Lok Sabha Election 2024: ಮನೆಯಿಂದಲೇ ಮತದಾನ ಮಾಡಲು ಅವಕಾಶ, ಕರ್ನಾಟಕದ ಅಂಕಿ-ಅಂಶ ತಿಳಿಯಿರಿ
ಬೆಂಗಳೂರು, ಏಪ್ರಿಲ್ 08: 2024ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ದೇಶದಲ್ಲಿ ಏಪ್ರಿಲ್ 19 ರಿಂದ ಚುನಾವಣೆ ಆರಂಭವಾಗಲಿದ್ದು, ಒಟ್ಟು ಏಳು ಹಂತದಲ್ಲಿ ಜೂನ್ 1ರವೆಗೆ ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳು ಈಗಾಗಲೇ ಭರ್ಜರಿ ಪ್ರಚಾರ ಆರಂಭಿಸಿದ್ದು, ಗೆಲುವಿಗಾಗಿ ಜಿದ್ದಾಜಿದ್ದಿಯ ಹಣಾಹಣಿ ನಡೆಸುತ್ತಿದ್ದಾರೆ.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಟ್ಟು 97 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹತೆಯನ್ನು ಹೊಂದಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಚುನಾವಣಾ ಆಯೋಗ ವಿಶೇಷ ಅವಕಾಶವೊಂದನ್ನು ನೀಡಿದೆ.

ಪ್ರತಿಯೊಬ್ಬರು ಮತದಾನ ಮಾಡಬೇಕು ಎನ್ನುವ ದೃಷ್ಟಿಯಿಂದ ವಯೋವೃದ್ಧರು ಹಾಗೂ ವಿಶೇಷ ಚೇತನರು ಮತದಾನದ ಕೇಂದ್ರಗಳಿಗೆ ತೆರಳದೇ ಮನೆಯಲ್ಲೇ ಕುಳಿತು ಮತದಾನ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಒಟ್ಟು 12 ಲಕ್ಷ ಮಂದಿ ಮನೆಯಿಂದಲೇ ಮತದಾನ ಮಾಡುವ ಅವಕಾಶ ಹೊಂದಿದ್ದಾರೆ ಎಂದು ಆಯೋಗ ತಿಳಿಸಿದೆ.
85 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 5.7 ಲಕ್ಷ ಹಿರಿಯ ನಾಗರಿಕರು ಹಾಗೂ 6.13 ಲಕ್ಷ ವಿಕಲಚೇತನರು ಲೋಕಸಭೆ ಚುನಾವಣೆಯಲ್ಲಿ ಮನೆಯಿಂದಲೇ ಮತ ಚಲಾಯಿಸಲಿದ್ದಾರೆ. ಮನೆಯಿಂದಲೇ ಮತದಾನ ಮಾಡಲು ಬೇಕಾದ ಅರ್ಜಿ ನಮೂನೆ 12ಡಿ (12D) ವಿತರಿಸುವ ಪ್ರಕ್ರಿಯೆಯನ್ನು ಚುನಾವಾಣಾ ಆಯೋಗದ ಅಧಿಕಾರಿಗಳು ಈಗಾಗಲೇ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
2023ರ ಕರ್ನಾಟಕದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಹ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಈ ವೇಳೆ ಸುಮಾರು ಒಂದು ಲಕ್ಷ ಜನರು ಮನೆಯಿಂದಲೇ ಮತ ಚಲಾಯಿಸಿದ್ದರು. ಸುಮಾರು 80,251 ಹಿರಿಯ ನಾಗರಿಕರ ಪೈಕಿ 76,120 ಮಂದಿ ಹಾಗೂ 19,280 ವಿಕಲಚೇತನರ ಪೈಕಿ 18,811 ಹೆಚ್ಚು ಮಂದಿ ಅಧಿಕಾರಿಗಳ ಸಹಾಯದಿಂದ ಮತನೆಯಿಂದಲೇ ಮತದಾನ ಮಾಡಿದ್ದರು.












Click it and Unblock the Notifications