Police Transfer: ಪತಿ-ಪತ್ನಿ ಪ್ರಕರಣ, 35 ಪೊಲೀಸ್ ಹೆಡ್ ಕಾನ್‌ಸ್ಟೇಬಲ್ಸ್ ವರ್ಗಾವಣೆ ವಂಚಿತ: ಸಚಿವರಿಗೆ ನೇರ ಪತ್ರ
ಬೆಂಗಳೂರು, ಜೂನ್ 01: ಕರ್ನಾಟಕ ರಾಜ್ಯ ಗೃಹ ಸಚಿವರು ಪೊಲೀಸ್ ಪತಿ-ಪತ್ನಿ ಪ್ರಕರಣದಲ್ಲಿ ವರ್ಗಾವಣೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಮುಖ್ಯಸ್ಥರಿಗೆ ಸೂಕ್ತ ಆದೇಶವನ್ನು ಫೆಬ್ರವರಿಯಲ್ಲಿ ಹೊರಡಿಸಿದ್ದರು. ಸದ್ಯ ಈ ಆದೇಶ ಮೂಲೆಗುಂಪಾಗಿದೆ, ಅರ್ಹರಿಗೆ 'ವರ್ಗಾವಣೆ ಭಾಗ್ಯ' ಸಿಗದಿರುವುದು ಅನುಮಾನ ಮೂಡಿಸಿದೆ. ಇದಕ್ಕೆ ನೊಂದ ಪೊಲೀಸ್ ಸಿಬ್ಬಂದಿ ನೇರವಾಗಿ ಗೃಹ ಸಚಿವರಿಗೆ ಪತ್ರ ಬರೆದಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.
ಪೊಲೀಸ್ ಸಿಬ್ಬಂದಿ ಪತಿ-ಪತ್ನಿ ವರ್ಗಾವಣೆ ಪ್ರಕರಣದ ಸಂಬಂಧ ಪೊಲೀಸ್ ಕಾನ್‌ಸ್ಟೇಬಲ್ ಗಳಿಗೆ (PC) ಅಂತರ್ ಜಿಲ್ಲಾ ವರ್ಗಾವಣೆ ಮಾಡುವಂತೆ ಇಲಾಖಾ ಮುಖ್ಯಸ್ಥರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಆದೇಶಿಸಿದ್ದಾರೆ. ಈ ಆದೇಶ ಪೊಲೀಸ್ ಹೆಡ್ ಕಾನ್ಸ್‌ಟೇಬಲ್‌ಗಳಿಗೆ (HC) ಜಾರಿಯಾಗಿಲ್ಲ.

ವರ್ಗಾವಣೆಯಿಂದ ವಂಚಿತವಾಗಿರುವ 35 ಪೊಲೀಸ್ ಹೆಡ್ ಕಾನ್ಸ್‌ಟೇಬಲ್‌ಗಳು (HC) ಕೌಟುಂಬಿಕ ಸೇರಿದಂತೆ ನಾನಾ ತೊಂದರೆ, ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ. ಇದೀಗ ಅವರೆಲ್ಲ ನೇರವಾಗಿ ಗೃಹ ಸಚಿವರಿಗೆ ಪತ್ರ ಬರೆದು, ಮುಕ್ತವಾಗಿ ಅಳಲು ತೋಡಿಕೊಂಡಿದ್ದಾರೆ.
ಪೊಲೀಸ್ ಸಿಬ್ಬಂದಿ ಪತ್ರದಲ್ಲಿ ಏನಿದೆ?
ಪತ್ರದಲ್ಲಿ ವರ್ಗಾವಣೆ ವಂಚಿತ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಗಳು ''ಗೌರವಾನ್ವಿತ ಮಾನ್ಯ ಗೃಹ ಸಚಿವರಲಿ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ತಾವು 27.02.2024 ರಂದು ಪತಿ-ಪತ್ನಿ ಪ್ರಕರಣ ಸಂಬಂಧ ಪೊಲೀಸ್ ಕಾನ್ಸೆಬಲ್ ಗಳಿಗೆ ಅಂತರ್ ಜಿಲ್ಲಾ ವರ್ಗಾವಣೆ ಮಾಡುವಂತೆ ಆದೇಶಿಸಿದ್ದೀರಿ. 04.03.2024 ರಂದು ಪತಿ-ಪತ್ನಿ ಪ್ರಕರಣಗಳಲ್ಲಿ ಅಂತರ್ ಜಿಲ್ಲಾ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಆದರೆ ಸದರಿ ಆದೇಶದಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ (HC) ಗಳನ್ನು ಪತಿ-ಪತ್ನಿ ಪ್ರಕಣಗಳ ವರ್ಗಾವಣೆಯಲ್ಲಿ ಪರಿಗಣಿಸದೇ ನಮ್ಮನ್ನು ವರ್ಗಾವಣೆಯಿಂದ ವಂಚಿತರನ್ನಾಗಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ರಾಜ್ಯದಲ್ಲಿ HC ದಂಪತಿಗಳ ಸಂಖ್ಯೆ ಎಷ್ಟಿದೆ?
ಪತಿ-ಪತ್ನಿ ಪ್ರಕರಣವು ಎಲ್ಲ ಹುದ್ದೆಗಳಿಗೆ ಅನ್ವಯಿಸುತ್ತದೆ. ಆದರೂ ಸಹ ಇಲಾಖಾ ಮುಖ್ಯಸ್ಥರು ನಮ್ಮನ್ನು (HC) ಪರಿಗಣಿಸುತ್ತಿಲ್ಲ. ಇಡೀ ರಾಜ್ಯಾದ್ಯಂತ ಪತಿ-ಪತ್ನಿ ಪ್ರಕರಣದಲ್ಲಿ ವರ್ಗಾವಣೆ ಬಯಸಿದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ (HC) ಗಳ ಸಂಖ್ಯೆ ಕೇವಲ ಸುಮಾರು 33-35 ಜನರು ಮಾತ್ರ ಇದ್ದೇವೆ. ಸುಮಾರು ಮೂರು ವರ್ಷಗಳ ಕಾಲ ವರ್ಗಾವಣೆಯಿಂದ ವಂಚಿತರಾದ ನಾವುಗಳು ಗಂಡ-ಹೆಂಡತಿ ಬೇರೆ ಬೇರೆ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ.
ಮಾನಸಿಕ ಒತ್ತಡ, ಕೌಟುಂಬಿಕ ಕಲಹ, ನರಕ ಯಾತನೆ
ಹೀಗೆ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರಣ, ನಮ್ಮ ಪತ್ನಿಯರು ಚಿಕ್ಕ-ಚಿಕ್ಕ ಮಕ್ಕಳನ್ನು ವಯಸ್ಸಾದ ತಂದೆ ತಾಯಿಯ ಲಾಲನೆ ಪಾಲಾನೆ ಮಾಡಿಕೊಳ್ಳುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾವು ಈಗಾಗಲೇ ಸುಮಾರು 16-17 ವರ್ಷಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದೇ. ಮದುವೆಯಾಗಿ ಸುಮಾರು 8-10 ವರ್ಷಗಳಾಗಿವೆ.
ವರ್ಷಗಳ ಕಾಲ ಗಂಡ ಹೆಂಡತಿ ಜೊತೆಯಲ್ಲಿ ಜೀವನ ನಡೆಸಲು ಸಾಧ್ಯವಾಗದೆ ನರಕ ಯಾತನೆ ಅನುಭವಿಸಿರುತ್ತೇವೆ. ಮನೆಯಲ್ಲಿ ಕೌಟುಂಬಿಕ ಕಲಹ ನಡೆಯುತ್ತಲೇ ಇರುತ್ತದೆ. ಇಲ್ಲಿಯವರೆಗೂ ವರ್ಗಾವಣೆಗೆ ಮನವಿ ಮಾಡುತ್ತಲೇ ಬಂದಿದ್ದು, ಇಂದು, ನಾಳೆಯೋ ವರ್ಗಾವಣೆ ಆಗುತ್ತದೆ ಎಂದು ಕಾಯುತ್ತಲೇ ಬಂದಿದ್ದೇವೆ.
ಬದುಕಲು ಆಗುತ್ತಿಲ್ಲ, ಸಾಯಲು ಆಗುತ್ತಿಲ್ಲ
ಅದರಂತೆ 04.03.2024 ರಂದು ಪೊಲೀಸ್ ಸಿಬ್ಬಂದಿಗಳ ವರ್ಗಾವಣೆ ಆದೇಶ ನೋಡಿದರೆ, ಅದರಲ್ಲಿ HC ಗಳ ವರ್ಗಾವಣೆ ಮಾಡದೇ ಕೇವಲ ಪೊಲೀಸ್ ಕಾನ್ಸ್ ಟೇಬಲ್ ಗಳ ವರ್ಗಾವಣೆ ಮಾಡಲಾಗಿದೆ. ಹೆಡ್ ಕಾನ್ಸ್ ಟೇಬಲ್ ಗಳಾದ ನಮ್ಮೆಲ್ಲರ ಹೆಸರುಗಳು ಬಾರದೇ ಇದ್ದುದರಿಂದ ಎಷ್ಟೋ ವರ್ಗಾವಣೆ ವಂಚಿತ ಕುಟುಂಬದ ಸದಸ್ಯರು ಆತ್ಮಹತ್ಯೆ ಗೆ ಪ್ರಯತ್ನಪಟ್ಟಿವೆ. ಅದೆಷ್ಟೋ ಸಂಸಾರಗಳಲ್ಲಿ ಇದೇ ವಿಚಾರವಾಗಿ ಬಿರುಕು ಸಹ ಮೂಡಿದೆ. ನಾವುಗಳು ಬದುಕಲು ಆಗದೆ ಸಾಯಲು ಆಗದೆ ನರಕಯಾತನೆ ಅನುಭವಿಸುತ್ತಿದ್ದೇವೆ ಎಂದು HCಗಳು ಅಳಲು ತೋಡಿಕೊಂಡರು.
ಆದ್ದರಿಂದ ಕರ್ನಾಟಕ ಸಿವಿಲ್ ಸೇವಾ ಅದಿನಿಯಮ 16(a) ನಿಯಮದ ಪ್ರಕಾರ ರಾಜ್ಯಾದ್ಯಂತ ಇರುವ 30 ರಿಂದ 35 ಜನ ಹೆಡ್ ಕಾನ್ಸ್ ಟೇಬಲ್ (HC) ಗಳಿಗೆ 'ವರ್ಗಾವಣೆ ಬಾಗ್ಯ' ನೀಡಿ ನಮ್ಮ ಕುಟುಂಬಗಳೊಂದಿಗೆ ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ಗೃಹ ಸಚಿವ ಜಿ.ಪರಮೇಶ್ವರರ ಅವರ ಬಳಿಕ ಮನವಿ ಮಾಡಿದ್ದಾರೆ.
ಸದ್ಯ ಈ ಕುರಿತು ಜಿ.ಪರಮೇಶ್ವರ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ. ಏನು ಭರವಸೆ ಕೊಡುತ್ತಾರೆ ಎಂಬುದನ್ನು ಪೊಲೀಸ್ ಹೆಡ್ ಕಾನ್ಸ್ ಟೇಬಲ್ (HC) ಕಾಯುತ್ತಿದ್ದಾರೆ.
ರಾಜ್ಯದಲ್ಲಿ ಅತೀ ಕಡಿಮೆ ಜನರು ಪೊಲೀಸ್ ಹೆಡ್ ಕಾನ್ಸ್ ಟೇಬಲ್ (HC) ದಂಪತಿಗಳು ಇದ್ದಾರೆ. ಅವರಿಗೆಲ್ಲ ವರ್ಗಾವಣೆಗೆ ಅವಕಾಶ ನೀಡುವಂತೆ ವರ್ಷಗಳಿಂದಲೂ ಮನವಿ ಮಾಡಿಕೊಂಡು ಬರಲಾಗಿತ್ತು. ಇದೀಗ ಆದೇಶವಾದರೂ ಅದರಲ್ಲಿ ತಮ್ಮ ಹೆಸರು ಇಲ್ಲದಿರುವುದು ಕಂಡು ಪೊಲೀಸ್ ಹೆಡ್ ಕಾನ್ಸ್ ಟೇಬಲ್ (HC)ಗಳಿಗೆ ಏನು ಮಾಡಬೇಕೆಂದು ತಿಳಿಯದಾಗಿದೆ.












Click it and Unblock the Notifications