ರಾಮನಗರ: ಸಹೋದ್ಯೋಗಿಯನ್ನು ಹತ್ಯೆಗೈದ ಯುವಕನ ಬಂಧನ
ರಾಮನಗರ, ಜುಲೈ 02 : ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳನ್ನು ಹತ್ಯೆಗೈದ ಆರೋಪಿಯನ್ನು ಕುಂಬಳಗೂಡು ಪೊಲೀಸರು ಬಂಧಿಸಿದ್ದಾರೆ.
ರಾಮಸಂದ್ರ ಗ್ರಾಮದ ನಿವಾಸಿ ವೆಂಕಟೇಶ್(23) ಆರೋಪಿಯಾಗಿದ್ದು, ಈತ ಕಾವ್ಯಶ್ರೀ(21) ಎಂಬಾಕೆಯನ್ನು ಹತ್ಯೆಗೈದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿ ವೆಂಕಟೇಶ್ ಮತ್ತು ಕೊಲೆಯಾದ ಕಾವ್ಯಶ್ರೀ ಇಬ್ಬರೂ ಈ ಹಿಂದೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‍ನಲ್ಲಿರುವ ಖಾಸಗಿ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಪಿಗ್ಮಿ ಕಲೆಕ್ಟರ್ ಆಗಿದ್ದ ವೆಂಕಟೇಶ್ ಸುಮಾರು 85 ಸಾವಿರ ರೂ.ಗಳನ್ನು ದುರುಪಯೋಗ ಮಾಡಿಕೊಂಡಿದ್ದನು.
ಹೀಗಾಗಿ ಫೈನಾನ್ಸ್ ಸಂಸ್ಥೆಯು ಆತನನ್ನು ಕೆಲಸದಿಂದ ತೆಗೆದು ಹಾಕಿತ್ತಲ್ಲದೆ ಹಣವನ್ನು ನೀಡುವಂತೆ ತಪ್ಪಿದಲ್ಲಿ ಪೊಲೀಸರಿಗೆ ದೂರು ನೀಡುವಂತೆ ಎಚ್ಚರಿಸಲಾಗಿತ್ತು.
ಹೀಗಾಗಿ ಸುಮಾರು 40 ಸಾವಿರ ಹಣವನ್ನು ಹೊಂದಿಸಿದ ವೆಂಕಟೇಶ್ ಉಳಿದ ಹಣಕ್ಕಾಗಿ ಅದೇ ಸಂಸ್ಥೆಯಲ್ಲಿದ್ದ ಕಾವ್ಯಶ್ರೀಯನ್ನು ಪೀಡಿಸುತ್ತಿದ್ದನು ಎನ್ನಲಾಗಿದೆ. ಆದರೆ ಆಕೆ ಅಷ್ಟೊಂದು ಹಣ ತನ್ನ ಬಳಿ ಇಲ್ಲವೆಂದು ಹೇಳಿದ್ದಳು.
ಜೂನ್ 28ರಂದು ರಾತ್ರಿ ಆಕೆಗೆ ಕರೆ ಮಾಡಿ ಒಬ್ಬಳೇ ಇರುವುದನ್ನು ಖಚಿತಪಡಿಸಿಕೊಂಡು ಮನೆಗೆ ಬಂದು ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಅಷ್ಟೇ ಅಲ್ಲದೆ ಅವಳೊಂದಿಗೆ ಜಗಳ ತೆಗೆದು ತನ್ನ ಬಳಿಯಿದ್ದ ಚಾಕುವಿನಿಂದ 25ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆಗೈದು ಪರಾರಿಯಾಗಿದ್ದನು.
ರಾಮಸಂದ್ರ ಗ್ರಾಮದಲ್ಲಿ ಸಣ್ಣ ಹೋಟೆಲ್ ನಡೆಸುವ ಕಾವ್ಯಶ್ರೀ ತಾಯಿ ವ್ಯಾಪಾರ ಮುಗಿಸಿ ರಾತ್ರಿ 10.45ರ ವೇಳೆಗೆ ಮನೆಗೆ ಬಂದಾಗ ಮಗಳ ಕೊಲೆ ಆಗಿರುವುದು ಬೆಳಕಿಗೆ ಬಂದಿತ್ತು.
ಪ್ರಕರಣ ದಾಖಲಿಸಿಕೊಂಡ ಕುಂಬಳಗೋಡು ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದರು. ಪ್ರಬಾರ ಎಸ್ಪಿ ಪಿ ಎಂ.ಕೆ.ತಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಕುಂಬಳಗೂಡು ವೃತ್ತ ಸಿಪಿಐ ಎಸ್.ಶ್ರೀಧರ್, ಬ್ಯಾಡರಹಳ್ಳಿ ವೃತ್ತ ಸಿಪಿಐ ಸತ್ಯನಾರಾಯಣ, ಪಿಎಸ್ ಐ ಭಾಸ್ಕರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು.
ಈ ವೇಳೆ ಆರೋಪಿ ವೆಂಕಟೇಶ್ ನ ಮೇಲೆ ಸಂಶಯವುಂಟಾಗಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೊಲೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾನೆ.












Click it and Unblock the Notifications