ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1998ರ ಕೆಪಿಎಸ್‌ಸಿ ಆಯ್ಕೆ ಪಟ್ಟಿಯಲ್ಲಿ ಗೊಂದಲ

|
Google Oneindia Kannada News

ಬೆಂಗಳೂರು, ನ.13 : ಕರ್ನಾಟಕ ಹೈಕೋರ್ಟ್ ಆದೇಶದಂತೆ ಕರ್ನಾಟಕ ಲೋಕ­ಸೇವಾ ಆಯೋಗವು 1998ನೇ ಸಾಲಿನ ಗೆಜೆಟೆಡ್‌ ಪ್ರೊಬೇ­ಷನರಿ ಅಧಿಕಾರಿಗಳ ಪರಿಷ್ಕೃತ ಆಯ್ಕೆ­ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಪಟ್ಟಿಯ ಅನ್ವಯ ವಿವಿಧ ಶ್ರೇಣಿಯ 25 ಅಧಿಕಾರಿಗಳು ಕೆಲಸ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

ಪರಿಷ್ಕೃತ ಪಟ್ಟಿಯ ಅನ್ವಯ 140 ಅಧಿಕಾರಿಗಳು ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ಸ್ಥಾಪಪಲ್ಲಟ ಹೊಂದಲಿದ್ದಾರೆ. 1998ನೇ ಸಾಲಿನ ಆಯ್ಕೆ ಪಟ್ಟಿ­ಯಲ್ಲಿ ಹೆಸರಿಲ್ಲದ 28 ಅಭ್ಯರ್ಥಿ­ಗಳು ಪರಿಷ್ಕೃತ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಎಸಿ ಹುದ್ದೆಗೆ ಆಯ್ಕೆ­ಯಾಗಿದ್ದ ಎಂಟು ಮಂದಿ ಆ ಹುದ್ದೆ ಕಳೆದುಕೊಳ್ಳಲಿದ್ದಾರೆ. [ಆಯ್ಕೆ ಪಟ್ಟಿ ಇಲ್ಲಿದೆ ನೋಡಿ]

KPSC

140 ಮಂದಿ ಅಭ್ಯರ್ಥಿಗಳ ಹೆಸರು, ಹಾಲಿ ಹುದ್ದೆ ಹಾಗೂ ಬದಲಾದ ಹುದ್ದೆಗಳ ವಿವರವನ್ನು ಅಂಕ ಸಮೇತ ಪ್ರಕಟಿಸಲಾಗಿದೆ. ಹೊಸದಾಗಿ ಸಂದರ್ಶನ ನಡೆಸಿದ್ದ 94 ಅಭ್ಯರ್ಥಿಗಳನ್ನೂ ಒಳಗೊಂಡಂತೆ ಪರಿಷ್ಕೃತ ಆಯ್ಕೆ ಪಟ್ಟಿ ಬಿಡುಗಡೆಯಾಗಿದೆ. [ಬದಲಾದ ಹುದ್ದೆಗಳ ಪಟ್ಟಿ ನೋಡಿ]

ಪರಿಷ್ಕೃತ ಪಟ್ಟಿಗೆ ಆಕ್ಷೇಪಣೆ ಆಹ್ವಾನಿಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ, ಕೆಪಿಎಸ್‌ಸಿ ಆಕ್ಷೇಪಣೆ ಅಥವಾ ಇನ್ನಿತರ ಕ್ರಮ ಕೈಗೊಂಡಿರುವ ಕುರಿತು ವೆಬ್‌ಸೈಟ್‌ನಲ್ಲಿ ಯಾವುದೇ ಸ್ಪಷ್ಟ ವಿವರಣೆ ನೀಡಿಲ್ಲ. ಇದರಿಂದ ಮತ್ತಷ್ಟು ಗೊಂದಲ ಉಂಟಾಗಿದ್ದು, ಹೈಕೋರ್ಟ್‌ನಲ್ಲಿ ನ.18ರಂದು ಮುಂದಿನ ವಿಚಾರಣೆ ನಡೆಯಲಿದೆ.

ಗೊಂದಲ ಉಂಟುಮಾಡಿದ ಡಿಪಿಎಆರ್ : 1998ನೇ ಸಾಲಿನ ಕೆಎಎಸ್ ನೇಮಕಕ್ಕೆ ಸಂಬಂಧಿಸಿದಂತೆ ಹೊಸ ಆಯ್ಕೆಪಟ್ಟಿಯನ್ನು ಕೆಪಿಎಸ್‌ಸಿ ಬಿಡುಗಡೆ ಮಾಡಿದ ನಂತರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಡಿಪಿಎಆರ್) ಸಹ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಇದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.

ಹಗರಣದ ವಿವರ : 383 ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್‌ಸಿ 1998ರ ಫೆಬ್ರವರಿ ಅರ್ಜಿ ಆಹ್ವಾನಿಸಿತ್ತು. ಆಗಸ್ಟ್‌ನಲ್ಲಿ ಪ್ರಾಥಮಿಕ ಪರೀಕ್ಷೆ ನಡೆದು, 1999ರ ಏಪ್ರಿಲ್‌ನಲ್ಲಿ ಮುಖ್ಯ ಪರೀಕ್ಷೆ ನಡೆದು 2000 ಜನವರಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ವ್ಯಕ್ತಿತ್ವ ಸಂದರ್ಶನ ನಡೆಸಿ. 2001ರ ಸೆಪ್ಟೆಂಬರ್‌ನಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಯಿತು.

ಮೌಲ್ಯಮಾಪನದಲ್ಲಿ ಅಕ್ರಮ ನಡೆದಿದೆ ಕೆಲವು ಅಭ್ಯರ್ಥಿಗಳು ಕೆಎಟಿ ಮೆಟ್ಟಿಲೇರಿದ್ದರು. 2002ರ ಫೆಬ್ರವರಿಯಲ್ಲಿ ಕೆಎಟಿ ಕೆಲವು ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಆದೇಶ ನೀಡಿತ್ತು. ಆದರೆ, ಅಕ್ಟೋಬರ್‌ನಲ್ಲಿ ಹೈಕೋರ್ಟ್ ಮರು ಮೌಲ್ಯಮಾಪನ ಬೇಡ ಎಂದು ಆಯ್ದ ಉತ್ತರ ಪತ್ರಿಕೆಗಳ ಮಾಡರೇಷನ್‌ಗೆ ಆದೇಶಿಸಿತ್ತು.

ಸುಪ್ರೀಂಕೋರ್ಟ್ 2005ರಲ್ಲಿ ಈ ಆದೇಶವನ್ನು ಎತ್ತಿ ಹಿಡಿದಿತ್ತು. ಆನಂತರವೂ ಆಯ್ಕೆ ಪಟ್ಟಿ ಕುರಿತು ಆಕ್ಷೇಪ ಮುಂದುವರಿದ ಕಾರಣ ಕೆಲ ಅಭ್ಯರ್ಥಿಗಳು ಮತ್ತೆ ಕೋರ್ಟ್ ಮೊರೆ ಹೋಗಿದ್ದರು. 1999 ಹಾಗೂ 2004ನೇ ಸಾಲಿನಲ್ಲೂ ಇದೇ ರೀತಿಯ ಅಕ್ರಮಗಳು ನಡೆದಿವೆ ಎಂದು ಅಭ್ಯರ್ಥಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.

ನ್ಯಾಯಾಲಯ ಮೂರೂ ಬ್ಯಾಚ್‌ಗಳಲ್ಲಿನ ಅಕ್ರಮ ಕುರಿತು ವಾಸ್ತವಾಂಶಗಳ ಪರಿಶೀಲನೆಗೆ ವಕೀಲರನ್ನು ಒಳಗೊಂಡ ಸತ್ಯ ಶೋಧನಾ ಸಮಿತಿ ರಚಿಸಿತ್ತು. ಈ ಸಮಿತಿ ನೀಡಿದ ವರದಿ ಅನ್ವಯ ಪರಿಷ್ಕೃತ ಪಟ್ಟಿಯನ್ನು ಕೆಪಿಎಸ್‌ಸಿ ಪ್ರಕಟಿಸಿದ್ದು, ಅದು ಗೊಂದಲಕ್ಕೆ ಕಾರಣವಾಗಿದೆ.

English summary
There may be a major reshuffle in the positions of as many as 383 public servants, who joined gazetted probationers Group 'A' and 'B' posts in 2005-06 on their selection in the 1998 batch of recruitment through the Karnataka Public Service Commission (KPSC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X