"ಒಬ್ಬ ಶಾಸಕನಿಗೆ ₹50 ಕೋಟಿ ಫಿಕ್ಸ್, ಸಚಿವ ಸ್ಥಾನ ಬೇಕಾದ್ರೆ ₹200 ಕೋಟಿ"
ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ ಕುದುರೆ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣಗಳ ಶಾಸಕರನ್ನು ಕೋಟಿಗಟ್ಟಲೆ ಹಣ ನೀಡಿ ಖರೀದಿ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬಾಂಬ್ ಸಿಡಿಸಿದ್ದಾರೆ. 'ಕಾಂಗ್ರೆಸ್‌ನಲ್ಲಿ ಕಿತ್ತಾಟಕ್ಕಿಂತ ಈ ವ್ಯಾಪಾರ ಹೆಚ್ಚಾಗಿ ನಡೆಯುತ್ತಿದೆ. ನನಗೆ ಮೊದಲು ಬಂದ ಮಾಹಿತಿ ಪ್ರಕಾರ ಒಬ್ಬ ಶಾಸಕನಿಗೆ ತಲಾ ₹50 ಕೋಟಿ ಕೊಟ್ಟು ಖರೀದಿಸುತ್ತಿದ್ದಾರೆ' ಎಂದು ಆರೋಪ ಮಾಡಿದ್ದಾರೆ.
'ಈಗ ಚೌಕಾಸಿ ಹೆಚ್ಚಾಗಿದೆ. ಕೆಲ ಶಾಸಕರು ₹75 ಕೋಟಿ ಕೊಟ್ಟರೆ ಬರುತ್ತೇವೆ ಅಂತಿದ್ದಾರೆ. ಇನ್ನೂ ಕೆಲವರು ₹100 ಕೋಟಿ ಕೊಡುವಂತೆ ಬೇಡಿಕೆ ಇಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಆದರೆ ಪ್ರತಿ ಶಾಸಕರಿಗೆ ₹50 ಕೋಟಿ ಕೊಡ್ತೀವಿ, ಅದರ ಜೊತೆಗೆ ಒಂದು ಫ್ಲ್ಯಾಟ್ ಕೊಡ್ತೀವಿ. ಒಂದು ಫಾರ್ಚೂನರ್ ಕಾರು ಕೊಡುವುದಾಗಿ ಆಮಿಷವೊಡ್ಡುತ್ತಿದ್ದಾರೆ ಎಂಬ ಮಾಹಿತಿ ಇದೆ' ಎಂದು ಆರೋಪಿಸಿದ್ದಾರೆ.

'ಮೊದಲೆಲ್ಲ ಒಂದು ಪಕ್ಷದ ಶಾಸಕರನ್ನು ಮತ್ತೊಂದು ಪಕ್ಷದ ಶಾಸಕರು ಕುದುರೆ ವ್ಯಾಪಾರ ಮಾಡ್ತಿದ್ರು. ಆದರೆ ಈಗಿನ ಕಾಂಗ್ರೆಸ್‌ನಲ್ಲಿ ತಮ್ಮ ಪಕ್ಷದ ಶಾಸಕರನ್ನ ತಾವೇ ಖರೀದಿ ಮಾಡುವ ಮಟ್ಟಕ್ಕೆ ಬಂದಿದೆ. ಮಂತ್ರಿ ಸ್ಥಾನ ಬೇಕು ಎನ್ನುವವರಿಗೆ ರಣದೀಪ್ ಸುರ್ಜೆವಾಲ ಈಗಾಗಲೇ ವ್ಯಾಪಾರ ಶುರು ಮಾಡಿದ್ದಾರಂತೆ. ಸಚಿವ ಸ್ಥಾನ ಬೇಕಾದವರು ತಲಾ ₹200 ಕೋಟಿ ಕೊಡಬೇಕಂತೆ. ಈಗ ಜೈಲಿನಲ್ಲಿರೋ ಶಾಸಕ ವೀರೇಂದ್ರ ಪಪ್ಪಿ ಈಗಾಗಲೇ ಅಡ್ವಾನ್ಸ್ ಕೂಡ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.'
'ಈ ಬಗ್ಗೆ ತನಿಖೆ ಆಗಬೇಕು'
'ಮೊದಲು ಇವುಗಳ ಬಗ್ಗೆ ತನಿಖೆ ಆಗಬೇಕಿದೆ. ರಣದೀಪ್ ಸುರ್ಜೆವಾಲ ಅವರನ್ನು ಮೊದಲು ಅರೆಸ್ಟ್ ಮಾಡಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ. ಸುರ್ಜೆವಾಲ ಈ ವ್ಯಾಪಾರ ನಡೆಸುತ್ತಿದ್ದಾರೆ. ಇನ್ನು ರಾಜ್ಯ ಕಾಂಗ್ರೆಸ್‌ನಲ್ಲೇ ಸಿಎಂ ಹಾಗೂ ಡಿಸಿಎಂ ಅವರ ಪ್ರತ್ಯೇಕ ಬಣಗಳಿವೆ. ಒಂದು ಬಣದಲ್ಲಿರುವ ಶಾಸಕರನ್ನು ಮತ್ತೊಂದು ಬಣದವರು ಖರೀದಿಸುವುದು ಜೋರಾಗಿದೆ. ಇದು ಕೂಡ ತನಿಖೆಯಾಗಬೇಕು' ಎಂದಿದ್ದಾರೆ.
'ಈ ಬಗ್ಗೆ ಜಾರಿ ನಿರ್ದೇಶನಾಲಯಕ್ಕೂ (ಇಡಿ) ಪತ್ರ ಬರೆಯುತ್ತೇನೆ. ಕಾಂಗ್ರೆಸ್‌ನವರು ಜನರ ಹಣ ಲೂಟಿ ಮಾಡಿ, ಈ ರೀತಿ ಆಟ ಆಡುತ್ತಿದ್ದಾರೆ. ಶಾಸಕರನ್ನು ಖರೀದಿ ಮಾಡುತ್ತಾ ಒಂದೇ ಒಂದು ಜನಪರ ಕಾರ್ಯಕ್ರಮ ಮಾಡದೆ, ಗ್ಯಾರಂಟಿ ಗ್ಯಾರಂಟಿ ಅನ್ಕೊಂಡು ಇವರೆಲ್ಲ ಮಾಡ್ತಿರೋದು ಏನು? ಜನರನ್ನು ವಂಚನೆ ಮಾಡಿ ರಾಜ್ಯವನ್ನ ಲೂಟಿ ಮಾಡಲಿಕ್ಕೆ ಒಂದು ಸರ್ಕಾರ ಬೇಕಾ?' ಎಂದು ಗುಡುಗಿದ್ದಾರೆ.
'ರೈತರ, ದಲಿತರ ಪರಿಸ್ಥಿತಿ ರಾಜ್ಯದಲ್ಲಿ ಏನಾಗಿದೆ? ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಬೆಲೆ ಇದೆಯಾ? ಮಾತಿಗೆ ಮುಂಚೆ ಸಂವಿಧಾನದ ಪುಸ್ತಕ ಹಿಡಿದು ಓಡಾಡುತ್ತೀರಿ. ಇದಕ್ಕೆಲ್ಲ ಯಾರು ಉತ್ತರ ಕೊಡೋದು? ಇದಕ್ಕೆಲ್ಲ ಕಡಿವಾಣ ಸದ್ಯದಲ್ಲೇ ಬೀಳಲಿದೆ. ನಮಗೆ 140 ಸೀಟು ಬಂದಿದೆ ಅನ್ನೋ ಅಟ್ಟಹಾಸದಲ್ಲಿ ಮೆರೆಯುತ್ತಿದ್ದೀರಿ. ಇದಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ' ಎಂದು ಎಚ್ಚರಿಸಿದ್ದಾರೆ.












Click it and Unblock the Notifications