ನನ್ನ ಬೆಂಬಲಕ್ಕೆ 140 ಶಾಸಕರೂ ಇದ್ದಾರೆ, ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತೆ: ಡಿ.ಕೆ.ಶಿವಕುಮಾರ್
ಬೆಂಗಳೂರು: "ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ 140 ಶಾಸಕರೂ ನನ್ನ ಬೆಂಬಲಕ್ಕೆ ಇದ್ದಾರೆ. ನಮ್ಮ ನಡುವೆ ಏನು ಚರ್ಚೆಯಾಗಿದೆ ಎಂಬುದು ನಮಗೆ ಗೊತ್ತು. ಅದನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವ ಪ್ರಶ್ನೆಯೇ ಇಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ" ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಬೆಂಬಲಿಗರು ಹೈಕಮಾಂಡ್ ತೀರ್ಮಾನದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಯಾರು ಹೇಳಿದರು? 140 ಶಾಸಕರು ಕೂಡ ನನ್ನ ಬೆಂಬಲಿಗರೇ. ಸಿಎಂ ಸಿದ್ದರಾಮಯ್ಯ ಕೂಡ ನನಗೆ ಬೆಂಬಲವಾಗಿದ್ದಾರೆ. ನಾನು ಹಾಗೂ ಸಿಎಂ ಏನು ಮಾತನಾಡಿದ್ದೇವೆ, ರಾಹುಲ್ ಗಾಂಧಿ ಸಮ್ಮುಖದಲ್ಲಿ ಏನು ಚರ್ಚೆಯಾಗಿದೆ, ಹೈಕಮಾಂಡ್ ಮುಂದೆ ಏನು ತೀರ್ಮಾನ ಮಾಡಲಾಗಿದೆ ಎಂಬುದು ನಮಗೆ ಮಾತ್ರ ಗೊತ್ತು. ಈ ಎಲ್ಲವನ್ನೂ ಬಹಿರಂಗವಾಗಿ ಚರ್ಚೆ ಮಾಡಲು ಸಾಧ್ಯವಿಲ್ಲ" ಎಂದರು.

ದೆಹಲಿ ಭೇಟಿ ಏಕೆ?
ದೆಹಲಿಗೆ ತೆರಳಿರುವುದು ರಾಜಕೀಯ ಕಾರಣಕ್ಕಾಗಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, "ದೆಹಲಿಗೆ ನಾವು ಪಕ್ಷ, ಸರ್ಕಾರ ಹಾಗೂ ರಾಜಕೀಯ ಸಂಬಂಧಿತ ಕೆಲಸಗಳಿಗಾಗಿ ಹೋಗುತ್ತೇವೆ. ಮಾಧ್ಯಮಗಳು ಒಂದು ದಿನ ರಾಹುಲ್ ಗಾಂಧಿಯೊಂದಿಗೆ ಕೂತು ಚರ್ಚೆ ಮಾಡಿದ ಫೋಟೋ ಪ್ರಕಟಿಸುತ್ತವೆ. ಮರುದಿನ ಭೇಟಿಯೇ ಆಗಿಲ್ಲ ಎಂದು ಬರೆಯುತ್ತವೆ. ಈ ಎಲ್ಲಕ್ಕೂ ಕಾಲವೇ ಉತ್ತರ ನೀಡಲಿದೆ. ಇದರ ಹೊರತಾಗಿ ನಾನು ಬೇರೆ ವಿಚಾರ ಚರ್ಚೆ ಮಾಡುವುದಿಲ್ಲ" ಎಂದು ಹೇಳಿದರು.
ಹೈಕಮಾಂಡ್ ಒಳ್ಳೆಯ ಸುದ್ದಿ ನೀಡಲಿದೆ ಎಂದು ತಮ್ಮ ಸಹೋದರ ಹೇಳಿರುವ ಕುರಿತು ಪ್ರಶ್ನಿಸಿದಾಗ, "ನನ್ನ ತಮ್ಮ ಮಾತ್ರವಲ್ಲ, ನಮ್ಮ ಕಾರ್ಯಕರ್ತರು, ಮಾಧ್ಯಮಗಳೂ ಅದನ್ನೇ ಹೇಳುತ್ತಿವೆ" ಎಂದು ಪ್ರತಿಕ್ರಿಯಿಸಿದರು. ಏಪ್ರಿಲ್‌ನಲ್ಲಿ ಒಳ್ಳೆಯ ಸುದ್ದಿ ಬರಲಿದೆ ಎಂಬ ಚರ್ಚೆ ಬಗ್ಗೆ ಕೇಳಿದಾಗ, "ನೋಡೋಣ, ಈಗಲೇ ಆ ಮಾತು ಯಾಕೆ?" ಎಂದರು. ಇನ್ನು ರಾಜಕೀಯ ಕಾರಣಕ್ಕಾಗಿ ದಾವೋಸ್ ಪ್ರವಾಸ ಕೈಬಿಟ್ಟಿರುವುದು ಸರಿಯಲ್ಲ ಎಂಬ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿ, "ಅವರ ಮಾತಿನಲ್ಲಿ ಅರ್ಥವಿದೆ. ಅದನ್ನು ತಪ್ಪು ಎಂದು ಹೇಳುವುದಿಲ್ಲ. ನಾಳೆ ಬೆಳಗ್ಗೆ ಈ ಪ್ರಶ್ನೆ ಕೇಳಿ" ಎಂದು ಉತ್ತರಿಸಿದರು.

ಒಂದೇ ಬಾರಿ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆ
ಸ್ಥಳೀಯ ಸಂಸ್ಥೆ ಚುನಾವಣೆ ಕುರಿತು ಮಾತನಾಡಿದ ಶಿವಕುಮಾರ್, "ನ್ಯಾಯಾಲಯದ ಆದೇಶದಂತೆ ಸರ್ಕಾರ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳಿಗೆ ಬದ್ಧವಾಗಿದೆ. ಯುವಕರಿಗೆ ಅವಕಾಶ ನೀಡಬೇಕು, ಹೊಸ ಪೀಳಿಗೆ ಆಡಳಿತಕ್ಕೆ ಬರಬೇಕು. ಈಗ ಐದು ಪಾಲಿಕೆಗಳಿಂದ 369 ವಾರ್ಡ್‌ಗಳನ್ನು ರಚಿಸಲಾಗಿದೆ. ಬೆಂಗಳೂರಿನ ಹೊರವಲಯವನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ" ಎಂದು ಹೇಳಿದರು.
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಮೀಸಲಾತಿ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ನಡೆಯುತ್ತಿದೆ ಎಂದರು. ಗ್ರಾಮ ಪಂಚಾಯ್ತಿ ಚುನಾವಣೆಗಳನ್ನು ಪಕ್ಷದ ಚಿಹ್ನೆಯ ಮೇಲೆ ನಡೆಸುವ ಕುರಿತು ಹಲವು ಸಲಹೆಗಳು ಬಂದಿದ್ದರೂ, ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ ಎಂದರು. "ಒಂದೇ ಬಾರಿಗೆ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವ ಬಗ್ಗೆ ಚಿಂತನೆ ಇದೆ" ಎಂದು ತಿಳಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತಯಂತ್ರದ ಬದಲು ಮತಪತ್ರ ಬಳಸುವ ವಿಚಾರಕ್ಕೆ ಸಂಬಂಧಿಸಿ, "ಇದು ರಾಜ್ಯ ಚುನಾವಣಾ ಆಯೋಗದ ವ್ಯಾಪ್ತಿಯ ವಿಷಯ. ಮತಪತ್ರ ಬಳಸುವುದರಲ್ಲಿ ತಪ್ಪೇನಿಲ್ಲ. ಯಾವ ವಿಧಾನದಲ್ಲಿ ಚುನಾವಣೆ ನಡೆಯುತ್ತದೆ ಎಂಬುದಕ್ಕಿಂತ ಮತದಾನ ಪ್ರಕ್ರಿಯೆ ನಡೆಯುವುದು ಮುಖ್ಯ. ಕರಡು ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, ಯಾವುದೇ ಮತದಾರರ ಹೆಸರು ತಪ್ಪಿಹೋಗದಂತೆ ನೋಡಿಕೊಳ್ಳಲಾಗುವುದು" ಎಂದು ಹೇಳಿದರು. ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಕೆಲಸ. ರಾಜ್ಯ ಚುನಾವಣಾ ಆಯೋಗ ಸರ್ಕಾರದ ನಿಯಂತ್ರಣದಲ್ಲಿಲ್ಲ. ಅವರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಇನ್ನು ಡಿಜಿಪಿ ರಾಮಚಂದ್ರ ವಿರುದ್ಧ ಅವರ ರಾಸಲೀಲೆ ವಿಡಿಯೋಗಳು ವೈರಲ್ ಆಗಿರುವ ಆರೋಪಗಳ ಕುರಿತು "ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಈ ವಿಚಾರವನ್ನು ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಕೇಳಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.












Click it and Unblock the Notifications