ಉಕ್ರೇನ್‌ನಿಂದ ಕರ್ನಾಟಕಕ್ಕೆ 55 ವಿದ್ಯಾರ್ಥಿಗಳು ವಾಪಸ್
ಬೆಂಗಳೂರು, ಮಾರ್ಚ್ 02; 'ಆಪರೇಷನ್ ಗಂಗಾ' ಕಾರ್ಯಾಚರಣೆ ಅಡಿಯಲ್ಲಿ ಯುದ್ಧಪೀಡಿತ ಉಕ್ರೇನ್‌ನಿಂದ 55 ಕರ್ನಾಟಕದ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಹಾವೇರಿ ಮೂಲದ ನವೀನ್ ಶೇಖರಪ್ಪ ಗ್ಯಾನಗೌಡರ್ ಎಂಬ ವೈದ್ಯಕೀಯ ವಿದ್ಯಾರ್ಥಿ ಮೃತಪಟ್ಟಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಣೆ ಮಾಡಲು ನಡೆಯುತ್ತಿರುವ 'ಆಪರೇಷನ್ ಗಂಗಾ' ಕಾರ್ಯಾಚರಣೆ ಚುರುಕುಗೊಂಡಿದೆ. ಭಾರತೀಯ ವಾಯುಪಡೆ ಸಹ ಬುಧವಾರದಿಂದ ಕಾರ್ಯಾಚರಣೆಗೆ ಕೈ ಜೋಡಿಸಿದೆ.
ಕರ್ನಾಟಕ ಮೂಲದ 694 ವಿದ್ಯಾರ್ಥಿಗಳು ಉಕ್ರೇನ್‌ನ ವಿವಿಧ ಭಾಗಗಳಲ್ಲಿ ಸಿಲುಕಿದ್ದಾರೆ. ಮಂಗಳವಾರದ ತನಕ 8 ಬ್ಯಾಚ್‌ಗಳಲ್ಲಿ 55 ವಿದ್ಯಾರ್ಥಿಗಳು ರಾಜ್ಯಕ್ಕೆ ಮರಳಿದ್ದಾರೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಈ ಕುರಿತು ಮಾಹಿತಿ ನೀಡಿದೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೇಂದ್ರ ವಿದೇಶಾಂಗ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿದೆ. ಉಕ್ರೇನ್‌ನಲ್ಲಿ ಇನ್ನೂ ರಾಜ್ಯದ 455 ಜನರು ಸಿಲುಕಿದ್ದಾರೆ ಎಂದು ಅಂದಾಜಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳನ್ನು ವಾಪಸ್ ಕರೆತರಲು ಪಯತ್ನ ನಡೆಸಲಾಗುತ್ತಿದೆ.
"ಯುದ್ಧ ಘೋಷಣೆಯಾದ 12 ಗಂಟೆಗಳ ಒಳಗೆ ಅಲ್ಲಿ ಸಿಲುಕಿರುವ ರಾಜ್ಯದ ಜನರ ಮಾಹಿತಿಯನ್ನು ಸಂಗ್ರಹಿಸಲು ಕೆಎಸ್‌ಡಿಎಂಎ ವೆಬ್ ಅಪ್ಲಿಕೇಶನ್ ಸ್ಥಾಪಿಸಿದೆ. ಕೇಂದ್ರ ಸರ್ಕಾರದಿಂದ ಪಡೆದ ಮಾಹಿತಿ ಅನ್ವಯ ಮಂಗಳವಾರದ ತನಕ 694 ಜನರು ಇದ್ದಾರೆ ಎಂಬ ಮಾಹಿತಿ ಸಿಕ್ಕಿದೆ" ಎಂದು ಕೆಎಸ್‌ಡಿಎಂಎ ಆಯುಕ್ತರು ಹೇಳಿದ್ದಾರೆ.
ಆಪರೇಷನ್ ಗಂಗಾ ಮೊದಲ ವಿಮಾನದಲ್ಲಿ ಮುಂಬೈಗೆ ಆಗಮಿಸಿದ್ದ 12 ಜನರು ಬೆಂಗಳೂರಿಗೆ ಮೊದಲ ಬ್ಯಾಚ್‌ನಲ್ಲಿ ಆಗಮಿಸಿದರು. ಫೆಬ್ರವರಿ 28ರಂದು 7 ಜನರು ದೆಹಲಿಗೆ, ಮಾರ್ಚ್ 1ರಂದು ದೆಹಲಿಗೆ 8, ಮುಂಬೈಗೆ 8 ಕರ್ನಾಟಕದ ವಿದ್ಯಾರ್ಥಿಗಳು ಆಗಮಿಸಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಣೆ, ಕುಟುಂಬಕ್ಕೆ ನೈತಿಕ ಧೈರ್ಯ ತುಂಬಲು ಕೆಎಸ್‌ಡಿಎಂಎ ತಂಡವೊಂದನ್ನು ರಚನೆ ಮಾಡಿದೆ. ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಉಕ್ರೇನ್‌ನಲ್ಲಿ ಸಿಲುಕಿರುವ ಜನರ ಕುಟುಂಬದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.
ಉಕ್ರೇನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿ, ರಕ್ಷಣಾ ಕಾರ್ಯಾಚರಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಪೋಷಕರಿಗೆ ವಿವರಣೆ ನೀಡಲಾಗುತ್ತಿದೆ. ಎಲ್ಲರನ್ನೂ ಆದಷ್ಟು ಬೇಗ ಕರೆತರುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನವೀನ್ ಬಲಿ; 4ನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕದ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ಉಕ್ರೇನ್‌ನಲ್ಲಿ ಶೆಲ್ ದಾಳಿಗೆ ಬಲಿಯಾಗಿದ್ದಾರೆ. ಬಂಕರ್‌ನಲ್ಲಿದ್ದ ನವೀನ್ ಮಂಗಳವಾರ ಹಣ ವಿನಿಮಯ, ಆಹಾರ ತರಲು ಹೊರ ಹೋಗಿದ್ದರು. ಈ ವೇಳೆ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ಉಕ್ರೇನ್‌ನಲ್ಲಿ ಸಾವನ್ನಪ್ಪಿರುವ ನವೀನ್ ಶೇಖರಪ್ಪ ಗ್ಯಾನಗೌಡರ್ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತರಲು ಎಲ್ಲಾ ಪ್ರಯತ್ನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮುಖ್ಯಮಂತ್ರಿಗಳು ನವೀನ್ ಶೇಖರಪ್ಪ ಗ್ಯಾನಗೌಡರ್ ತಂದೆ ಶೇಖಪ್ಪ ಗ್ಯಾನಗೌಡರ್‌ಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಬಳಿಕ ಮಾತನಾಡಿದ ಅವರು, "ನನಗೆ ಬೇಕಾದ ಕುಟುಂಬವಿದು, ಈ ಘಟನೆಯಿಂದ ದುಃಖವಾಗಿದೆ" ಎಂದರು.
"ಮೃತಪಟ್ಟ ಯುವಕ 4ನೇ ವರ್ಷದ ವೈದ್ಯಕೀಯ ಕೋರ್ಸ್ ಓದುತ್ತಿದ್ದರು. ಕಳೆದ ಒಂದು ವಾರದಿಂದ ಬಂಕರ್‌ನಲ್ಲಿದ್ದರು. ಇವತ್ತು ಹೊರಗೆ ಬಂದಾಗ ಶೆಲ್ ದಾಳಿಗೆ ಸಿಲುಕಿ ಮೃತಪಟ್ಟರು. ಈ ಸಂಬಂಧ ವಿದೇಶಾಂಗ ಇಲಾಖೆ ಕಾರ್ಯದರ್ಶಿಗಳ ಜೊತೆಗೂ ಮಾತನಾಡಿದೆ" ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
"ಯುದ್ಧ ಪೀಡಿತ ಪ್ರದೇಶವಾಗಿರುವುದರಿಂದ ದೇಹ ಯಾವ ಸ್ಥಿತಿಯಲ್ಲಿ ಇದೆ ಮತ್ತು ಹೇಗೆ ತರಬೇಕು ಎಂಬ ಬಗ್ಗೆ ಚರ್ಚಿಸಿದ್ದೇನೆ. ಸಾಧ್ಯವಾದರೆ ಪಾರ್ಥಿವ ಶರೀರವನ್ನು ಎರಡು ಮೂರು ದಿನದಲ್ಲಿ ತರಲು ಎಲ್ಲಾ ಪ್ರಯತ್ನ ನಡೆಸಲಾಗುತ್ತಿದೆ" ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.












Click it and Unblock the Notifications