ಬಾಗಲಕೋಟೆ ಅಥವಾ ವಿಜಯಪುರದಿಂದ ಸ್ಪರ್ಧೆ ಖಚಿತ : ಯಡಿಯೂರಪ್ಪ
ಕಲಬುರಗಿ, ಸೆಪ್ಟೆಂಬರ್ 18: ಕ್ಷೇತ್ರ ಬದಲಾವಣೆಯ ಗಾಳಿ ಸುದ್ದಿಗಳಿಗೆ ಯಡಿಯೂರಪ್ಪ ಅಧಿಕೃತ ಮುದ್ರೆ ಒತ್ತಿದ್ದಾರೆ.
"ಕಾರ್ಯಕರ್ತರು ವಿಜಯಪುರ ಅಥವಾ ಬಾಗಲಕೋಟೆಯಿಂದ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ಜತೆಗೆ ಹೈಕಮಾಂಡ್ ಕೂಡಾ ಕ್ಷೇತ್ರ ಬದಲಾವಣೆಗೆ ಸೂಚಿಸಿದೆ. ಹೀಗಾಗಿ ಈ ಬಾರಿ ವಿಜಯಪುರ ಅಥವಾ ಬಾಗಲಕೋಟೆಯಿಂದ ಸ್ಪರ್ಧಿಸುತ್ತೇನೆ," ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಖಚಿತಪಡಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಸವಾಲೆಸೆದರು. "ನನ್ನ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರಮೇಶ ಜಾರಕಿಹೊಳಿ ಯಾರು ಬೇಕಾದರೂ ಸ್ಪರ್ಧಿಸಬಹುದು," ಎಂದರು.

4-5 ದಿನದಲ್ಲಿ ದಾಖಲೆ ಬಿಡುಗಡೆ
ಕಳೆದ ಹಲವು ದಿನಗಳಿಂದ ದಾಖಲೆ ಬಿಡುಗಡೆಯ ಜಪ ಮಾಡುತ್ತಿರುವ ಯಡಿಯೂರಪ್ಪ, ಇನ್ನು 4-5 ದಿನಗಳೊಳಗೆ ಸಿದ್ದರಾಮಯ್ಯ ಆಪ್ತರು, ಕುಟುಂಬ ಸದಸ್ಯರು, ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಪುನರುಚ್ಛರಿಸಿದ್ದಾರೆ.
ಕೆಲವು ದಾಖಲೆಗಳು ಸಿಗುವುದು ತಡವಾಗಿದ್ದರಿಂದ ಬಿಡುಗಡೆ ಮುಂದೂಡಿಕೆಯಾಗಿತ್ತು. ಆದರೆ ಈಗ ಎಲ್ಲಾ ದಾಖಲೆಗಳು ಸಂಗ್ರಹವಾಗಿವೆ ಎಂದು ಅವರು ಹೇಳಿದ್ದಾರೆ.

ನ. 1 ರಂದು ಮೋದಿ ಬೆಂಗಳೂರಿಗೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ನವೆಂಬರ್ 1ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಬಿಜೆಪಿ ಪಕ್ಷದ 'ವಿಧಾನಸಭಾ ಕ್ಷೇತ್ರದೆಡೆಗೆ ನಮ್ಮ ನಡಿಗೆ' ಕಾರ್ಯಕ್ರಮಕ್ಕೆ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿ ಪ್ರಚಾರದ ನೀಲನಕ್ಷೆ
ರಾಜ್ಯ ಸರಕಾರದ ನೀರಾವರಿ ಯೋಜನೆಗಳ ವೈಫಲ್ಯ ಖಂಡಿಸಿ ಸೆಪ್ಟೆಂಬರ್ 20ರಂದು ಕೊಪ್ಪಳ, 23ರಂದು ವಿಜಯಪುರದಲ್ಲಿ ಹೋರಾಟ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಸೆಪ್ಟೆಂಬರ್ 22ರಂದು ಬೀಳಗಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಬೃಹತ್ ಸಮಾವೇಶ, ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಗುವುದು ಎಂದು ಅವರು ಕಾರ್ಯಕ್ರಮಗಳ ವಿವರ ನೀಡಿದ್ದಾರೆ.

ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ
ಎಂದಿನಂತೆ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಯುತ್ತಿರುವುದರಿಂದ ಸಿದ್ದರಾಮಯ್ಯ ಕೂಡಲೇ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯಬೇಕು ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪನವರ ಜತೆ ಬಿಜೆಪಿ ನಾಯಕರು ಇದೇ ವೇಳೆ ಉಪಸ್ಥಿತರಿದ್ದರು.












Click it and Unblock the Notifications