Karnataka Congress: ಕರ್ನಾಟಕ ಕಾಂಗ್ರೆಸ್ನ ವೆಬ್‌ಸೈಟ್ ಹ್ಯಾಕ್ ಮಾಡಿದ ನಾಲ್ವರು ಬಂಧನ!
ಬೆಂಗಳೂರು, ಆಗಸ್ಟ್14: ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ರಾಜ್ಯ ಕಾಂಗ್ರೆಸ್ನ ವೆಬ್‌ಸೈಟ್ ಹ್ಯಾಕ್ ಮಾಡಿ, ನಕಲಿ ವೆಬ್‌ಸೈಟ್ ಸೃಷ್ಟಿಸಿ ಅನಧಿಕೃತ ಪೋಸ್ಟ್ ಹಾಕಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ನಾಲ್ವರು ಆರೋಪಿಗಳು ಹಾಸನ ಮೂಲದ ಕಂಪನಿಯೊಂದರ ಸಂಪರ್ಕದಲ್ಲಿದ್ದಾರೆ ಎಂಬ ಅಂಶ ತಿಳಿದುಬಂದಿದ್ದು, ಆರೋಪಿಗಳನ್ನು ಧರ್ಮೇಶ್ ಜೂನ್, ಅರುಣ್, ಸಿದ್ದಾರ್ಥ ಮತ್ತು ವೆಂಕಟೇಶ್ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ, ಈತ ಬಿಜೆಪಿಯೊಂದಿಗೆ ಕೆಲಸ ಮಾಡುವ ರಾಜಕೀಯ ತಂತ್ರ ಸಂಸ್ಥೆಯಾದ ವರಾಹೆ ಅನಾಲಿಟಿಕ್ಸ್ ಜೊತೆ ಸಂಪರ್ಕ ಹೊಂದಿದ್ದನು ಎಂದು ಹೇಳಲಾಗುತ್ತಿದೆ.

ಈ ವರ್ಷದ ಫೆಬ್ರವರಿಯಲ್ಲಿ, ರಾಜ್ಯ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ತನ್ನ ವೆಬ್‌ಸೈಟ್ ಮೇಲೆ ಹಲವು ಬಾರಿ ದಾಳಿ ಮಾಡಿದ ನಂತರ ಪೊಲೀಸ್ ಗೆ ದೂರು ದಾಖಲಿಸಿದೆ. ರಾಜ್ಯ ಕಾಂಗ್ರೆಸ್ ನಾಯಕರು ಪ್ರಚಾರ ಭರಾಟೆಯಲ್ಲಿ ಬ್ಯೂಸಿಯಾಗಿದ್ದಾಗ ಈ ವೆಬ್‌ಸೈಟ್ ಹ್ಯಾಕ್ ಮಾಡಲಾಗಿತ್ತು. ಈ ಸಂಬಂಧ ಕಾಂಗ್ರೆಸ್ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಈ ಹಿನ್ನೆಲೆ ಪೊಲೀಸರು ಶೋಧಕಾರ್ಯ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ನಕಲಿ ವೆಬ್‌ಸೈಟ್‌ನ ಹೋಸ್ಟಿಂಗ್ ವಿವರಗಳು, ನೋಂದಣಿ, ಲಾಗ್‌ಗಳು ಮತ್ತು ಪಾವತಿಗಳಿಗೆ ಸಂಬಂಧಿಸಿದ ಇತರ ವಿವರಗಳ ಕುರಿತು ಸೈಬರ್ ಕ್ರೈಮ್ ಪೊಲೀಸರು ಶೀಘ್ರದಲ್ಲೇ ಸೇವಾ ಪೂರೈಕೆದಾರರಿಂದ ಮಾಹಿತಿಯನ್ನು ಕೇಳಿದರು. ತನಿಖೆಯ ಸಮಯದಲ್ಲಿ, ಅಧಿಕಾರಿಗಳು ಹಾಸನದಲ್ಲಿ ನೋಂದಾಯಿಸಲ್ಪಟ್ಟಿರುವ ಮತ್ತು ಬೆಂಗಳೂರಿನಲ್ಲಿ ಕಚೇರಿಗಳನ್ನು ಹೊಂದಿರುವ M/s ವೆಟ್ ಫ್ಯಾಬ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಅನ್ನು ನಕಲಿ ವೆಬ್‌ಸೈಟ್ ಸೃಷ್ಟಿ ಮಾಡಿರುವುದು ತಿಳಿದುಬಂದಿದೆ. ಸಂಸ್ಥೆಯು ನಕಲಿ ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸಿದೆ ಮತ್ತು ಸುಳ್ಳು ಮಾಹಿತಿಯನ್ನು ಹರಡುವ ಉದ್ದೇಶದಿಂದ ವಿಷಯವನ್ನು ಅಪ್‌ಲೋಡ್ ಮಾಡಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗುರುವಾರ ಹಾಸನ ಮತ್ತು ಬೆಂಗಳೂರಿನ ಕಚೇರಿಗಳ ಮೇಲೆ ನಡೆಸಿದ ದಾಳಿಯಲ್ಲಿ ಸಿದ್ದಾರ್ಥ್ ಮತ್ತು ವೆಂಕಟೇಶ್ ಅವರೊಂದಿಗೆ ವೆಬ್‌ಸೈಟ್ ಹೋಸ್ಟ್ ಮಾಡಲು ಪಾವತಿಗೆ ಸಂಬಂಧಿಸಿದಂತೆ ಧರ್ಮೇಶ್ ಜೈನ್ ಮತ್ತು ಅರುಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್ ಹಾಸನದಲ್ಲಿ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದು, ಉಳಿದ ಮೂವರು ಅದರ ನಿರ್ದೇಶಕರಾಗಿದ್ದಾರೆ. ವರಾಹೆ ಅನಾಲಿಟಿಕ್ಸ್‌ನಲ್ಲಿ ಉದ್ಯೋಗಿಯಾಗಿರುವ ಶಶಾಂಕ್ ಭಾರದ್ವಾಜ್ ನಕಲಿ ವೆಬ್‌ಸೈಟ್ ರಚಿಸಲು ಈ ಕಂಪನಿಯನ್ನು ಸಂಪರ್ಕಿಸಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳ ಫೆಬ್ರವರಿ ತಿಂಗಳಲ್ಲಿ ವೆಬ್‌ಸೈಟ್ ಹ್ಯಾಕ್ ಮಾಡಿದ್ದರು. ನಂತರ ಕೆಪಿಸಿಸಿ ಇನ್ ಅನ್ನೋ ನಕಲಿ ವೆಬ್‌ಸೈಟ್‌ನಲ್ಲಿ ಮುಖಪುಟದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಕೆಜೆ ಜಾರ್ಜ್ ಫೋಟೋ ಬಳಸಲಾಗಿದೆ. ಇನ್ನು ಇತರ ಪುಟಗಳಲ್ಲಿ ಕಾಂಗ್ರೆಸ್ ಮೇಲಿನ ಆರೋಪಗಳು, ಕಾಂಗ್ರೆಸ್ ಆಡಳಿತದಲ್ಲಿ ನಡೆದ ಭ್ರಷ್ಟಾಚಾರ, ಕೋಮುಗಲಭೆ ಸೇರಿದಂತೆ ಹಲವುವಿವಾದಾತ್ಮಕ ಮಾಹಿತಿಗಳನ್ನು ಹಾಕಿದ್ದರು ಎಂದು ತಿಳಿದು ಬಂದಿದೆ.












Click it and Unblock the Notifications