287 ಸರ್ಕಾರಿ ಶಾಲೆಗಳಲ್ಲಿ ಮೂರು ವರ್ಷದಲ್ಲಿ ಶೂನ್ಯ ದಾಖಲಾತಿ!
ಬೆಂಗಳೂರು, ಮಾರ್ಚ್ 13; ಕೋವಿಡ್ ಪರಿಣಾಮ ಎಲ್ಲಾ ಕ್ಷೇತ್ರದ ಮೇಲೂ ಉಂಟಾಗಿದೆ. ಅದರಲ್ಲಿಯೂ ಶಿಕ್ಷಣ ಕ್ಷೇತ್ರದ ಮೇಲೆ ಭಾರೀ ಪ್ರಭಾವ ಬೀರಿದೆ. ಶಾಲೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಕುಸಿತವಾಗಿದೆ ಎಂಬ ಅಂಕಿ ಅಂಶ ಬಿಡುಗಡೆಯಾಗಿದೆ.
ಮೂರು ವರ್ಷದಲ್ಲೇ ಮೊದಲ ಬಾರಿಗೆ 287 ಸರ್ಕಾರಿ ಶಾಲೆಯಲ್ಲಿ ಹೊಸದಾಗಿ ದಾಖಲಾಗಿರುವವರ ಸಂಖ್ಯೆ ಶೂನ್ಯವಾಗಿದೆ. ಅಲ್ಲದೇ ಕೋವಿಡ್ ಹೊಡೆತಕ್ಕೆ ಸಿಲುಕಿದ 750 ಖಾಸಗಿ ಶಾಲೆಗಳು ರಾಜ್ಯದಲ್ಲಿ ಸಂಪೂರ್ಣವಾಗಿ ಬಾಗಿಲು ಮುಚ್ಚಿವೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವಿಧಾನ ಪರಿಷತ್‌ನಲ್ಲಿ ನೀಡಿದ ಮಾಹಿತಿಯಲ್ಲಿ ಈ ಅಂಶಗಳು ಬೆಳಕಿಗೆ ಬಂದಿದೆ. ರಾಜ್ಯದಲ್ಲಿರುವ 77,000 ಶಾಲೆಗಳಲ್ಲಿ ಕರ್ನಾಟಕ ಸರ್ಕಾರ 50 ಸಾವಿರ ಶಾಲೆಗಳನ್ನು ನಿರ್ವಹಣೆ ಮಾಡುತ್ತಿದೆ.

ಇವುಗಳ ಪೈಕಿ 285 ಪ್ರಾಥಮಿಕ ಶಾಲೆಗಳು, ಎರಡು ಪ್ರೌಢ ಶಾಲೆಗಳಿಗೆ ಕಳೆದ ಮೂರು ವರ್ಷಗಳಲ್ಲಿ ಯಾವುದೇ ಹೊಸ ವಿದ್ಯಾರ್ಥಿ ದಾಖಲಾಗಿಲ್ಲ. ಅದರಲ್ಲೂ ಕೋವಿಡ್ ಪರಿಸ್ಥಿತಿ ಬಳಿಕ ಶಾಲೆಗೆ ದಾಖಲಾಗುವ ಸಂಖ್ಯೆ ಕುಸಿತವಾಗಿದೆ.
ಕೋವಿಡ್‌ನಿಂದ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದ ಪೋಷಕರು ಖಾಸಗಿ ಶಾಲೆಗಳಿಂದ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಬಹುದು ಎಂದು ಅಂದಾಜಿಲಾಗಿತ್ತು. ಹಲವು ಜಿಲ್ಲೆಗಳಲ್ಲಿ ಹೀಗೆ ನಡೆದಿತ್ತು. ಆದರೆ 285 ಶಾಲೆಗಳಿಗೆ ದಾಖಲಾತಿ ಶೂನ್ಯವಾಗಿದೆ.
ಶೂನ್ಯ ದಾಖಲಾತಿ ಇರುವ ಶಾಲೆಗಳ ಪ್ರದೇಶಗಳಲ್ಲಿ ಶಾಲೆಗೆ ದಾಖಲಾಗುವ ಮಕ್ಕಳು ಇಲ್ಲ. ಮಕ್ಕಳು ದಾಖಲಾಗಿಲ್ಲ ಎಂಬ ಕಾರಣಕ್ಕೆ ಶಾಲೆಗಳನ್ನು ಮುಚ್ಚುವುದು, ಹತ್ತಿರದ ಶಾಲೆಗಳ ಜೊತೆ ವಿಲೀನ ಮಾಡುವ ಯಾವುದೇ ಪ್ರಕ್ರಿಯೆ ನಡೆಸುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಸಷ್ಟಪಡಿಸಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು?; ಶೂನ್ಯ ದಾಖಲಾತಿ ಇರುವ ಸರ್ಕಾರಿ ಶಾಲೆಗಳಲ್ಲಿ ತುಮಕೂರು ಜಿಲ್ಲೆ ಮೊದಲ ಸ್ಥಾನದಲ್ಲಿದೆ. 48 ಶಾಲೆಗಳಿಗೆ ಯಾವುದೇ ವಿದ್ಯಾರ್ಥಿ ದಾಖಲಾಗಿಲ್ಲ. ಹಾಸನ ಮತ್ತು ಕಲಬುರಗಿಯ 28, ಬೀದರ್‌ನ 25, ಚಿಕ್ಕಬಳ್ಳಾಪುರದ 18 ಮತ್ತು ಚಾಮರಾಜನಗರದ 13 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದೆ.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಶೂನ್ಯವಾಗಿದೆ. ಆದರೆ ಖಾಸಗಿ ಶಾಲೆಗಳು ಸಂಪೂರ್ಣವಾಗಿ ಬಾಗಿಲು ಹಾಕಿವೆ. ಇಲಾಖೆಯೇ ನೀಡಿರುವ ಮಾಹಿತಿ ಪ್ರಕಾರ 721 ಪ್ರಾಥಮಿಕ, 245 ಅನುದಾನ ರಹಿತ ಶಾಲೆಗಳು ಕೋವಿಡ್ ಪರಿಸ್ಥಿತಿ ಬಳಿಕ ಸಂಪೂರ್ಣವಾಗಿ ಬಾಗಿಲು ಮುಚ್ಚಿವೆ.
2018-19ರಲ್ಲಿ ಶಾಲೆಗಳನ್ನು ಆರಂಭಿಸಲು ಅನುಮತಿ ಪಡೆದವರು 150 ವಿದ್ಯಾರ್ಥಿಗಳನ್ನು ದಾಖಲು ಮಾಡಲು ವಿಫಲವಾಗಿದ್ದು, ಬೀಗ ಜಡಿದಿವೆ. ದಾಖಲಾತಿಯೇ ಇಲ್ಲವಾದಲ್ಲಿ ಸಿಬ್ಬಂದಿಗಳ ವೇತನ ಸೇರಿದಂತೆ ಇತರೆ ಖರ್ಚು ಭರಿಸಲಾಗದೇ ಶಾಲೆಗಳು ಮುಚ್ಚಿವೆ.
ಕೋವಿಡ್ ಪರಿಸ್ಥಿತಿ ಬಳಿಕ ಖಾಸಗಿ ಶಾಲೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಸರ್ಕಾರ ಶಾಲೆಗಳಿಗೆ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಖಾಸಗಿ ಶಾಲೆಗಳ ಒಕ್ಕೂಟ ಹಲವು ದಿನಗಳಿಂದ ಒತ್ತಾಯಿಸುತ್ತಲೇ ಇದೆ. ಬಡ್ಡಿ ರಹಿತ ಸಾಲ ನೀಡಿ, ಇಲ್ಲವೇ ಸಾಲ ಮನ್ನಾ ಮಾಡಿ ಎಂದು ಬೇಡಿಕೆ ಇಡಲಾಗಿದ್ದು, ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ.
ಮಾರ್ಗಸೂಚಿ ಪ್ರಕಟ; ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕೋವಿಡ್ ಪರಿಸ್ಥಿತಿ ಬಳಿಕ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿತ್ತು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ದಾಖಲಿಸಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಯತ್ನ ನಡೆಸಬೇಕು ಎಂದು ಸೂಚನೆ ನೀಡಲಾಗಿತ್ತು.
ಕೋವಿಡ್ ಸಾಂಕ್ರಾಮಿಕದ ಬಳಿಕ ಶಾಲೆಯಿಂದ ಹೆಚ್ಚಿನ ಸಂಖ್ಯೆಯ ಮಕ್ಕಳು ಹೊರಗುಳಿಯದಂತೆ ಮಾಡಲು ಸೂಕ್ತ ಕಾರ್ಯತಂತ್ರವನ್ನು ರೂಪಿಸುವುದು ಅತ್ಯಗತ್ಯವಾಗಿದೆ. ಮಕ್ಕಳ ಪ್ರವೇಶ ಇಳಿಕೆ, ಕಲಿಕೆ ನಷ್ಟವಾಗಿ ಸಾಕಷ್ಟು ಕೆಡುಕಾಗಿದೆ, ಹಾಗಾಗಿ ಅವರಿಗೆ ಶಿಕ್ಷಣದ ಲಭ್ಯತೆ, ಗುಣಮಟ್ಟ ಮತ್ತು ಸಮಾನತೆಗಾಗಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸೂಚಿಸಿತ್ತು.
ಶಾಲೆಗೆ ಹೋಗುವ ಮಕ್ಕಳಿಗೆ ಸಮಾನ ಮತ್ತು ಗುಣಮಟ್ಟದ ಶಿಕ್ಷಣ ಲಭ್ಯವಾಗುವಂತೆ ಮಾಡುವುದು ಶಾಲೆ ಪುನರಾರಂಭವಾದಾಗ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಕ್ಕಳ ದಾಖಲಾತಿಗೆ ಅನುಸರಿಸಬೇಕಿರುವ ಕ್ರಮಗಳ ಕುರಿತು ವಿಸ್ತೃತವಾದ ಮಾರ್ಗಸೂಚಿ ಹೊರಡಿಸಲಾಗಿತ್ತು.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು 6 ರಿಂದ 18 ವರ್ಷ ವಯೋಮಿತಿಯ ಮಕ್ಕಳನ್ನು ನಿಖರವಾಗಿ ಗುರುತಿಸಲು ಸಮಗ್ರ ಮನೆ-ಮನೆ ಸಮೀಕ್ಷೆ ನಡೆಸಬೇಕು ಮತ್ತು ಅವರ ಪ್ರವೇಶಾತಿಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಹೇಳಿತ್ತು.
ಶೈಕ್ಷಣಿಕ ವರ್ಷದ ಆರಂಭದಲ್ಲಿ ಪ್ರವೇಶೋತ್ಸವ, ಶಾಲಾ ಚಲೋ (ಶಾಲೆಯತ್ತ ನಡೆಯಿರಿ) ಅಭಿಯಾನ ಮತ್ತಿತರ ವಿಶೇಷ ದಾಖಲಾತಿ ಆಂದೋಲನ ಆಯೋಜನೆ ಮಾಡಬೇಕು. ಮಕ್ಕಳ ಹಾಜರಾತಿ ಮತ್ತು ಪ್ರವೇಶದ ಬಗ್ಗೆ ಸಮುದಾಯ ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿತ್ತು.












Click it and Unblock the Notifications