ತದೆ. ಆ ಮೊತ್ತದಲ್ಲಿ ಶೇಕಡ 60ರಷ್ಟು ಹಣ ರಾಜ್ಯಕ್ಕೆ ವಾಪಸ್ಸು ಬಂದರೆ ಕರ್ನಾಟಕ ಸರ್ಕಾರ ನೀರಾವರಿ ಯೋಜನೆಗಳನ್ನು ಪೂರ್ತಿಗೊಳಿಸುತ್ತದೆ, ರಸ್ತೆಗಳನ್ನು ನಿರ್ಮಿಸುತ್ತದೆ ಮತ್ತು ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕಡೆ ಹಣ ವ್ಯಯಿಸುತ್ತದೆ ಎಂದು ಸುರೇಶ್ ಹೇಳಿದರು.












Click it and Unblock the Notifications