Ashok Kheny Profile: ಖಾಶೆಂಪೂರ್, ಬೆಲ್ದಾಳೆ ಜೊತೆಗಿನ ಫೈಟ್‌ನಲ್ಲಿ ‘ನೈಸ್’ ಆಗಿ ಗೆಲ್ತಾರಾ ಅಶೋಕ್ ಖೇಣಿ!
ಅಶೋಕ್ ಖೇಣಿ ಪ್ರಖ್ಯಾತ ಉದ್ಯಮಿ, ರಾಜಕಾರಣಿ, ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ. ಕರ್ನಾಟಕದಲ್ಲಿ ಇವರು ರಾಜಕೀಯ ಕಾರಣಕ್ಕಿಂತ ನೈಸ್ ರಸ್ತೆಯ ಮೂಲಕವೇ ಪ್ರಸಿದ್ಧಿ ಗಳಿಸಿದವರು. 2012ರಲ್ಲಿ ತಮ್ಮದೇ ಕರ್ನಾಟಕ ಮಕ್ಕಳ ಪಕ್ಷ ಸ್ಥಾಪಿಸುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. ಬಳಿಕ 2013ರಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ವಿಧಾನಸಭೆಯನ್ನು ಪ್ರವೇಶಿಸಿದ್ದು, ಸದ್ಯ ಕಾಂಗ್ರೆಸ್‌ನಲ್ಲಿದ್ದಾರೆ.
1950ರಲ್ಲಿ ಬೀದರ್ ಜಿಲ್ಲೆಯ ರಂಜೋಲ್ ಖೇಣಿ ಎಂಬ ಸಣ್ಣ ಹಳ್ಳಿಯಲ್ಲಿ ಅಶೋಕ್ ಖೇಣಿ ಅವರು ಶಂಕ್ರಪ್ಪ ಖೇಣಿ - ಮಾಲತಿ ಶಂಕರ್‌ರಾವ್ ಖೇಣಿ ದಂಪತಿಗೆಗೆ ಜನಿಸಿದರು. ರೀಟಾ ಎಂಬುವವರನ್ನು ವಿವಾಹವಾಗಿರುವ ಅಶೋಕ್ ಖೇಣಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸೂರತ್ಕಲ್‌ನ ಎನ್‌ಐಐಟಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಅಮೆರಿಕಕ್ಕೆ ತೆರಳಿದ ಖೇಣಿ ಅವರು, 1974ರಲ್ಲಿ ಮ್ಯಾನೆಜ್ಮೆಂಟ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಅದಾದ ಬಳಿಕ ಅಮೆರಿಕದಲ್ಲಿ ಅನೇಕ ಸಾರಿಗೆ ಹಾಗೂ ಟೆಲಿಕಾಂ ಯೋಜನೆಗಳನ್ನು ಅಶೋಕ್ ಖೇಣಿ ಕಾರ್ಯಗತಗೊಳಿಸಿದರು.

1987ರಲ್ಲಿ ಪ್ರತಿಷ್ಠಿತ ಅಮೆರಿಕದ ಅಧ್ಯಕ್ಷೀಯ ಅವಾರ್ಡ್ ಅನ್ನು ಅಶೋಕ್ ಖೇಣಿ ಪಡೆದಿದ್ದು, ಅಲ್ಪಸಂಖ್ಯಾತ ಸಮುದಾಯದ ವರ್ಷದ ಅತ್ಯುತ್ತಮ ಬ್ಯುಸಿನೆಸ್‌ಮೆನ್ ಎಂಬ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. 1990ರ ದಶಕದಲ್ಲಿ ಭಾರತಕ್ಕೆ ವಾಪಸ್ ಆದ ಅಶೋಕ್ ಖೇಣಿ ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ಬೆಂಗಳೂರು ಮೈಸೂರು ಇನ್ಪ್ರಾಸ್ಟ್ರಕ್ಚರ್ ಕಾರಿಡಾರ್ ನಿರ್ಮಾಣದ ಜವಾಬ್ದಾರಿ ಹೊತ್ತರು. ಆದರೆ, ಅದು ಸಂಪೂರ್ಣವಾಗಿ ಕಾರ್ಯಗತವಾಗದೇ ಎಲೆಕ್ಟ್ರಾನಿಕ್ ಸಿಟಿಯಿಂದ ತುಮಕೂರು ರಸ್ತೆವರೆಗೂ ಮಾತ್ರ ಅರ್ಧ ವೃತ್ತ ಆಕಾರದಲ್ಲಿ ನೈಸ್ ರಸ್ತೆ ನಿರ್ಮಾಣವಾಗಿದೆ.
ರಾಜಕೀಯ ಹಿನ್ನೆಲೆ!
ನೈಸ್ ರಸ್ತೆ ನಿರ್ಮಾಣದ ವೇಳೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು 2012ರಲ್ಲಿ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ. ಅದೇ ವರ್ಷ ಅಂದ್ರೇ 2012ರಲ್ಲಿ ರಾಜಕೀಯಕ್ಕೆ ಬರಲು ಮುಂದಾದ ಅಶೋಕ್ ಖೇಣಿ ಅವರನ್ನು ನೈಸ್ ವಿವಾದದ ಕಾರಣ ಯಾವುದೇ ಪಕ್ಷಗಳು ಸೇರಿಸಿಕೊಳ್ಳಲು ಮುಂದಾಗಲಿಲ್ಲ ಎಂದು ಹೇಳಲಾಗುತ್ತಿದೆ. ಆದ್ದರಿಂದ ತಮ್ಮದೇ ಆದ ಕರ್ನಾಟಕ ಮಕ್ಕಳ ಪಕ್ಷ ಸ್ಥಾಪಿಸಿದ ಅಶೋಕ್ ಖೇಣಿ 2013ರಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ, ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದರು.

2013ರ ಚುನಾವಣೆಯಲ್ಲಿ ಕರ್ನಾಟಕ ಮಕ್ಕಳ ಪಕ್ಷದಿಂದ ಸ್ಪರ್ಧಿಸಿದ ಅಶೋಕ್ ಖೇಣಿ 47,763 ಮತಗಳನ್ನು ಪಡೆದು ಜೆಡಿಎಸ್‌ನ ಬಂಡೆಪ್ಪ ಖಾಶೆಂಪೂರ್ ಅವರ ವಿರುದ್ಧ 15,788 ಮತಗಳ ಅಂತರದಿಂದ ಗೆಲುವು ಸಾಧಿಸಿದರು. 2018ರ ವಿಧಾನಸಭಾ ಚುನಾವಣೆಗೂ ಮುನ್ನ ಅಶೋಕ್ ಖೇಣಿ ಕಾಂಗ್ರೆಸ್ ಪಕ್ಷ ಸೇರಿದರು. ಭಾರೀ ವಿರೋಧದ ನಡುವೆಯೇ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡ ಅಶೋಕ್ ಖೇಣಿ ಮತ್ತೊಮ್ಮೆ ಬೀದರ್ ದಕ್ಷಿಣದಿಂದ ಸ್ಪರ್ಧಿಸಿದರು. ಆದರೆ, 2018ರಲ್ಲಿ ಜೆಡಿಎಸ್‌ನ ಬಂಡೆಪ್ಪ ಖಾಶೆಂಪೂರ್ ವಿರುದ್ಧ ಸೋತು ಮೂರನೇ ಸ್ಥಾನಕ್ಕೆ ಖೇಣಿ ತೃಪ್ತಿಪಟ್ಟುಕೊಳ್ಳಬೇಕಾಯಿತು.
2023ರ ಚುನಾವಣೆಗೆ ಮತ್ತೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದಿರುವ ಅಶೋಕ್ ಖೇಣಿ ಚುನಾವಣೆಗೆ ತಯಾರಿ ನಡೆಸಿದ್ದು, ಬಂಡೆಪ್ಪ ಖಾಶೆಂಪೂರ್ ಮತ್ತು ಶೈಲೆಂದ್ರ ಬೆಲ್ದಾಳೆ ಫೈಟ್ ನಡುವೆ ಗೆದ್ದು ಮತ್ತೊಂದು ಸಲ ವಿಧಾನಸಭೆ ಪ್ರವೇಶಿಸ್ತಿರಾ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಫಿಕ್ಸ್!
ಚುನಾವಣಾ ದಿನಾಂಕ ಘೋಷಣೆ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ 10ರಂದು ಚುನಾವಣಾ ದಿನಾಂಕ ಘೋಷಣೆಯಾಗಿದ್ದು 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 13ರಂದು ಅಧಿಸೂಚನೆ, ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾಗಿರುತ್ತದೆ. ಇನ್ನೂ ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications