'ಶಿವಮೊಗ್ಗ ಹರ್ಷನ ಮನೆಗೆ ಡಿಕೆಶಿ, ಸಿದ್ದು ಹೋಗಿದ್ರೆ ಹೊಡೆತ ತಿಂತಾ ಇದ್ರು'
ಕಲಬುರಗಿ, ಮಾರ್ಚ್ 5: ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷನ ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಥವಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹೋಗಿದ್ದರೆ ಹೊಡೆತ ತಿನ್ನುತ್ತಿದ್ದರು ಎಂದು ಹಿರಿಯ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅಭಿಪ್ರಾಯ ಪಟ್ಟಿದ್ದಾರೆ.
"ಹರ್ಷನ ತಂಗಿ ಏನು ಹೇಳಿದಳು? ಹಿಂದೂ ಮುಸ್ಲಿಂ ಎಂದು ನನ್ನ ತಮ್ಮನ ಬಲಿಯಾಯಿತು. ನಾನು ಕೂಡಾ ಏನು ಹೇಳಿದ್ದೆ, ಅಲ್ಲಿ ಸತ್ತಿದ್ದು ಹಿಂದೂ ಮುಸ್ಲಿಂ ಅಲ್ಲ, ಅಲ್ಲಿ ಸತ್ತಿದ್ದು ಮಾನವೀಯತೆ ಎಂದು ಹೇಳಿದ್ದೆ. ಶಿವಮೊಗ್ಗ ಜಿಲ್ಲಾಧ್ಯಕ್ಷರು ಹರ್ಷನ ಮನೆಗೆ ಭೇಟಿ ನೀಡಿದ್ದರು"ಎಂದು ಇಬ್ರಾಹಿಂ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಇಬ್ರಾಹಿಂ, "ಕಾಂಗ್ರೆಸ್ಸಿಗೆ ಅವರ ಮನೆಗೆ ಹೋಗಲು ಹೆದರಿಕೆ, ಮುಸ್ಲಿಂ ಮನೆಗೆ ಹೋದರೆ ಹಿಂದೂ ಮತದಾರ, ಹಿಂದೂ ಮನೆಗೆ ಹೋದರೆ ಮುಸ್ಲಿಂ ಮತ ಬೀಳುವುದಿಲ್ಲವೋ ಎನ್ನುವ ಭಯ ಕಾಂಗ್ರೆಸ್ಸಿನವರಿಗೆ"ಎಂದು ಲೇವಡಿ ಮಾಡಿದರು.

"ನಾನು ಒಬ್ಬನೇ ಇಲ್ಲಿ ಹರಹರ ಮಹಾದೇವ ಅಂದು ಕಾಂಗ್ರೆಸ್ಸಿನಲ್ಲಿ ಇರುವುದು, ನಮಗೆ ವೋಟು ಮತ್ತು ಕುರ್ಚಿಯ ಚಿಂತೆಯಿಲ್ಲ. ಪ್ರಮೋದ್ ಮುತಾಲಿಕ್ ಒಳ್ಳೆಯ ಮಾತನಾಡಿದರೆ ಅವರನ್ನೂ ಗೌರವಿಸುತ್ತೇನೆ"ಎಂದು ಇಬ್ರಾಹಿಂ ಹೇಳಿದರು.
"ಆರ್ ಎಸ್ ಎಸ್ ಕಂಡರೆ ನನಗೆ ಅಲರ್ಜಿಯಿಲ್ಲ, ಲಿಂಗಾಯತ ಸಮುದಾಯದ ಹುಡುಗ ಇಪ್ಪತ್ತು ವರ್ಷ ನನ್ನ ಮನೆಯಲ್ಲಿ ಅಡುಗೆ ಮಾಡಿಕೊಂಡಿದ್ದ. ಸ್ವಾಮೀಜಿಗಳು ಮನೆಗೆ ಬಂದರೆ ಮಡಿಯಲ್ಲಿ ಅಡುಗೆ ಮಾಡಲು, ಪೂಜೆ ಮಾಡಲು ನನ್ನ ಮನೆಯಲ್ಲಿ ಅವಕಾಶವಿದೆ. ಯಾಕೆಂದರೆ ಆ ಸಂಸ್ಕೃತಿಯಲ್ಲಿ ಬೆಳೆದವನು ನಾನು"ಎಂದು ಇಬ್ರಾಹಿಂ ಹೇಳಿದರು.
"ಬ್ರಾಹ್ಮಣರು ಎಷ್ಟೋ ಜನ ನನ್ನ ಜೊತೆಯಲ್ಲಿದ್ದಾರೆ, ಎಷ್ಟೋ ಜನ ಭಿಕ್ಷೆ ಬೇಡುವವರೂ ಇದ್ದಾರೆ. ಹಾಗಾಗಿ ಒಳ್ಳೆಯವರು ಮತ್ತು ಕೆಟ್ಟವರಿಗೆ ಜಾತಿಯಿಲ್ಲ"ಎಂದು ಸಿ.ಎಂ.ಇಬ್ರಾಹಿಂ ಪ್ರತಿಪಾದಿಸಿದರು.












Click it and Unblock the Notifications