ಬಿ.ಎಸ್. ಯಡಿಯೂರಪ್ಪ ವಿರುದ್ಧ ಭೂ ಅಕ್ರಮದ ಆರೋಪ: ಎಸಿಬಿಗೆ ದೂರು ಸಲ್ಲಿಕೆ
ಬೆಂಗಳೂರು, ಮಾ. 29: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಮತ್ತೊಂದು ಭೂ ಹಗರಣ ಅರೋಪ ಕೇಳಿ ಬಂದಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಧಿಕಾರ ಅವಧಿಯಲ್ಲಿ ಚಾಣಕ್ಯ ವಿವಿ ಸೆಂಟರ್ ಫರ್ ಎಜುಕೇಷನ್ ಅಂಡ್ ಸೋಸಿಯಲ್ ಸ್ಟಡೀಸ್ ಸಂಸ್ಥೆಗೆ ಕಾನೂನು ಬಾಹಿರವಾಗಿ 116 ಎಕರೆ ಭೂಮಿ ಮಂಜೂರು ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಗಂಭೀರ ಆರೋಪ ಕೇಳಿ ಬಂದಿದೆ.
'ನಾಗರಭಾವಿಯಲ್ಲಿರುವ ಚಾಣಕ್ಯ ವಿವಿ ಸೆಂಟರ್ ಫರ್ ಎಜುಕೇಷನ್ ಅಂಡ್ ಸೋಸಿಯಲ್ ಸ್ಟಡೀಸ್ ಸಂಸ್ಥೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದಿಂದ 116 ಎಕರೆ ಭೂಮಿಯನ್ನು ಮಂಜೂರು ಮಾಡಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಖಾಸಗಿ ಸಂಸ್ಥೆಗೆ ಲಾಭ ಮಾಡಿಕೊಡಲು ಸರ್ಕಾರದ ಮಾರ್ಗಸೂಚಿ ದರಕ್ಕಿಂತಲೂ ಕಡಿಮೆ ದರ ನಿಗದಿ ಮಾಡಿ, ಸರ್ಕಾರದ ಬೊಕ್ಕಸಕ್ಕೆ 136. 76 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ. ಈ ಮೂಲಕ ಖಾಸಗಿ ಸಂಸ್ಥೆಗೆ ಲಾಭ ಮಾಡಿ ಅಕ್ರಮ ಎಸಗಿದ್ದಾರೆ', ಎಂದು ಆರೋಪಿಸಿ ಕೋಲಾರ ಮೂಲದ ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಕೋರಿದ್ದಾರೆ.

ಈ ಹಿಂದೆ ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಕಿಕ್ ಬ್ಯಾಕ್ ಪಡೆದ ಆರೋಪ ಕೇಳಿ ಬಂದಾಗ ಸಿಎಂ ಹುದ್ದೆಯಿಂದ ಕೆಳಗೆ ಇಳಿದಿದ್ದರು. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೇ ಲೋಕಾಯುಕ್ತ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಯಡಿಯೂರಪ್ಪ ಸಿಎಂ ಆಗಿ ಕಾರ್ಯ ನಿರ್ವಹಿಸುವಾಗಲೇ ಬಂಧನಕ್ಕೆ ಒಳಗಾಗಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೆ ಯಡಿಯೂರಪ್ಪ ಸಿಎಂ ಆಗಿ ರಾಜ್ಯವನ್ನಾಳಿದ್ದರು. ಇದೀಗ ಮತ್ತೊಂದು ಭೂ ಹಗರಣ ಸುತ್ತಿಕೊಂಡಿದೆ.

ಏನಿದು ಚಾಣಾಕ್ಯ ವಿವಿ ಲ್ಯಾಂಡ್ ವಿವಾದ ಅಕ್ರಮ:
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಚನ್ನರಾಯಪಟ್ಟಣಕ್ಕೆ ಹೊಂದಿಕೊಂಡಿರುವಂತೆ ಗ್ರಾಮಗಳಲ್ಲಿ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಸ್ವಾಧೀನ ಪಡಿಸಿಕೊಂಡಿತ್ತು.
ನಾಗರಭಾವಿಯಲ್ಲಿರುವ ಚಾಣಕ್ಯ ವಿವಿ ಸೆಂಟರ್ ಫಾರ್ ಎಜುಕೇಷನ್ ಅಂಡ್ ಸೋಸಿಯಲ್ ಸ್ಟಡೀಸ್ ( ಚೆಸ್ ) ಎಂಬ ಸಂಸ್ಥೆ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಲು 130 ಎಕರೆ ಮಂಜೂರು ಮಾಡುವಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉನ್ನತಾಧಿಕಾರ ಸಮಿತಿಗೆ ಅರ್ಜಿ ಸಲ್ಲಿಸದೇ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲಿಸಿದೆ. 2021 ಮಾರ್ಚ್ 25 ರಂದು ಮನವಿ ಸಲ್ಲಿಸಲಾಗಿದೆ. ಕಾನೂನು ಪ್ರಕಾರ 25 ಎಕರೆ ಮೇಲ್ಪಟ್ಟು ಜಮೀನು ಕೋರಿ ಪ್ರಸ್ತಾವನೆಯನ್ನು ಉನ್ನತಾಧಿಕಾರ ಸಮಿತಿಗೆ ಅರ್ಜಿ ಸಲ್ಲಿಸಬೇಕಿತ್ತು. ಆದರೆ, ನೇರವಾಗಿ ಸಿಎಂ ಯಡಿಯೂರಪ್ಪ ಅವರಿಗೆ ಸಲ್ಲಿಸಲಾಗಿದೆ.
ಈ ಪ್ರಸ್ತಾಪವನ್ನು ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ಮಾಡದೇ, ಪ್ರಭಾವ ಮತ್ತು ಅಮಿಷೆಗಳಿಗೆ ಒಳಗಾಗಿ ಜಮೀನು ಮಂಜೂರು ಮಾಡುವ ಪ್ರಸ್ತಾಪವನ್ನು ಸಚಿವ ಸಂಪುಟದ ಮುಂದಿಡಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಯಡಿಯೂರಪ್ಪ ಆದೇಶ ಮಾಡಿದ್ದಾರೆ. ಮುಖ್ಯ ಕಾರ್ಯದರ್ಶಿ ಸೂಚನೆ ಮೇರೆಗೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜ್ ಕುಮಾರ್ ಖತ್ರಿ ಅವರು ಪರಿಶೀಲನೆ ನಡೆಸಿದಾಗ, ಚಾಣಕ್ಯ ಸಂಸ್ಥೆ ಈ ಹಿಂದೆ ಸೊಸೈಟಿಯಾಗಿ ನೋಂದಣಿಯಾಗಿದ್ದು, ಆ ಬಳಿಕ ಟ್ರಸ್ಟ ಆಗಿ ಪರಿವರ್ತನೆ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಇದರ ನಡುವೆಯೂ ಚಾಣಕ್ಯ ಸಂಸ್ಥೆಗೆ 116. 16 ಎಕರೆ ಭೂಮಿಯನ್ನು ಮಂಜೂರು ಮಾಡಲು ಪ್ರತಿ ಎಕರೆಗೆ 1.61 ಕೋಟಿ ರೂ. ಮಾರ್ಗಸೂಚಿ ದರ ನಿಗದಿ ಮಾಡಿದ್ದಾರೆ.

ಕೆಐಎಡಿಬಿಗೆ ಸೇರಿದ ಜಮೀನು ಮಂಜೂರು ಸಂಬಂಧ ಏಪ್ರಿಲ್ 23, 2021 ರಂದು ಸಚಿವ ಸಂಪುಟದ ಮುಂದೆ ಪ್ರಸ್ತಾಪ ಮಾಡಿದ್ದು, 116 ಎಕರೆ ಜಮೀನನ್ನು ಕೇವಲ 50 ಕೋಟಿ ರೂ. ನಿಗದಿ ಪಡಿಸಿ ಮಂಜೂರು ಮಾಡಲಾಗಿದೆ. ಎಕರೆ ಮಾರ್ಗಸೂಚಿ ದರ 1.61 ಕೋಟಿ ರೂ. ಇದ್ದು, ಅದರಂತೆ 116 ಎಕರೆ ಜಮೀನಿಗೆ ಒಟ್ಟು 186 ಕೋಟಿ ರೂ.ನಿಗದಿ ಮಾಡಬೇಕಿತ್ತು. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಕೇವಲ 50 ಕೋಟಿ ರೂ. ನಿಗದಿ ಮಾಡಿ ಜಮೀನು ಮಂಜೂರು ಮಾಡಿ ನಿರ್ಣಯ ಕೈಗೊಂಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 135 ಕೋಟಿ ರೂ. ನಷ್ಟವುಂಟು ಮಾಡಲಾಗಿದೆ.
ಚನ್ನರಾಯಪಟ್ಟಣ ಹೋಬಳಿ ಸುತ್ತ ಮುತ್ತ ಹಳ್ಳಿಗಳಲ್ಲಿ ಎಕರೆ ಜಮೀನಿನ ಮಾರುಕಟ್ಟೆ ಮೌಲ್ಯ 4 ಕೋಟಿ ರೂ. ಇದೆ. ವಾಸ್ತವದಲ್ಲಿ ಯಡಿಯೂರಪ್ಪ ಸರ್ಕಾರ ಮಂಜೂರು ಮಾಡಿರುವ 116 ಎಕರೆ ಜಮೀನಿನ ಮಾರುಕಟ್ಟೆ ಬೆಲೆ 464 ಕೋಟಿ ರೂ. ಆಗುತ್ತದೆ. ಒಂದು ಖಾಸಗಿ ವಿವಿ ಸ್ಥಾಪಿಸಲು 25 ಎಕರೆ ಹೆಚ್ಚಾಗುತ್ತದೆ, ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಸೃಷ್ಟಿಸುವ ನೆಪದಲ್ಲಿ ರೈತರ ಜಮೀನು ವಶಪಡಿಸಿಕೊಂಡು, ಪ್ರತಿಷ್ಠಿತ ವಲ್ಲದ ಚಾಣಕ್ಯ ಟ್ರಸ್ಟ್ ಗೆ 116 ಎಕರೆ ಮಂಜೂರು ಮಾಡಿರುವ ಹಿಂದೆ ಅಕ್ರಮ ನಡೆದಿದೆ. ಇದರಿಂದ ಬಿ.ಎಸ್. ಯಡಿಯೂರಪ್ಪ ನೂರಾರು ಕೋಟಿ ಲಾಭ ಮಾಡಿಕೊಂಡಿದೆ ಎಂದು ದೂರುದಾರರು ಅರೋಪಿಸಿದ್ದಾರೆ.
ಚಾಣಕ್ಯ ಸಂಸ್ಥೆಗೆ ಮಂಜೂರು ಮಾಡಿರುವ ಜಮೀನನ್ನು 99 ವರ್ಷಗಳ ಅವಧಿಗೆ ಎಕರೆ ಜಮೀನಿಗೆ ಲೀಸ್ ಮೊತ್ತ ಒಂದು ಸಾವಿರ ನಿಗದಿ ಮಾಡಲಾಗಿದೆ. ಒಂದು ಶಿಕ್ಷಣ ಸಂಸ್ಥೆಯನ್ನೂ ಹೊಂದಿರದ ಚಾಣಕ್ಯ ಟ್ರಸ್ಟ್ ಗೆ 116 ಎಕರೆ ಭೂಮಿಯನ್ನು ಕೇವಲ 50 ಕೋಟಿ ರೂ.ಗೆ ಮಂಜೂರು ಮಾಡುವ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಕುಟುಂಬ ಭ್ರಷ್ಟಾಚಾರ ನಡೆಸಿದೆ. ಕೇವಲ ಒಂದು ಕಚೇರಿ ಹೊಂದಿರುವ ಚಾಣಾಕ್ಯ ಸಂಸ್ಥೆಯ 50 ಕೋಟಿ ಮೂಲ ಯಾವುದು? ಎಂಬುದರ ಬಗ್ಗೆ ತನಿಖೆ ನಡೆಸುವಂತೆ ದೂರುದಾರ ಕೆ.ಸಿ. ರಾಜಣ್ಣ ಮನವಿ ಮಾಡಿದ್ದಾರೆ.
ದೂರಿಗೆ ಸಂಬಂಧಿಸಿದಂತೆ ಒನ್ ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್, ಯಡಿಯೂರಪ್ಪ ಅವರ ವಿರುದ್ಧ ದೂರು ಬಂದಿದೆ. ಅದರ ಪ್ರಾಥಮಿಕ ವಿಚಾರಣೆ ನಡೆಸುತ್ತೇವೆ. ಸತ್ಯ ಕಂಡು ಬಂದಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು ದೂರಿಗೆ ಸಂಬಂಧಿಸಿದಂತೆ 'ಒನ್‌ಇಂಡಿಯಾ' ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ದೂರುದಾರ ಕೆ.ಸಿ. ರಾಜಣ್ಣ, ಯಡಿಯೂರಪ್ಪ ಕುಟುಂಬ ಅಕ್ರಮ ಎಸಗಿದೆ. ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಂಡಿರುವ ಸಂಶಯ ವ್ಯಕ್ತವಾಗಿದೆ. ಈ ಕುರಿತು ತನಿಖೆ ನಡೆಸುವಂತೆ ದೂರು ಕೊಟ್ಟಿದ್ದೇನೆ. ಎಸಿಬಿ ತನಿಖೆ ಮಾಡಲಿಲ್ಲ ಎಂದರೆ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.












Click it and Unblock the Notifications