ಅಪಘಾತ : ಧಾರವಾಡದಲ್ಲಿ 5, ವಿಜಯಪುರದಲ್ಲಿ 6 ಸಾವು
ಧಾರವಾಡ, ಸೆಪ್ಟೆಂಬರ್ 23 : ಧಾರವಾಡ ಮತ್ತು ವಿಜಯಪುರದಲ್ಲಿ ಬುಧವಾರ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ಒಟ್ಟು 11 ಜನರು ಮೃತಪಟ್ಟಿದ್ದಾರೆ. ಧಾರವಾಡದಲ್ಲಿ ಕಾರು ಅಪಘಾತವಾಗಿದ್ದರೆ, ವಿಜಯಪುಪುರದಲ್ಲಿ ಎತ್ತಿನಗಾಡಿ ನಾಲೆಗೆ ಉರುಳಿ ದುರಂತ ಸಂಭವಿಸಿದೆ.
ಧಾರವಾಡ ಸುದ್ದಿ : ಕೆಎಸ್ಆರ್‌ಟಿಸಿ ಬಸ್ಸು ಮತ್ತು ಇಂಡಿಕಾ ಕಾರು ಮುಖಾಮುಖಿ ಡಿಕ್ಕಿಯಾಗಿ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಸಮೀಪ ಬುಧವಾರ ಬೆಳಗ್ಗೆ ನಡೆದಿದೆ. ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದ್ದು ಮೃತದೇಹಗಳು ಛಿದ್ರಛಿದ್ರವಾಗಿವೆ. [ಪತ್ನಿ, ಮಕ್ಕಳನ್ನು ಕೊಂದು ಪಂಚಾಯತ್ ಸದಸ್ಯ ಆತ್ಮಹತ್ಯೆ]
ಮೃತರನ್ನು ಬಳ್ಳಾರಿ ಎಎಸ್‍ಪಿ ವಿಜಯ್ ಕುಮಾರ್ ಡಂಬಳ್ ಪುತ್ರ ಶಿವಾನಂದ್ ಡಂಬಳ್, ಧಾರವಾಡ ಪಾಲಿಕೆ ಸದಸ್ಯ ದೀಪಕ್ ಚಿಂಚೋರೆ ಪುತ್ರ ಅನೀಷ್ ಚಿಂಚೋರೆ, ಯೋಗಾಂತ್ ಪಾಟೀಲ್, ಶಿವದೀಪ್ ಪಾಟೀಲ್, ಶಿವಕುಮಾರ್ ಎಂದು ಗುರುತಿಸಲಾಗಿದೆ.

ವಿಜಯಪುರ : ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬಳಗಾನೂರು ಎಂಬಲ್ಲಿ ಎತ್ತಿನಗಾಡಿ ಕಾಲುವೆಗೆ ಉರುಳಿ ಬಿದ್ದು 6 ಜನರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆಗೆ ಎತ್ತಿನಗಾಡಿ ಉರುಳಿಬಿದ್ದು ಈ ದುರಂತ ಸಂಭವಿಸಿದೆ.
ಮೃತಪಟ್ಟವರನ್ನು ಆಕಾಶ್ (5 ), ಕಾಶಿನಾಥ್ (6), ನೀಲವ್ವ (30), ಮುತ್ತು ಚೆನ್ನವ್ವ (20), ನಿಂಗಪ್ಪ (19) ಎಂದು ಗುರುತಿಸಲಾಗಿದೆ. ಎರಡು ಶವಗಳು ಮಾತ್ರ ದೊರಕಿದ್ದು, ಉಳಿದ ನಾಲ್ಕು ಶವಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಸಿಂಧಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications