14 ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ : ಯಾರು, ಏನು ಹೇಳಿದರು?
Recommended Video
ಬೆಂಗಳೂರು, ಜುಲೈ 28 : ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣರಾದ 11 ಕಾಂಗ್ರೆಸ್ ಮತ್ತು 3 ಜೆಡಿಎಸ್ ಶಾಸಕರನ್ನು ಭಾನುವಾರ ತಕ್ಷಣದಿಂದ ಜಾರಿಗೆ ಬರುವಂತೆ ಅನರ್ಹಗೊಳಿಸಲಾಗಿದೆ. ಕರ್ನಾಟಕ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ತೀರ್ಮಾನದ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ವಿಕಾಸಸೌಧದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಕೆ. ಆರ್. ರಮೇಶ್ ಕುಮಾರ್ 11 ಕಾಂಗ್ರೆಸ್, 3 ಜೆಡಿಎಸ್ ಶಾಸಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅನರ್ಹಗೊಳಿಸಿ ಆದೇಶ ಹೊರಡಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ಸದನದಲ್ಲಿ ವಿಶ್ವಾಸಮತಯಾಚನೆ ಮಾಡಲಿದ್ದಾರೆ.
17 ಶಾಸಕರ ಅನರ್ಹತೆ ಬಳಿಕ ಕರ್ನಾಟಕ ವಿಧಾನಸಭೆ ಬಲಾಬಲ ಕುಸಿದಿದೆ. ಸ್ಪೀಕರ್ ರಮೇಶ್ ಕುಮಾರ್ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಲು ಅತೃಪ್ತ ಶಾಸಕರು ತೀರ್ಮಾನಿಸಿದ್ದಾರೆ. ಹಲವು ನಾಯಕರು ಸ್ಪೀಕರ್ ತೀರ್ಮಾನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಮಾನ್ಯ ಸಭಾಧ್ಯಕ್ಷರು ಎಲ್ಲ 14 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಯಡಿ ಅನರ್ಹಗೊಳಿಸಿ ಹೊರಡಿಸಿರುವ ಆದೇಶ ಪ್ರಜಾಪ್ರಭುತ್ವಕ್ಕೆ ಸಂದ ನೈಜ ಗೆಲುವು" ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಪ್ರತಿಕ್ರಿಯೆ
"ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಪದವಿ, ಅಧಿಕಾರ ರಾಜಕಾರಣದಲ್ಲಿ ಎಂದಿಗೂ ಶಾಶ್ವತವಲ್ಲ. ಮುಂದಿನ ಪೀಳಿಗೆಯ ರಾಜಕಾರಣಕ್ಕೆ ನಾವು ಮಾದರಿಯಾಗಿ ಏನನ್ನು ಬಿಟ್ಟುಹೋಗುತ್ತೇವೆ ಎಂಬುದು ಮುಖ್ಯ. ಸಭಾಧ್ಯಕ್ಷರ ಇಂದಿನ ನಿರ್ಣಯ ಅವಕಾಶವಾದಿ ರಾಜಕಾರಣಕ್ಕೆ ನೀಡಿರುವ ಕೊಡಲಿ ಏಟು. ಅವರ ಈ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ. ಮಾನ್ಯ ಸಭಾಧ್ಯಕ್ಷರು ಎಲ್ಲ 14 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಯಡಿ ಅನರ್ಹಗೊಳಿಸಿ ಹೊರಡಿಸಿರುವ ಆದೇಶ ಪ್ರಜಾಪ್ರಭುತ್ವಕ್ಕೆ ಸಂದ ನೈಜ ಗೆಲುವು. ಸ್ವಾರ್ಥ ಸಾಧನೆ, ಅಧಿಕಾರದಾಸೆಯಿಂದ ಜನಾದೇಶವನ್ನು ಧಿಕ್ಕರಿಸಿ ತಮ್ಮನ್ನು ತಾವು ಮಾರಿಕೊಳ್ಳುವ ಹೀನ ಸಂಸ್ಕೃತಿಗೆ ಈ ತೀರ್ಪು ಇತಿಶ್ರೀ ಹಾಡಲಿದೆ ಎಂಬುದು ನನ್ನ ನಂಬಿಕೆ" ಎಂದು ಕಾಂಗ್ರೆಸ್ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಡಾ.ಜಿ.ಪರಮೇಶ್ವರ ಹೇಳಿಕೆ
"ಪ್ರಜಾಪ್ರಭುತ್ವವನ್ನು ಹಾಗೂ ತಮ್ಮನ್ನಾರಿಸಿದ ಜನರನ್ನು ನಗೆಪಾಟಲಿಗೆ ಈಡುಮಾಡಿದ ಹದಿನೇಳು ಶಾಸಕರನ್ನು ಅಮಾನತುಗೊಳಿಸಿರುವ ಸ್ಪೀಕರ್ ಅವರ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇವರ ನಿಯತ್ತಿರದ ರಾಜಕಾರಣಕ್ಕೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

ದೋಷ ಪೂರಿತ ತೀರ್ಪು
ಬಿಜೆಪಿ ನಾಯಕ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದು, "ಸುಪ್ರೀಂಕೋರ್ಟ್ ಆದೇಶದಂತೆ ಶಾಸಕರು ಮತ್ತೆ ಬಂದು ಕ್ರಮಬದ್ಧವಾಗಿ ರಾಜೀನಾಮೆಯನ್ನು ನೀಡಿದ್ದರು. ಸ್ಪೀಕರ್ ತೀರ್ಪನ್ನು ನಾವು ಖಂಡಿಸುತ್ತೇವೆ. ಇದು ದೋಷ ಪೂರಿತ ತೀರ್ಪು, ಇದನ್ನು ಪ್ರಶ್ನಿಸಿ ಅನರ್ಹಗೊಂಡ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದಾರೆ" ಎಂದು ಹೇಳಿದರು.

ಇದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ
ಬಿಜೆಪಿ ನಾಯಕ ಎಸ್.ಆರ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, "ರಮೇಶ್ ಕುಮಾರ್ ಇತಿಹಾಸ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದರು. ಹಾಗಾಗಿ ಈ ರೀತಿಯ ತಪ್ಪು ನಿರ್ಧಾರ ಕೈಗೊಂಡಿದ್ದಾರೆ. ರಾಜಕೀಯ ಪ್ರೇರಿತವಾಗಿ ನಾಯಕರ ಒತ್ತಾಯಕ್ಕೆ ಮಣಿದು ಈ ರೀತಿಯಾಗಿ ಮಾಡಿದ್ದಾರೆ. ಶಾಸಕರ ರಾಜೀನಾಮೆ ಕ್ರಮಬದ್ದವಾಗಿಲ್ಲ ಎಂದು ಹೇಳಿದಾಗ ವಾಪಾಸ್ ಬಂದು ಕ್ರಮಬದ್ದವಾಗಿ ರಾಜಿನಾಮೆ ನೀಡಿದ್ದಾರೆ. ಈ ರೀತಿ ತರಾತುರಿಯಲ್ಲಿ ಅನರ್ಹ ಮಾಡಿದ್ದಾರೆ. ಈ ತಿರ್ಪನ್ನು ಜನರು, ಶಾಸಕರು ಒಪ್ಪಲು ಸಾಧ್ಯವಿಲ್ಲ" ಎಂದು ಹೇಳಿದರು.

ಸ್ಪೀಕರ್ ತೀರ್ಪು ಸ್ವಾಗತಿಸುತ್ತೇನೆ
ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಸ್ಪೀಕರ್ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಪ್ರಜಾಪ್ರಭುತ್ವವನ್ನು ಹಾಗೂ ತಮ್ಮನ್ನಾರಿಸಿದ ಜನರನ್ನು ನಗೆಪಾಟಲಿಗೆ ಈಡುಮಾಡಿದ ಶಾಸಕರನ್ನು ಅಮಾನತುಗೊಳಿಸಿರುವ ಸ್ಪೀಕರ್ ಅವರ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇವರ ನಿಯತ್ತಿರದ ರಾಜಕಾರಣಕ್ಕೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಹೇಳಿದರು.












Click it and Unblock the Notifications