ಕರ್ನಾಟಕದಲ್ಲಿ 'ಏರೋಸ್ಪೇಸ್- ರಕ್ಷಣಾ ನೀತಿ'ಯಡಿ 45,000 ಯುವಕರ ಬಳಕೆ: ಬೊಮ್ಮಾಯಿ
ಕರ್ನಾಟಕದಲ್ಲಿ ಜಾರಿಯಲ್ಲಿರುವ 'ಏರೋಸ್ಪೇಸ್ ಹಾಗೂ ರಕ್ಷಣಾ ನೀತಿ'ಯಡಿ ಬೃಹತ್ ಪ್ರಮಾಣದಲ್ಲಿ ಯುವಕರನ್ನು ಬಳಸಿಕೊಳ್ಳುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ರಾಜ್ಯ ಕೊಡುಗೆ, ಯುವಕರ ಬಳಕೆ ಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು, ಫೆಬ್ರವರಿ 13: ಕರ್ನಾಟಕದಲ್ಲಿ 'ಏರೋಸ್ಪೇಸ್ ಹಾಗೂ ರಕ್ಷಣಾ ನೀತಿ' ಜಾರಿಯಲ್ಲಿದೆ. ರಕ್ಷಣಾ ಹಾಗೂ ಏರೋಸ್ಪೇಸ್ ಗೆ ಸಂಬಂಧಿಸಿದಂತೆ ಉತ್ಪಾದನೆಗೆ ಅಗತ್ಯವಾದ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಲು ರಾಜ್ಯದ 45,000 ಹೆಚ್ಚು ಯುವಕರನ್ನು ತೊಡಗಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ 14ನೇ ಆವೃತ್ತಿಯ 'ಏರೋ ಇಂಡಿಯಾ ಶೋ 2023' (ವೈಮಾನಿಕ ಪ್ರದರ್ಶನ) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿಗಳು ಮಾತನಾಡಿದರು.
ಕರ್ನಾಟಕ ದೇಶದ ಆರ್ಥಿಕತೆ, ಸಾಮಾಜಿಕ ವ್ಯವಸ್ಥೆ ಮತ್ತು ರಕ್ಷಣಾ ವಲಯಕ್ಕೆ ಪ್ರಮುಖ ಕೊಡುಗೆ ನೀಡಲಿದೆ. ಈ ಮೂಲಕ ಭಾರತವನ್ನು ಜಾಗತಿಕ ನಾಯಕನನ್ನಾಗಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸಲಿದೆ. ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ಸಾವಿರಾರು ಯುವಕರು ಏರೋಸ್ಪೇಸ್ ಹಾಗೂ ರಕ್ಷಣಾ ನೀತಿಯಡಿ ಶ್ರಮಿಸಲಿದ್ದಾರೆ.

ಇಂದು ಕರ್ನಾಟಕ ರಾಜಧಾನಿಯಲ್ಲಿ ಆರಂಭಗೊಂಡ ಏರ್ ಶೋ ಅಂತಾರಾಷ್ಟ್ರೀಯ ಮಟ್ಟದಲ್ಲೇ ಅತೀ ದೊಡ್ಡ ಶೋ ಆಗಿದೆ. ಇಂತಹ ಕಾರ್ಯಸಾಧನೆಗೆ ಸಾಕ್ಷಿಯಾಗಿರುವ ಕರ್ನಾಟಕ ರಾಜ್ಯವು ಪ್ರಧಾನಿಗಳ ಆಶಯದಂತೆ ಆರ್ಥಿಕತೆ, ರಕ್ಷಣೆ ಸೇರಿದಂತೆ ಪ್ರಮುಖ ವಲಯಗಳಿಗೆ ತನ್ನದೇ ಆದ ಕೊಡುಗೆ ನೀಡಲಿದೆ ಎಂದು ತಿಳಿಸಿದರು.
ಭಾರತವು/ ರಕ್ಷಣಾ ವಲಯವು ಈ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ತನ್ನ ಸಾಮರ್ಥ್ಯವನ್ನು ನಿರೂಪಿಸಿದೆ. ಕೋವಿಡ್ ಸಂದರ್ಭದಲ್ಲಿ ಪ್ಯಾರಿಸ್ ಏರ್ ಶೋ ನಡೆಯದಿದ್ದಾಗ, ನಮ್ಮ ಏರ್ ಶೋ ಯಶಸ್ವಿಯಾಗಿ ನಡೆಯಿತು. ಈ ವರ್ಷ ವಸ್ತು ಪ್ರದರ್ಶನದ ವಿಸ್ತೀರ್ಣ, ಪ್ರದರ್ಶಕರ ಸಂಖ್ಯೆಯೂ ದ್ವಿಗುಣಗೊಂಡಿದೆ ಎಂದು ಬೊಮ್ಮಾಯಿಯವರು ವಿವರಿಸಿದರು.
ಹಿಂತಿರುಗಿ ನೋಡದ ನಮ್ಮ ರಾಜ್ಯ: ಸಿಎಂ
ಕರ್ನಾಟಕ ರಾಜ್ಯದಲ್ಲಿ ಸುಮಾರು 80 ವರ್ಷಗಳ ಹಿಂದೆ (1940) HAL ಸಂಸ್ಥೆ ನಂತರ 1950ರಲ್ಲಿ BHEL, BEL, DRDO ಸ್ಥಾಪನೆಯಾದವು. 1960ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಸ್ರೋ ಕಾರ್ಯಾರಂಭಗೊಂಡಿತು. 1970 ರಲಿ ಮೊದಲ ಸ್ಯಾಟಲೈಟ್ ಆರ್ಯಭಟ ಉಪಗ್ರಹವನ್ನು ಬೆಂಗಳೂರಿನಲ್ಲಿ ತಯಾರಿಸಲಾಯಿತು. ಅಲ್ಲಿಂದ ಕರ್ನಾಟಕ ಹಿಂತಿರುಗಿ ನೋಡಿದ್ದೆ ಇಲ್ಲ. ಈಗ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದ ಬೆಂಗಳೂರಿನಲ್ಲಿ ರಕ್ಷಣಾ ವಲಯದ ಶೇಕಡಾ 65 ರಷ್ಟು ಉತ್ಪಾದನೆ ಆಗುತ್ತಿವೆ ಎಂದರು.
ರಕ್ಷಣಾ ವಲಯದ ಶಕ್ತಿ ಹಾಗೂ ಸಾಮರ್ಥ್ಯ ವೃದ್ಧಿಗೆ ಕರ್ನಾಟಕ ತನ್ನ ಕೊಡುಗೆಯನ್ನು ನಿರಂತರವಾಗಿ ನೀಡಲಿದೆ. ವಾರ್ಷಿಕವಾಗಿ ಕರ್ನಾಟಕದ ಹೆಮ್ಮೆಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಸ್ತುತ 14ನೇ ವೈಮಾನಿಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮುಖ್ಯಮಂತ್ರಿಗಳು ಧನ್ಯವಾದ ತಿಳಿಸಿದರು.












Click it and Unblock the Notifications