ಮೂವರು ಕಾಂಗ್ರೆಸ್ ಶಾಸಕರ ರಾಜೀನಾಮೆ ಸುದ್ದಿ ಠುಸ್!
ಬೆಂಗಳೂರು, ಜುಲೈ 03 : ಕರ್ನಾಟಕದ ಮೂವರು ಕಾಂಗ್ರೆಸ್ ಶಾಸಕರು ಬುಧವಾರ ರಾಜೀನಾಮೆ ನೀಡಲಿದ್ದಾರೆ ಎಂದು ಹರಿದಾಡುತ್ತಿದ್ದ ಸುದ್ದಿಗಳು ಠುಸ್ ಆಗಿವೆ. ಯಾವ ಶಾಸಕರು ರಾಜೀನಾಮೆ ಕೊಡಲು ಇಂದು ವಿಧಾನಸೌಧದ ಕಡೆ ತಲೆ ಹಾಕಲಿಲ್ಲ.
ಕರ್ನಾಟಕ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರು 12 ಗಂಟೆ ಹೊತ್ತಿಗೆ ವಿಧಾನಸೌಧಕ್ಕೆ ಆಗಮಿಸಿದರು. ರಾಜೀನಾಮೆ ನೀಡಿರುವ ಶಾಸಕರಾದ ಆನಂದ್‌ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಅವರು ಸ್ಪೀಕರ್ ಭೇಟಿ ಮಾಡಲಿದ್ದಾರೆ ಎಂಬ ವದಂತಿ ವಿಧಾನಸೌಧದ ಮೊಗಸಾಲೆಯಲ್ಲಿ ಹಬ್ಬಿತ್ತು.
ಸ್ಪೀಕರ್ ಬಳಿ ಮಾಧ್ಯಮದವರು ಶಾಸಕರ ರಾಜೀನಾಮೆ ಕುರಿತು ಪ್ರಶ್ನಿಸಿದಾಗ ಅವರು ಅಸಮಾಧಾನಗೊಂಡರು. 'ನಾನು ಸಭಾಧ್ಯಕ್ಷ, ಗೌರವಯುತ ಜಾಗದಲ್ಲಿದ್ದೇನೆ. ನನ್ನ ಬಳಿ ಶಾಸಕರು ರಾಜೀನಾಮೆ ನೀಡಿದ್ದಾರಾ? ಎಂಬಂತಹ ಪ್ರಶ್ನೆ ಕೇಳುವುದು ಸರಿಯಲ್ಲ' ಎಂದು ಹರಿಹಾಯ್ದರು.
ವಿಜಯನಗರ ಶಾಸಕ ಆನಂದ್ ಸಿಂಗ್ ಮತ್ತು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಆನಂದ್ ಸಿಂಗ್ ಜೊತೆ ಖುದ್ದಾಗಿ ಮಾತುಕತೆ ನಡೆಸುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ಮೂವರು ಶಾಸಕರ ರಾಜೀನಾಮೆ
ಬುಧವಾರ ಶಾಸಕರಾದ ಬಿ.ಸಿ.ಪಾಟೀಲ್, ಮಹೇಶ್ ಕುಮಟಳ್ಳಿ ಸೇರಿದಂತೆ ಮೂವರು ಶಾಸಕರು ಕೂಡಾ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಮಂಗಳವಾರದಿಂದ ಹಬ್ಬಿತ್ತು. ಆದರೆ, ಇಂದು ಆ ಸುದ್ದಿಗಳಿಗೆ ತೆರೆ ಬಿದ್ದಿದೆ.

ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ವ್ಯಂಗ್ಯ
'ವಿಜಯನಗರ ಶಾಸಕ ಆನಂದ್ ಸಿಂಗ್ ಅವರು ನನ್ನ ಕಛೇರಿಗೆ ರಾಜೀನಾಮೆ ತಲುಪಿಸಿದ್ದಾರೆ. ಹಾಗೆಯೇ ರಾಜ್ಯಪಾಲರನ್ನೂ ಭೇಟಿ ಮಾಡಿ ರಾಜೀನಾಮೆ ಪತ್ರ ಕೊಟ್ಟಿದ್ದಾರೆ. ಪುರುಸೊತ್ತು ಇದ್ದರೆ ರಾಷ್ಟ್ರಪತಿಗಳನ್ನೂ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲಿ' ಎಂದು ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯವಾಡಿದರು.

ಶಾಸಕರಿಗೆ ಜವಾಬ್ದಾರಿ ಇರಬೇಕು
ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಫ್ಯಾಕ್ಸ್ ಮೂಲಕ ರಾಜೀನಾಮೆ ಕಳಿಸಿದ್ದಾರೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮೇಶ್ ಕುಮಾರ್, 'ಶಾಸಕರಾದವರಿಗೆ ಜವಾಬ್ದಾರಿ ಇರಬೇಕು. ಯಾವ ಕೆಲಸ ಮಾಡುವಾಗ ಹೇಗೆ ನಡೆದುಕೊಳ್ಳಬೇಕು? ಎಂಬುದರ ಅರಿವು ಹೊಂದಿರಬೇಕು' ಎಂದರು.

ಕರೆಸಿ ಮಾತನಾಡುತ್ತೇನೆ
'ಆನಂದ್ ಸಿಂಗ್ ಅವರು ನನ್ನ ಕಛೇರಿಗೆ ತಲುಪಿಸಿರುವ ರಾಜೀನಾಮೆ ಪತ್ರವನ್ನು ಇಟ್ಟುಕೊಂಡು ಜನರನ್ನು ಕರೆಸಿ ಅವರ ಸಮ್ಮುಖದಲ್ಲೇ ಅದರ ವಿಚಾರಣೆ ನಡೆಸುತ್ತೇನೆ' ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.












Click it and Unblock the Notifications