2011ರ ಕೆಪಿಎಸ್‌ಸಿ ನೇಮಕಾತಿ ವಿವಾದ; ಸರ್ಕಾರದ ಮಹತ್ವದ ತೀರ್ಮಾನ

ಬೆಂಗಳೂರು, ಫೆಬ್ರವರಿ 09; ತೀವ್ರ ವಿವಾದಕ್ಕೆ ಕಾರಣವಾಗಿದ್ದ 2011ರ ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕೆ 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿತ್ತು. ಆದರೆ ಸರ್ಕಾರದ ಆದೇಶದ ವಿರುದ್ಧ ಕೆಲ ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದರು. ಕೆಎಟಿ ಸರ್ಕಾರದ ಆದೇಶವನ್ನು ರದ್ದುಗೊಳಿಸಿತ್ತು. ನಂತರ ಕೆಎಟಿ ಆದೇಶದಂತೆ 2011ರ ಕೆಪಿಎಸ್‌ಸಿ ನೇಮಕಾತಿಗೆ ಸಚಿವ ಸಂಪುಟ ಸಮ್ಮತಿ ಸೂಚಿಸಿತ್ತು.

ಇದೀಗ ರಾಜ್ಯ ಸರ್ಕಾರ 2011ರ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನೇ ರದ್ದುಗೊಳಿಸಿ 2014ರ ಆಗಸ್ಟ್ 14ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆದು, ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೂ ನೇಮಕಾತಿ ಆದೇಶ ನೀಡಲು ಮಸೂದೆಯನ್ನು ಬರುವ ಜಂಟಿ ಅಧಿವೇಶನದಲ್ಲಿ ಮಂಡಿಸಲು ಬುಧವಾರ ನಡೆದ ಸಚಿವ ‌ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ‌ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಒಟ್ಟು 362 ಗಜೆಟೆಡ್ ಅಧಿಕಾರಿಗಳ ಹುದ್ದೆ ನೇಮಕಾತಿಯನ್ನು ಸಿಂಧುಗೊಳಿಸುವ ನಿಟ್ಟಿನಲ್ಲಿ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ.

2011 KPSC Recruitment Decision Of Karnataka Cabinet

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಡಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, "2011ರ ಬ್ಯಾಚ್‌ನ ನೇಮಕ ಪಟ್ಟಿಯನ್ನು ಒಪ್ಪಿಕೊಳ್ಳುವುದಾಗಿ ಹಿಂದೆಯೇ ವಿಧಾನ ಸಭೆಯಲ್ಲಿ ಮಾತು ನೀಡಲಾಗಿತ್ತು. ಅದನ್ನು ಮುಂದಿನ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸುವುದಾಗಿ" ತಿಳಿಸಿದರು.

"ನೇಮಕ ಅಸಿಂಧುಗೊಳಿಸುವ ಮುನ್ನ ವಿಧಾನಸಭೆಯ ಅಭಿಪ್ರಾಯ ಪಡೆಯಬೇಕು. ಆದರೆ ಅಂದು ಈ ರೀತಿ ಅನುಮತಿ ಪಡೆದಿರಲಿಲ್ಲ ಹೀಗಾಗಿ ವಿಧಾನಸಭೆಯ ಅಭಿಪ್ರಾಯವನ್ನು ಕಾನೂನು ಬದ್ಧವಾಗಿ ಪಡೆಯುವ ಬಗ್ಗೆ ಚರ್ಚೆ ನಡೆದಿದೆ. ಕಾನೂನು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆಸಲಾಗುವುದು. ಸೇವಾ ಹಿರಿತನ, ಮುಂಬಡ್ತಿ ಇತ್ಯಾದಿಗಳ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ" ಎಂದರು.

2011ರ ಬ್ಯಾಚ್‌ಗೆ ಸಂಬಂಧಪಟ್ಟಂತೆ 323/2ರ ವಿಧಿಯನ್ವಯ ನೇಮಕ ಅಸಿಂಧುಗೊಳಿಸುವ ಮುನ್ನ ವಿಧಾನಸಭೆಯ ಅಭಿಪ್ರಾಯ ಪಡೆಯಬೇಕು ಎಂಬ ನಿಯಮವಿದೆ. ಆದರೆ, ಅಂದು ಈ ರೀತಿ ಅನುಮತಿ ಪಡೆದಿರಲಿಲ್ಲ. ವಾರ್ಷಿಕ ವರದಿಯಲ್ಲಿ ನೀಡಿದ ಮಾಹಿತಿಯನ್ನೇ ವಿಧಾನಸಭೆಗೆ ತಿಳಿಸಿದ್ದು ಎಂದು ಹೇಳಲಾಗಿತ್ತು. ಇದರ ಆಧಾರದಲ್ಲಿ ಕೋರ್ಟ್‌ಗಳು ತೀರ್ಪು ನೀಡಿವೆ. ಹೀಗಾಗಿ ವಿಧಾನಸಭೆಯ ಅಭಿಪ್ರಾಯವನ್ನು ಕಾನೂನು ಬದ್ಧವಾಗಿ ಪಡೆಯುವ ಬಗ್ಗೆ ಚರ್ಚೆ ನಡೆದಿದೆ. ಈ ಮೂಲಕ ಅದನ್ನು ಸಿಂಧುಗೊಳಿಸುವ ತಂತ್ರ ಇದು ಎನ್ನಲಾಗಿದೆ.

ಪ್ರಕರಣದ ಹಿನ್ನೆಲೆ; 2011ರಲ್ಲಿ ಕೆಪಿಎಸ್‌ಸಿ 362 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ಪರೀಕ್ಷೆ ನಡೆಸಿ ಸಂಭಾವ್ಯ ಪಟ್ಟಿ ಪ್ರಕಟಿಸಿದಾಗ ಡಾ. ಎಚ್‌. ಪಿ. ಎಸ್‌. ಮೈತ್ರಿಯಾ ನೇಮಕದಲ್ಲಿ ಅವ್ಯವಹಾರ ಆರೋಪ ಮಾಡಿದ್ದರು. ಬಳಿಕ ಇದು ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿ ನೇಮಕವನ್ನು ರದ್ದುಗೊಳಿಸಲು ಸೂಚಿಸಲಾಗಿತ್ತು. ಅಷ್ಟಾದರೂ ಕಾನೂನು ಹೋರಾಟ ಮುಂದುವರಿದು ಅವರೆಲ್ಲರೂ ಇನ್ನೂ ಹುದ್ದೆಯಲ್ಲಿದ್ದಾರೆ. ಅವರನ್ನು ರಕ್ಷಿಸಲು ಸರಕಾರ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಮೈತ್ರಿಯಾ ಆರೋಪದ ಹಿನ್ನೆಲೆಯಲ್ಲಿ ಸರಕಾರ 2014ರ ಜೂನ್ 27ರಂದು ಸಿಐಡಿ ತನಿಖೆಗೆ ಆದೇಶ ನೀಡಿತ್ತು. ಆಗಸ್ಟ್ 8 ರಂದು ಸರಕಾರ ಆಯ್ಕೆ ಪಟ್ಟಿಯನ್ನು ಹಿಂದಕ್ಕೆ ಪಡೆದಿತ್ತು. ಆದರೆ, 2016ರ ಮಾರ್ಚ್ 9 ರಂದು ಕೆಎಟಿ ಸರಕಾರದ ಆದೇಶವನ್ನೇ ರದ್ದು ಮಾಡಿ ನೇಮಕವನ್ನು ಊರ್ಜಿತಗೊಳಿಸಿತು. ಮುಂದೆ ಹೈಕೋರ್ಟ್‌ ಕೆಎಟಿ ಆದೇಶವನ್ನು ರದ್ದುಪಡಿಸಿ ಹೊಸದಾಗಿ ನೇಮಕ ಪ್ರಕ್ರಿಯೆ ನಡೆಸಲು ಸೂಚಿಸಿತು. ಇದನ್ನು ಸುಪ್ರೀಂ ಕೋರ್ಟ್‌ ಕೂಡಾ ಮಾನ್ಯ ಮಾಡಿತ್ತು.

2018 ಜುಲೈ 13ರಂದು ಲಿಖಿತ ಪರೀಕ್ಷೆಯಲ್ಲೂ ಅಕ್ರಮ ಸಾಬೀತು ಆದ ಹಿನ್ನಲೆಯಲ್ಲಿ 362 ಹುದ್ದೆಗಳ ನೇಮಕ ರದ್ದು ಆದೇಶವನ್ನು ಹೈಕೋರ್ಟ್‌ ಪುನರುಚ್ಚರಿಸಿತು. 2019ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಸರಕಾರ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯೂ ವಜಾ ಆಗಿತ್ತು.‌

ಸಂಪುಟ ‌ಸಭೆಯ ನಿರ್ಣಯಗಳು

* ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು, ಮಾಸ್ತಿ ಗ್ರಾಮದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಸತಿ ಶಾಲಾ (ಹಿಂದುಳಿದ ವರ್ಗ) ಕಟ್ಟಡ ನಿರ್ಮಾಣ ಕಾಮಗಾರಿಯ ರೂ. 17.00 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.

* ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿಪಡಿಸುತ್ತಿರುವ ರೂ. 28.63 ಕೋಟಿಗಳ ಮೊತ್ತದ ಆರು ರಸ್ತೆ ಕಾಮಗಾರಿಗಳ ಸ್ಥಳಗಳನ್ನು ಬದಲಾವಣೆ ಮಾಡಲು ಅನುಮೋದನೆ.

* ವಿಜಯಪುರ ಮಹಾನಗರಪಾಲಿಕೆಯಲ್ಲಿ ದೀರ್ಘಾವಧಿ ಗುತ್ತಿಗೆಗೆ ನೀಡಿರುವ ಆಸ್ತಿಗಳ ಪೈಕಿ ಉಳಿಕೆ 366 ಲೀಸ್ ಆಸ್ತಿಗಳನ್ನೂ ಸಹ ಸರ್ಕಾರ ಈಗಾಗಲೇ ನಿಗದಿಪಡಿಸಿರುವ ದರಕ್ಕೆ ಬಡ್ಡಿ ಮೊತ್ತ ಸೇರಿಸಿ ಖರೀದಿಗೆ ಮಂಜೂರಾತಿ.

* ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ-ಹಲವು ಮಾರ್ಪಾಡುಗಳೊಂದಿಗೆ ನಿರ್ಮಾಣ ಮಾಡುವ ಪ್ರಸ್ತಾವನೆಗೆ ಅನುಮೋದನೆ

* ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಿರ್ಮಿಸಲಾಗುವ ನೂತನ ಅನುಭವ ಮಂಟಪದ ನಿರ್ಮಾಣ ಕಾಮಗಾರಿಯ ಅಂದಾಜು 560 ಕೋಟಿಗೆ ಆಡಳಿತಾತ್ಮಕ ಅನುಮೋದನೆ.

* ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ನಗರದಲ್ಲಿನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಎಲ್‌ಆರ್‌ಒಟಿ ಆಧಾರದ ಮೇಲೆ ಗಿರಿಜಾರಮಣ ಇಂಪಕ್ಸ್ ಪ್ರೈವೇಟ್ ಲಿ.ಗೆ 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಿ ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ.

* ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝಂಜುರವಾಡ ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಯಲ್ಲಮ್ಮನವಾಡಿ ಕೆರೆಗೆ ನೀರು ತುಂಬಿಸುವ ಯೋಜನೆಯ ಮೊದಲನೇ ಹಂತದ ಕಾಮಗಾರಿಯನ್ನು 49.51 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.

* ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಬಾದನಳ್ಳಿಯಿಂದ ಗೌಡಗಾಂವ ಜಿಲ್ಲಾ ಮುಖ್ಯ ರಸ್ತೆಯ 9.60 ಕಿ.ಮೀ ರಸ್ತೆ ಸುಧಾರಣೆ ಕಾಮಗಾರಿಯ 10.97 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

* ಕರ್ನಾಟಕ ಮುದ್ರಾಂಕ (ತಿದ್ದುಪಡಿ) ವಿಧೇಯಕ, 2022ಗೆ ಅನುಮೋದನೆಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಿಡುಗುರ್ತಿ ಮತ್ತು ಇತರೆ 60 ಜನವಸತಿಗಳಿಗೆ ಜಲ ಜೀವನ ಮಿಷನ್‌ ಅಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ ರೂ. 131.21 ಕೋಟಿ ಅಂದಾಜು ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.

* ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿ ಮತ್ತು ಇತರೆ 336 ಜನವಸತಿಗಳನ್ನೊಳಗೊಂಡ 122 ಗ್ರಾಮಗಳಿಗೆ ಜಲ ಜೀವನ ಮಿಷನ್‌ ಅಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ ರೂ. 88 ಕೋಟಿ ಅಂದಾಜು ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮೋದನೆ.

* ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಅಮಾನಿ ಬೈರಸಾಗರ ಕೆರೆಯ ಸುತ್ತಮುತ್ತಲಿನ 28 ಜನವಸತಿಗಳಿಗೆ ಜೀವನ್ ಮಿಷನಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ 15 ಕೋಟಿ ರೂ. ಅಂದಾಜು ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.

* ಶಿವಮೊಗ್ಗ ತಾಲೂಕಿನ ಗೋವಿಂದಪುರ ಹಾಗೂ ಇತರೆ 11 ಜನವಸತಿಗಳು ಮತ್ತು ಗೋಪಿಶೆಟ್ಟಿಕೊಪ್ಪದ 1 ನಗರ ಪ್ರದೇಶಕ್ಕೆ ಜಲ ಜೀವನ್ ಮಿಷನಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ ರೂ. 16.73 ಕೋಟಿಗಳ ಅಂದಾಜು ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.

* ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಾಸರಕುದ್ರಿಗೆ ಮತ್ತು ಇತರೆ 5 ಗ್ರಾಮಗಳಿಗೆ (23 ಜನವಸತಿಗಳು) ಜಲ ಜೀವನ್ ಮಿಷನ್‌ಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ ರೂ. 30.27 ಕೋಟಿಗಳ ಅಂದಾಜು ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.

* ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಗೋಟೆಗಾಳಿ ಮತ್ತು ಇತರೆ 22 ಗ್ರಾಮಗಳ (43 ಜನವಸತಿಗಳು) ಜಲ್ ಜೀವನ್ ಮಿಷನರಡಿ ಹಾಗೂ ಕೆರವಾಡಿ ಮತ್ತು ಇತರೆ 17 ಗ್ರಾಮಗಳ (42 ಜನವಸತಿಗಳು) ಸಂಯೋಜಿತ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ ರೂ. 88.50 ಕೋಟಿಗಳ ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.

* ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಸತಿ ಶಾಲಾ (ಹಿಂದುಳಿದ ವರ್ಗ) ಕಟ್ಟಡ ನಿರ್ಮಾಣ ಕಾಮಗಾರಿಯ ರೂ. 17 ಕೋಟಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.

* ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಿರ್ಮಿಸಲಾಗುವ ನೂತನ ಅನುಭವ ಮಂಟಪದ ನಿರ್ಮಾಣ ಕಾಮಗಾರಿಯ ಅಂದಾಜು ಪತ್ರಿಕೆಗೆ ಆಡಳಿತಾತ್ಮಕ ಅನುಮೋದನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+