ಪೊಲೀಸರ ವಿರುದ್ಧವೇ ಕೇಸ್‌ಗಳು: ನಾಲ್ವರು ವಜಾ, 236 ಮಂದಿ ಅಮಾನತು
ಬೆಂಗಳೂರು, ಅಕ್ಟೋಬರ್ 31: ಕರ್ನಾಟಕದಲ್ಲಿ 2019ರಿಂದ 2022ರ ವರೆಗಿನ ನಾಲ್ಕು ವರ್ಷದಲ್ಲಿ ವಿವಿಧ ಆರೋಪಗಳ ಮೇಲೆ ತನಿಖೆ ಎದುರಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸೇವೆಯಿಂದ ಅಮಾನತುಗೊಂಡವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಲಭ್ಯ ಪೊಲೀಸ್ ಇಲಾಖೆ ಮೂಲಗಳ ಪ್ರಕಾರ, ಜನರ ರಕ್ಷಣೆ, ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ವಿವಿಧ ಹಂತಗಳಲ್ಲಿ ಹುದ್ದೆ ಅಲಂಕರಿಸಿದ್ದ ಪೊಲೀಸರೇ ಹಲವು ಲಂಚ ವಸೂಲಿ, ಅಕ್ರಮ ಶಾಮೀಲು, ದುರ್ವರ್ತನೆ, ನಿಯಮ ಉಲ್ಲಂಘನೆ ಸೇರಿ ವಿವಿಧ ಆರೋಪಗಳ ಮೇರೆಗೆ ಇಲಾಖೆಯ ತನಿಖೆಗೆ ಒಳಗಾಗಿದ್ದಾರೆ. ಅನೇಕರು ಸೇವೆಯಿಂದ ಅಮಾನತುಗೊಂಡರೆ, ಕೆಲವರು ಸೇವೆಯಿಂದಲೇ ವಜಾಗೊಂಡಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಜ್ಯದಲ್ಲಿ 2019ರಲ್ಲಿ 371 ಪೊಲೀಸರು ಇಲಾಖಾ ವಿಚಾರಣೆ ಎದುರಿಸಿದ್ದಾರೆ. ಮರುವರ್ಷ 2020ರಲ್ಲಿ 408ಅಧಿಕಾರಿಗಳು, 2021ರಲ್ಲಿ 441 ಮಂದಿ ಪೊಲೀಸರು ಹಾಗೂ ಹಾಲಿ 2022ರ ಪ್ರಸಕ್ತ ವರ್ಷದಲ್ಲಿ 468 ಮಂದಿ ಪೊಲೀಸ್ ಸಿಬ್ಬಂದಿ ವಿವಿಧ ಆರೋಪಗಳ ಮೇಲೆ ಇಲಾಖೆಯಿಂದ ತನಿಖೆ ಎದುರಿಸಿದ್ದಾರೆ.

4 ವರ್ಷದ ಅಮಾನತು ಆದ ಪೊಲೀಸ್ ಮಾಹಿತಿ
ತನಿಖೆಗೆ ಒಳಗಾಗಿ ಅಕ್ರಮ ಸಾಬೀತಾದವರ ಪೈಕಿ 2019ರಲ್ಲಿ 122 ಪೊಲೀಸರು ಸೇವೆಯಿಂದ ಅಮಾನತು ಮಾಡಿ ಇಲಾಖೆ ಆದೇಶಿಸಿತ್ತು. ನಂತರದ ವರ್ಷ 2020ರಲ್ಲಿ 159 ಪೊಲೀಸ್ ಅಧಿಕಾರಿಗಳು, 2021ರಲ್ಲಿ 319 ಮಂದಿಯನ್ನು ಹಾಗೂ ಪ್ರಸಕ್ತ 2022ರಲ್ಲಿ (ಈವರೆಗಿನ ಮಾಹಿತಿ) 236 ಮಂದಿ ಪೊಲೀಸ್ ಸಿಬ್ಬಂದಿ ಸೇವೆಯಿಂದ ಅಮಾನತುಗೊಂಡಿದ್ದಾರೆ. ಅಕ್ರಮ ಸಾಬೀತಾಗಿ ಅಮಾನತುಗೊಂಡ ಪ್ರಕರಣಗಳು 2021 ರವರೆಗೆ ಏರುಗತಿಯಲ್ಲಿದ್ದರೆ, ಈ ವರ್ಷ ತುಸು ಕಡಿಮೆ ಎನ್ನಬಹುದು.

2021ರಲ್ಲಿ ಕೆಲಸ ಕಳೆದುಕೊಂಡ 24 ಪೊಲೀಸರು
ಇನ್ನು ಸೇವೆಯಿಂದ ಸಂಪೂರ್ಣವಾಗಿ ವಜಾಗೊಂಡವರ ಮಾಹಿತಿ ನೋಡುವುದಾದರೆ, 2021ರಲ್ಲಿ ಹೆಚ್ಚು ಮಂದಿ ವಜಾಗೊಂಡಿದ್ದಾರೆ. ಕ್ರಮವಾಗಿ 2019ರಲ್ಲಿ 19ಮಂದಿ ಪೊಲೀಸರು, 2020ರಲ್ಲಿ 21 ಪೊಲೀಸ್ ಸಿಬ್ಬಂದಿ, 2021ರಲ್ಲಿ 24 ಜನ ಪೊಲೀಸ್ ಅಧಿಕಾರಿಗಳು ಹಾಗೂ ಪ್ರಸಕ್ತ 2022ರಲ್ಲಿ ಈವರೆಗೆ 04 ಮಂದಿ ಸೇವೆಯಿಂದ ವಜಾಗೊಳಿಸಿ ಪೊಲೀಸ್ ಇಲಾಖೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಿದೆ.

ಕಿಮಿನಲ್ ಕೇಸ್‌ನ ಆರೋಪಿಗಳಿಂದ ಖಾಕಿ ಹಣ ವಸೂಲಿ
ಕ್ರಿಮಿನಲ್ ಪ್ರಕರಣಗಳಿರುವ ಇಬ್ಬರು ಶಂಕಿತರಿಂದ ಹಣ ವಸೂಲಿ ಮತ್ತು ಕಳ್ಳತನದ ಭಿನ್ನ ಆರೋಪದ ಮೇಲೆ ನಗರದ ಇಬ್ಬರು ಪೊಲೀಸ್ ಸಬ್ ಇನ್ಸಪೆಕ್ಟರ್ ಹಾಗೂ ನಾಲ್ವರು ಪೇದೆಗಳನ್ನು ಪೊಲೀಸ್ ಇಲಾಖೆ ಇತ್ತೀಚೆಗಷ್ಟೇ ಅಮಾನತು ಮಾಡಿ ಆದೇಶ ಹೊರಡಿಸಿತ್ತು.
ಸದಾಶಿವನಗರ ಠಾಣೆಯ ಇಬ್ಬರು ಸಬ್ ಇನ್ಸಪೆಕ್ಟರ್ಗಳು ಮತ್ತು ಮೂವರು ಪೇದೆಗಳು ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರೋಪಿಯಿಂದ ಅಂದಾಜು 1ಲಕ್ಷ ರೂ., ಚಂದ್ರಾ ಬಡಾವಣೆಯ ಪೊಲೀಸ್ ಠಾಣೆಯ ಮುಖ್ಯ ಪೇದೆ ಒಬ್ಬರು 50 ಲಕ್ಷ ರೂ. ಹಣವನ್ನು ಅಕ್ರಮವಾಗಿ ಸಾಗಿಸುತ್ತಿದ್ದರು. ಅಲ್ಲದ ಎಫ್‌ಐಆರ್ ದಾಖಲಾತಿ ವೇಳೆ ಠಾಣೆ ಬಳಿ ಪೇದೆ ಪತ್ನಿಗೆ 10 ಲಕ್ಷ ರೂ. ನೀಡಿರುವುದು ಬೆಳಕಿಗೆ ಬಂದಿದೆ.

ಕರ್ತವ್ಯಲೋಪದ ಪ್ರಕರಣಗಳೆ ಹೆಚ್ಚು
ನಿರ್ವಹಣೆ ವಿಭಾಗದ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರು ಈ ಕುರಿತು ಪ್ರತಿಕ್ರಿಯಿಸಿ, "ತ್ವರಿತ ಹಣ ಗಳಿಕೆಯ ದುರಾಸೆಯಿಂದ ಕೆಲವು ಪೊಲೀಸರು ಭ್ರಷ್ಟಾಚಾರಕ್ಕೆ ಕಾರಣವಾಗಿದ್ದಾರೆ. ಇದರಲ್ಲಿ ಕರ್ತವ್ಯ ಲೋಪದಿಂದ ಅಮಾನತಗೊಂಡವರು ಹಾಗೂ ವಿಚಾರಣೆ ಎದುರಿಸಿದವರ ಸಂಖ್ಯೆ ಹೆಚ್ಚಿದೆ. ಶಿಸ್ತಿಗೆ ಹೆಸರಾಗಿರುವ ಪೊಲೀಸರಿಂದ ಅಶಿಸ್ತು, ಭ್ರಷ್ಟಾಚಾರ ಮತ್ತು ದುರ್ನಡತೆ ಕಂಡು ಬಂದರೆ ಸಹಿಸಲಾಗುವುದಿಲ್ಲ," ಎಂದರು.
"ಜನಸೇವೆ ಮರೆತು ಹಣದ ಹಿಂದೆ ಬೀಳುವ, ಐಷಾರಾಮಿ ಜೀವನಶೈಲಿಗೆ ಮೊರೆ ಹೋಗುವ ಕೆಲವರಿಗೆ ತನಿಖೆ, ಅಮಾನತಿನ ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಅವರಲ್ಲಿನ ದುರಾಸೆಯೇ ಕಾರಣ ಹೊರತು ಬೇರೇನೂ ಅಲ್ಲ. ಜನರಿಗೆ ಮಹತ್ತರ ಸೇವೆ ಸಲ್ಲಿಸಲು ಅವಕಾಶ ಇದೆ ಎಂಬುದು ಮರೆತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಸರಿಯಲ್ಲ," ಎಂದು ಮಾಜಿ ಡಿಜಿಪಿ ರಾಘವೇಂದ್ರ ಔರಾದ್ಕರ್ ತಿಳಿಸಿದರು.
ಪೊಲೀಸರು ಸೇರಿದಂತೆ ದುರಾಸೆಯಿಂದ ಯಾರೂ ಮುಕ್ತರಾಗಿಲ್ಲ. ದರಾಸೆಯಿಂದ ಹಣ ಗಳಿಸುವವರು ತನಿಖೆಯಿಂದ ತಪ್ಪಿಸಿಕೊಳ್ಳಬಹುದು. ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ಭಾವಿಸಿರುತ್ತಾರೆ. ಅಕ್ರಮದಲ್ಲಿ ತೊಡಗಿದಾಗ ಕೆಲ ಪ್ರಕರಣ ಬೇಗ ಮತ್ತೆ ಕೆಲವು ತಡವಾಗಿ ಬಹಿರಂಗೊಳ್ಳುತ್ತವೆ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಮಾಜಿ ಡಿಜಿ ಐಜಿಪಿ ಒಬ್ಬರು ಮಾಹಿತಿ ನೀಡಿದರು.












Click it and Unblock the Notifications