ಕರ್ನಾಟಕದಿಂದ ತವರಿಗೆ ಮರಳಲು 2.04 ಲಕ್ಷ ಜನರ ನೋಂದಣಿ!
ಬೆಂಗಳೂರು, ಮೇ 08 : ಕರ್ನಾಟಕ ಸರ್ಕಾರ ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಕ್ಕೆ ಮರಳಲು ರೈಲು ವ್ಯವಸ್ಥೆಯನ್ನು ಪುನಃ ಆರಂಭಿಸಿದೆ. ಆದರೆ, ಕೆಲವೊಂದು ಷರತ್ತುಗಳನ್ನು ಹಾಕಲಾಗಿದೆ. ಕಾರ್ಮಿಕರ ಹೆಸರುಗಳಿಗೆ ಅಲ್ಲಿನ ರಾಜ್ಯ ಸರ್ಕಾರ ಒಪ್ಪಿಗೆ ನೀಡಬೇಕಿದೆ.
ವಲಸೆ ಕಾರ್ಮಿಕರು ತವರು ರಾಜ್ಯಕ್ಕೆ ಮರಳಲು ಇದ್ದ ರೈಲು ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರ ರದ್ದು ಮಾಡಿತ್ತು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು. ಗುರುವಾರ ಸಂಜೆ ಸರ್ಕಾರ ಪುನಃ ರೈಲು ಸೇವೆಯನ್ನು ಆರಂಭಿಸುತ್ತೇವೆ ಎಂದು ಹೇಳಿದೆ.
ಭಾರತೀಯ ರೈಲ್ವೆ ಮುಂದಿನ 10 ದಿನಗಳಲ್ಲಿ 100 ರೈಲುಗಳನ್ನು ವಲಸೆ ಕಾರ್ಮಿಕರು ತವರು ರಾಜ್ಯಕ್ಕೆ ಮರಳಲು ಅನುಕೂಲವಾಗುಂತೆ ಓಡಿಸಲಿದೆ. ಬೇರೆ-ಬೇರೆ ರಾಜ್ಯಗಳಿಂದ ಈಗಾಗಲೇ ಕಾರ್ಮಿಕರು ಪ್ರಯಾಣ ಆರಂಭಿಸಿದ್ದಾರೆ.
ಕರ್ನಾಟಕದ ಕಂದಾಯ ಇಲಾಖೆ ನೈಋತ್ಯ ರೈಲ್ವೆಗೆ ಗುರುವಾರ ಪತ್ರ ಬರೆದಿದೆ. ವಿದ್ಯಾರ್ಥಿಗಳು, ಯಾತ್ರಿಕರು, ವಲಸೆ ಕಾರ್ಮಿಕರು ತವರು ರಾಜ್ಯಕ್ಕೆ ವಾಪಸ್ ಆಗಲು ರೈಲಿನ ಅಗತ್ಯವಿದೆ ಎಂದು ಪತ್ರದಲ್ಲಿ ಮನವಿ ಮಾಡಿದೆ.

9 ರಾಜ್ಯಗಳಿಗೆ ಮಾತ್ರ ರೈಲು ಸೇವೆ
ಮೊದಲ ಹಂತದಲ್ಲಿ ಕರ್ನಾಟಕ ಸರ್ಕಾರ 9 ರಾಜ್ಯಗಳಿಗೆ ಮಾತ್ರ ರೈಲುಗಳನ್ನು ಓಡಿಸಲಿದೆ. ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ಮಣಿಪುರ, ತ್ರಿಪುರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ ರಾಜ್ಯಗಳಿಗೆ ರೈಲುಗಳು ಸಂಚಾರ ನಡೆಸಲಿವೆ.

2ನೇ ಹಂತದ ರಾಜ್ಯಗಳು
ಕರ್ನಾಟಕ ಸರ್ಕಾರ 2ನೇ ಹಂತದಲ್ಲಿ ಪಂಜಾಬ್, ಕೇರಳ, ನವದೆಹಲಿ, ತಮಿಳುನಾಡು ರಾಜ್ಯಗಳಿಗೆ ರೈಲುಗಳನ್ನು ಓಡಿಸಲಿದೆ. ಶುಕ್ರವಾರ 1 ಅಥವ 2 ರೈಲು ಲಭ್ಯವಾಗುವ ನಿರೀಕ್ಷೆ ಇದ್ದು, ಶನಿವಾರದಿಂದ ರೈಲುಗಳ ಸಂಖ್ಯೆ ಹೆಚ್ಚಾಗಲಿದೆ.

2.04 ಲಕ್ಷ ಜನರ ನೋಂದಣಿ
ಇದುವರೆಗೂ ಕರ್ನಾಟಕದಿಂದ ತವರು ರಾಜ್ಯಕ್ಕೆ ವಾಪಸ್ ಆಗಲು 2.40 ಲಕ್ಷ ಜನರು ನೋಂದಣಿ ಮಾಡಿಸಿದ್ದಾರೆ. ಇವರಲ್ಲಿ 52,000 ಜನರು ಬಿಹಾರ, 18,320 ಜನರು ರಾಜಸ್ಥಾನ, 18,800 ಜನರು ಪಶ್ಚಿಮ ಬಂಗಾಳ, 34,508 ಜನರು ಉತ್ತರ ಪ್ರದೇಶಕ್ಕೆ ವಾಪಸ್ ಆಗಲು ನೋಂದಣಿ ಮಾಡಿದ್ದಾರೆ.

ರಾಜ್ಯಗಳು ಒಪ್ಪಿಗೆ ನೀಡಬೇಕು
ತವರು ರಾಜ್ಯದವರು ಒಪ್ಪಿಗೆ ಸೂಚಿಸಿದ ಕಾರ್ಮಿಕರನ್ನು ಮಾತ್ರ ಕಳಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ. ಬಿಹಾರ ಮತ್ತು ಮಧ್ಯಪ್ರದೇಶ ಸರ್ಕಾರ ಎಲ್ಲಾ ಕಾರ್ಮಿಕರನ್ನು ಕಳಿಸಿ ಎಂದು ಹೇಳಿವೆ. ಆದರೆ, ಪಶ್ಚಿಮ ಬಂಗಾಳ ಮತ್ತು ಒಡಿಶಾ ಕಾರ್ಮಿಕರು ಕೋವಿಡ್ - 19 ಹಸಿರು ವಲಯದಲ್ಲಿರುವ ಕಾರ್ಮಿಕರನ್ನು ಮಾತ್ರ ಕಳುಹಿಸಿ ಕೊಡಿ ಎಂದು ಕರ್ನಾಟಕಕ್ಕೆ ಮನವಿ ಮಾಡಿವೆ.












Click it and Unblock the Notifications