ಸತ್ಯ ಹೇಳಿದ ಸಿದ್ದರಾಮಯ್ಯ, ನಂಬಿಕೆ ದ್ರೋಹ ಎಂದ ಎಚ್‌ಡಿಕೆ!

ಬೆಂಗಳೂರು, ಮಾರ್ಚ್ 10: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಬಿಜೆಪಿಗೋ?, ಜೆಡಿಎಸ್‌ಗೋ? ಎಂಬುದು ಇನ್ನೂ ಅಂತಿಮವಾಗಿಲ್ಲ. ಆದರೆ 2019ರ ಲೋಕಸಭೆ ಚುನಾವಣೆ ಫಲಿತಾಂಶ ಬಗ್ಗೆ ಚರ್ಚೆ ಆರಂಭವಾಗಿದೆ. ಇದಕ್ಕೆ ಕಾರಣವಾಗಿರುವುದು ಸಿದ್ದರಾಮಯ್ಯ ಹೇಳಿಕೆ.

ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ವೇಳೆ ಅವರು 2019ರ ಚುನಾವಣೆ ಫಲಿತಾಂಶವನ್ನು ಉಲ್ಲೇಖಿಸಿದರು.

siddaramaiah-mandya

ಈ ಕುರಿತು ಅಸಮಾಧಾನ ವ್ಯಕ್ತಪಡಿಸಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. 'ಮಂಡ್ಯ ಜಿಲ್ಲೆಯ ಗ್ಯಾರಂಟಿಗಳ 2ನೇ ಸಮಾವೇಶದಲ್ಲಿ ಅಲವತ್ತುಕೊಂಡ ಸಿಎಂ Siddaramaiahನವರೇ.. ಕೊನೆಗೂ ಸತ್ಯ ನುಡಿದಿದ್ದೀರಿ! ಸುಳ್ಳುರಾಮಯ್ಯ ಬಿರುದಾಂಕಿತರಾದ ನೀವು, ಕೊನೆಗೂ ಸತ್ಯ ಕಕ್ಕಿದ್ದೀರಿ! ಸುಳ್ಳುರಾಮಯ್ಯನೆಂಬ ಕುಖ್ಯಾತಿಯಿಂದ ಹೊರಬರಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೀರಿ. ಅಭಿನಂದನೆಗಳು' ಎಂದು ವ್ಯಂಗ್ಯವಾಡಿದ್ದಾರೆ.

ನಂಬಿಕೆ ದ್ರೋಹ: 'ಸತ್ಯ ಗಂಟಲಲ್ಲಿ ಸಿಕ್ಕಿಕೊಂಡ ಬಿಸಿ ತುಪ್ಪದಂತೆ..ಕಕ್ಕಲೇಬೇಕು. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಆಯ್ಕೆಯಾದ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ಸೇ ಕಾರಣ ಎಂದು ಸ್ವತಃ ನೀವೇ ಒಪ್ಪಿಕೊಂಡಿದ್ದೀರಿ. ನಿಮ್ಮದೇ ಮಾತುಗಳಲ್ಲಿ ಹೇಳುವುದಾದರೆ.. ಸುಮಲತಾ ಬಿಜೆಪಿಯಿಂದ ಗೆದ್ದಿದ್ದಲ್ಲ..ಕಾಂಗ್ರೆಸ್‌ ವೋಟುಗಳಿಂದಲೇ ಗೆದ್ದಿದ್ದು ಆಯಮ್ಮ..!! ಇದಲ್ಲವೇ ನಂಬಿಕೆದ್ರೋಹ..?' ಎಂದು ಪ್ರಶ್ನೆ ಮಾಡಿದ್ದಾರೆ.

'ನಿಮ್ಮ ಗೋಮುಖವ್ಯಾಘ್ರತನ ಅರಿಯಲು ಇಷ್ಟು ಸಾಕು. ಅಂದು ಕಾಂಗ್ರೆಸ್ ಮೈತ್ರಿ ಪಕ್ಷ, ನಿಖಿಲ್‌ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ. ಅವರ ಜತೆಯಲ್ಲೇ ಪ್ರಚಾರದ ಸೋಗಿನಾಟವಾಡಿ, ಮಾಧ್ಯಮಗಳ ಮುಂದೆ ಗೆಲ್ಲಿಸುತ್ತೇವೆಂದು ಪೋಸು ಕೊಡುತ್ತಲೇ ನಿಖಿಲ್ ಸುತ್ತ ಶಕುನಿವ್ಯೂಹವನ್ನೇ ರಚಿಸಿದ ಕಲಿಯುಗ ಶಕುನಿ ನೀವಲ್ಲದೆ ಮತ್ತ್ಯಾರು ಸಿದ್ದರಾಮಯ್ಯನವರೇ?' ಎಂದು ಪೋಸ್ಟ್ ಹಾಕಿದ್ದಾರೆ.

'ಕಳ್ಳಬೆಕ್ಕು ಕದ್ದು ಹಾಲು ಕುಡಿದರೆ ಗೊತ್ತಾಗದೇ? ಬೂದಿ ಮುಚ್ಚಿದ ಕೆಂಡ ತಣ್ಣಗಿರಲು ಸಾಧ್ಯವೇ? ಕುದಿಯುವ ಕುಲುಮೆಯಂತಿರುವ ನಿಮ್ಮ ಉದರಹುರಿಗೆ ತಂಪೆನ್ನುವುದುಂಟೆ? 5 ವರ್ಷಗಳ ನಂತರವಾದರೂ ಸತ್ಯ ಕಕ್ಕಿದ್ದೀರಿ ಹಾಗೂ ನಂಬಿದವನ ಮನೆ ನಾಶವಾಗಲಿ ಎನ್ನುವ ನಿಮ್ಮಹೇಯತನ ಬಯಲಾಗಿದೆ. ಸತ್ಯಮೇಯ ಜಯತೆ. ಇದಿಷ್ಟೇ ನನ್ನ ಕಳಕಳಿ ಮತ್ತು ನಂಬಿಕೆ' ಎಂದು ಕುಮಾರಸ್ವಾಮಿ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಅಂದು ಏನಾಗಿತ್ತು?: 2019ರ ಲೋಕಸಭೆ ಚುನಾವಣೆ ಸಮಯದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಜೆಡಿಎಸ್ ಚುನಾವಣೆ ಎದುರಿಸಿತು. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದರು.

ಸುಮಲತಾ ಪಕ್ಷೇತರ ಅಭ್ಯರ್ಥಿಯಾದರು. ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸದೇ ಸುಮಲತಾ ಬೆಂಬಲಿಸಿತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಎದುರು ಹಾಕಿಕೊಂಡು, ಚುನಾವಣೆಯಲ್ಲಿ 703,660 ಮತಗಳನ್ನು ಪಡೆದು ಸುಮಲತಾ ಗೆದ್ದರು.

ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (577,784 ಮತ) ಸೋತರು. ತಾವು ಮುಖ್ಯಮಂತ್ರಿಯಾಗಿದ್ದರೂ ಸಹ ಪುತ್ರನನ್ನು ಗೆಲ್ಲಿಸಲು ಆಗಲಿಲ್ಲ ಎಂಬ ನೋವು ಎಚ್. ಡಿ. ಕುಮಾರಸ್ವಾಮಿ ಅವರನ್ನು ಇಂದಿಗೂ ಕಾಡುತ್ತಿದೆ. ಪದೇ ಪದೇ ಮಂಡ್ಯದ ಸೋಲು ಅವರನ್ನು ಕಾಂಗ್ರೆಸ್ ವಿರುದ್ಧ ಟೀಕೆ ಮಾಡುವಂತೆ ಮಾಡುತ್ತಿದೆ.

'ಸಕ್ಕರೆ ಕಾರ್ಖಾನೆ ಬಗ್ಗೆ ಹೇಳಿದ್ದೀರಿ. ಬಜೆಟ್‌ನಲ್ಲಿ ‌ಘೋಷಣೆ ಮಾಡಿದ್ದೀರಿ, ಸರಿ.. ದುಡ್ಡು ಎಲ್ಲಿಟ್ಟಿದ್ದೀರಿ. ನಾನು 2019ರ ಬಜೆಟ್‌ ನಲ್ಲಿಯೇ ಈ ಕಾರ್ಖಾನೆಗೆ 100 ಕೋಟಿ ತೆಗೆದಿರಿಸಿದ್ದೆ. ಎಲ್ಲಿ ಹೋಯಿತು ಆ ದುಡ್ಡು? ಇದರ ಬಗ್ಗೆ ಗ್ಯಾರಂಟಿ ಸಮಾವೇಶದಲ್ಲಿ ಚಕಾರ ಎತ್ತಿಲಿಲ್ಲವೇಕೆ ಸಿದ್ದರಾಮಯ್ಯನವರೇ? ಇಂಥ ಆತ್ಮವಂಚನೆ ಏತಕ್ಕೆ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

'ತನ್ನ ತಲೆಗೇ ಹರಳೆಣ್ಣೆ ಇಲ್ಲ, ಪಕ್ಕದವನಿಗೆ ಸಂಪಂಗೆಣ್ಣೆ ಕೊಟ್ಟನಂತೆ ನಿಮ್ಮಂಥವನೊಬ್ಬ! ನಿಮ್ಮ ವೈಖರಿ ಹಾಗಿದೆ. ಕನ್ನಡಿಗರು ಬರದ ಬೆಂಕಿಯಲ್ಲಿ ಬೇಯುತ್ತಿದ್ದರೆ ನಿಮ್ಮ ಸರಕಾರ ಕದ್ದೂಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ! ಒಂದು ಕೈಲಿ ಅಗ್ಗದ ಗ್ಯಾರಂಟಿ ಕೊಟ್ಟು ಹತ್ತು ಕೈಗಳಲ್ಲಿ ಬದುಕಿನ ಗ್ಯಾರಂಟಿ ಕಿತ್ತುಕೊಳ್ಳುತ್ತಿದ್ದೀರಿ? ಇದು ನ್ಯಾಯವೇ?' ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+